ಕಳಪೆ ದುರಸ್ತಿ ಕಾಮಗಾರಿಗೆ ಶಾಸಕ ಬಸವಂತಪ್ಪ ಗರಂ

| Published : Dec 09 2024, 12:46 AM IST

ಸಾರಾಂಶ

ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಿಗೆ ಡಾಂಬರು ಮೇಲ್ಮೇಲೆ ಸವರುವುದನ್ನು ಕಂಡು ಶಾಸಕ ಕೆ.ಎಸ್. ಬಸವಂತಪ್ಪ ಗರಂ ಆದರು. ತಾಲೂಕಿನ ಹೆಮ್ಮನಬೇತೂರು ಕ್ರಾಸ್‌ನಿಂದ ದಾವಣಗೆರೆ ನಗರ ಪ್ರವೇಶಿಸುವ ರಸ್ತೆಯವರೆಗೆ ಕೈಗೊಂಡಿರುವ ತಾತ್ಕಾಲಿಕ ಡಾಂಬರು ರಸ್ತೆ ದುರಸ್ತಿ ಕಾಮಗಾರಿ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಿಗೆ ಡಾಂಬರು ಮೇಲ್ಮೇಲೆ ಸವರುವುದನ್ನು ಕಂಡು ಶಾಸಕ ಕೆ.ಎಸ್. ಬಸವಂತಪ್ಪ ಗರಂ ಆದರು. ತಾಲೂಕಿನ ಹೆಮ್ಮನಬೇತೂರು ಕ್ರಾಸ್‌ನಿಂದ ದಾವಣಗೆರೆ ನಗರ ಪ್ರವೇಶಿಸುವ ರಸ್ತೆಯವರೆಗೆ ಕೈಗೊಂಡಿರುವ ತಾತ್ಕಾಲಿಕ ಡಾಂಬರು ರಸ್ತೆ ದುರಸ್ತಿ ಕಾಮಗಾರಿ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಗುತ್ತಿಗೆದಾರ ಮತ್ತು ಸಂಬಂಧಪಟ್ಟ ಎಂಜಿನಿಯರ್ ಇಬ್ಬರು ಸ್ಥಳದಲ್ಲಿ ಇರಲಿಲ್ಲ. ಕೆಲಸಗಾರರು ತಮಗೆ ತಿಳಿದಷ್ಟು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಡಾಂಬರು ಸವರುತ್ತಿದ್ದರು. ಇದನ್ನು ಕಂಡ ಶಾಸಕ ಕೆ.ಎಸ್. ಬಸವಂತಪ್ಪ ಕೆಲಸಗಾರರನ್ನು ತರಾಟೆಗೆ ತೆಗೆದುಕೊಂಡರು.ಗುತ್ತಿಗೆದಾರ ಮತ್ತು ಎಂಜಿನಿಯರ್ ಎಲ್ಲಿಗೆ ಹೋಗಿದ್ದಾರೆ? ನಿಮಗೆ ಎಷ್ಟು ಅಡಿ ಡಾಂಬರು ಹಾಕುವಂತೆ ತಿಳಿಸಿದ್ದಾರೆ. ನೀವು ರಸ್ತೆಯಲ್ಲಿ ಬಿದ್ದ ಗುಂಡಿಗಳಿಗೆ ಈ ರೀತಿ ಡಾಂಬರು ಹಾಕಿದರೆ ಕೆಲವೇ ನಿಮಿಷಗಳಲ್ಲಿ ಪುನಃ ಕಿತ್ತು ಕೈಗೆ ಬರುತ್ತದೆ. ನೀವು ಮಾಡುವ ಕೆಲಸ ಶಾಶ್ವತವಾಗಿ ಉಳಿಯಬೇಕು. ನೀವು ಮನಬಂದಂತೆ ಡಾಂಬರು ಹಾಕಿದರೆ ಎರಡ್ಮೂರು ವಾಹನಗಳು ಓಡಾಡಿದರೆ ಸಾಕು, ಡಾಂಬರು ಕಿತ್ತು ಪುನಃ ಗುಂಡಿಗಳು ಕಾಣುತ್ತವೆ. ಗುಣಮಟ್ಟ ರಸ್ತೆ ದುರಸ್ತಿ ಮಾಡಬೇಕು ಎಂದು ತಾಕೀತು ಮಾಡಿದರು.ಅಲ್ಲದೇ ಸಂಬಂಧಪಟ್ಟ ಎಂಜಿನಿಯರ್ ಸಂಪರ್ಕಿಸಿ, ನೀವು ಸ್ಥಳದಲ್ಲಿ ಇದ್ದು, ಡಾಂಬರು ರಸ್ತೆ ದುರಸ್ತಿ ಕಾಮಗಾರಿ ಮಾಡಿಸಬೇಕು. ಗುತ್ತಿಗೆದಾರನಿಗೆ ಹೇಳಿ ನೀವು ಸ್ಥಳಕ್ಕೆ ಬರದಿದ್ದರೆ, ಅವರು ತಿಳಿದಷ್ಟು ಡಾಂಬರು ಹಾಕಿ ಮನೆಗೆ ಕಡೆ ಹೋಗುತ್ತಾರೆ. ಈ ರೀತಿ ಮಾಡಿದರೆ ಸರ್ಕಾರದ ಹಣ ಪೋಲಾಗುತ್ತದೆ. ಪದೇ ಪದೇ ರಸ್ತೆ ದುರಸ್ತಿಗೆ ಎಲ್ಲಿಂದ ಹಣ ತರಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು.