ಕನ್ನಡಪ್ರಭ ವಾರ್ತೆ ಬೆಳಗಾವಿ

ದೇಶದ ಸಾಂವಿಧಾನಿಕ ಸಂಸ್ಥೆಗಳು, ಸಂವಿಧಾನದ ಆಶಯಗಳು ಹಾಗೂ ಕೋಟ್ಯಂತರ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ರಾಜಕೀಯ ಹಾಗೂ ಆರ್ಥಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಸಚಿನ್ ಸಾವಂತ್ ಆರೋಪಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಲೂಟಿ ಪ್ರಕರಣದಿಂದಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪಾಪಿಯಿಂದ ಮಹಾಪಾಪಿ ಸ್ಥಾನಕೆ ಹೋಗಿವೆ. ಇವರ ಒಂದೊಂದು ಹಗರಣಗಳು ಈಗ ಬಯಲಿಗೆ ಬರುತ್ತಿವೆ. ಮುಂದೆ ಅಮೆರಿಕದಲ್ಲಿ ತೀವ್ರ ವಿವಾದಕ್ಕೀಡಾಗಿರುವ ಎಫ್‌ಸ್ಟಿನ್‌ ಪ್ರಕರಣದ ಕಡತದಲ್ಲಿ ಏನಿದೆ ಎಂಬ ಸತ್ಯ ಶೀಘ್ರದಲ್ಲೇ ದೇಶದ ಜನರ ಮುಂದೆ ಬರಲಿದೆ. ಈ ಎಫಿಸ್ಟನ್ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ಮಾಡಿಕೊಳ್ಳುತ್ತಿರುವ ರಹಸ್ಯ ವ್ಯಾಪಾರ ಒಪ್ಪಂದಗಳಿಂದಾಗಿ ನಮ್ಮ ದೇಶದ ರೈತರು, ಸಾಮಾನ್ಯ ಬಡವರು ಹಾಗೂ ಮಧ್ಯಮ ವರ್ಗದ ಜನರನ್ನು ವ್ಯವಸ್ಥಿತವಾಗಿ ಲೂಟಿ ಮಾಡಲಾಗುತ್ತಿದೆ. ಈ ಒಪ್ಪಂದಗಳು ದೇಶದ ಜನಸಾಮಾನ್ಯರ ಮೇಲೆ ಭೀಕರ ಆರ್ಥಿಕ ಹೊರೆ ಹೇರಲಿವೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಮ ಜನ್ಮಭೂಮಿ ಟ್ರಸ್ಟ್‌ನಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಟ್ರಸ್ಟ್ ಅನ್ನು ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಿಷ್ಠರಿಂದಲೇ ತುಂಬಲಾಗಿದೆ. ರಾಮ ಮಂದಿರ ಟ್ರಸ್ಟ್ ರಚನೆ ಮತ್ತು ಅದರ ಮೇಲ್ವಿಚಾರಣೆ ಪ್ರಧಾನಿ ಕಚೇರಿಯ ಅಡಿಯಲ್ಲೇ ನಡೆದಿರುವುದರಿಂದ, ಈ ಹಗರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಕ್ಷಣ ದೇಶಕ್ಕೆ ಉತ್ತರಿಸಬೇಕು. ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆಯಾಗಬೇಕು. ಪ್ರಸ್ತುತ ಟ್ರಸ್ಟ್‌ ರದ್ದುಗೊಳಿಸಿ ರಾಜಕೀಯೇತರ ಸಂಘಟನೆಗಳ ಧಾರ್ಮಿಕ ಮುಖಂಡರನ್ನೊಳಗೊಂಡ ಹೊಸ ಸ್ವತಂತ್ರ ಟ್ರಸ್ಟ್ ರಚಿಸಬೇಕು ಎಂದು ಆಗ್ರಹಿಸಿದರು.

ಬೆಳಗಾವಿಯಲ್ಲಿ ನಡೆದ ಆರ್‌ಎಸ್‌ಎಸ್ ಸಭೆಯಲ್ಲಿ ರಾಮಮಂದಿರ ಹುಂಡಿ ಪ್ರಕರಣದ ಬಗ್ಗೆ ಆರ್‌ಎಸ್‌ಎಸ್ ಕೇವಲ ಆಘಾತ ಮಾತ್ರ ವ್ಯಕ್ತಪಡಿಸಿದೆ ಎಂದು ಕೇಳಲ್ಪಟ್ಟಿದ್ದೇವೆ. ಇದರಲ್ಲಿ ಇರುವ ಎಲ್ಲರೂ ಅವರ ಜನರೇ. ಹೀಗಿರುವಾಗ, ಆರ್‌ಎಸ್‌ಎಸ್ ತಮ್ಮವರಿಂದ ಆಗುವ ತಪ್ಪುಗಳನ್ನು ಮೊದಲಿನಿಂದ ಮುಚ್ಚಿಟ್ಟುಕೊಳ್ಳುವ ಕೆಲಸವನ್ನೇ ಮಾಡಿವೆ. ಇದಕ್ಕೆ ಗಾಂಧಿಜಿಗೆ ಗುಂಡಿಕ್ಕಿದ್ದ ನಾಥೂರಾಮ್ ಗೋಡ್ಸೆಯೇ ಉದಾಹರಣೆ. ಗೋಡ್ಸೆ ಸಹ ಆರ್‌ಎಸ್‌ಎಸ್ ಸ್ವಯಂ ಸೇವಕ ಎಂದೇ ಹೇಳಿಕೊಳ್ಳತ್ತಿದ್ದನು. ಇದನ್ನು ನೋಡಿದರೆ ದೇಶದಲ್ಲಿ ನಡೆಯುವ ಅನೇಕ ಪಾಪದ ಕೆಲಸಗಳಿಂದಲೇ ಆರ್‌ಎಸ್‌ಎಸ್ ಆರಂಭವಾಗಿದೆ ಎಂದು ಗಂಭೀರ ಆರೋಪ ಮಾಡಿದರು.----


ಕೋಟ್‌ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಧರ್ಮದ ಹೆಸರಿನಲ್ಲಿ ಜನರಿಗೆ ವಂಚಿಸುತ್ತಿದ್ದಾರೆ. ರಾಮಮಂದಿರದ ವಿಷಯದಲ್ಲಿ ಆರಂಭದಿಂದಲೂ ಮೋಸ ಮಾಡುತ್ತಲೇ ಬಂದಿದ್ದಾರೆ. ಕೇವಲ ₹ 2 ಕೋಟಿ ಮೌಲ್ಯದ ಜಮೀನನ್ನು ಟ್ರಸ್ಟ್‌ ಮೂಲಕ ಬರೋಬ್ಬರಿ ₹ 18 ಕೋಟಿಗೆ ಖರೀದಿಸಿ, ಸಾರ್ವಜನಿಕರ ದೇಣಿಗೆ ಹಣವನ್ನು ಲೂಟಿ ಮಾಡಲಾಗಿದೆ. ಭಕ್ತರು ನೀಡಿದ ಕೋಟ್ಯಂತರ ರೂಪಾಯಿ ಚಿನ್ನ, ಬೆಳ್ಳಿ ಮತ್ತು ನಗದು ದೇಣಿಗೆಯನ್ನು ದುರುಪಯೋಗಪಡಿಸಿಕೊಳ್ಳಲು, ಟ್ರಸ್ಟ್ ಕಚೇರಿಯಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಉದ್ದೇಶಪೂರ್ವಕವಾಗಿ ಬಂದ್ ಮಾಡಲಾಗಿತ್ತು ಎಂದು ಆಡಿಟರ್‌ಗಳೇ ಹೇಳಿದ್ದಾರೆ. ಹೀಗಾಗಿ, ಈಗ ಇಡೀ ಪ್ರಕರಣದಲ್ಲಿ ಫಾರೆನ್ಸಿಕ್ ಅಡಿಟ್ ಆಗಬೇಕು.ಸಚಿನ್ ಸಾವಂತ್, ಎಐಸಿಸಿ ಕಾರ್ಯದರ್ಶಿ