ಸಾರಾಂಶ
ಗಾಂಧಿಪಾರ್ಕ್ ಬಳಿ ಹೆದ್ದಾರಿ ಕಾಮಗಾರಿಯ ಸಲುವಾಗಿ ಕಡಿಯಲಾದ ಸ್ಥಳದ ಸುರಕ್ಷತೆಗಾಗಿ ಕೋಟೆ ರಸ್ತೆಗೆ ತಡೆಗೋಡೆ ನಿರ್ಮಿಸಲು ಸೂಚಿಸಿದ ಶಾಸಕರು, ಹೆದ್ದಾರಿ ಕಾಮಗಾರಿಯನ್ನು ನಿಗದಿ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದರು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಳೆ ಸ್ಥಳೀಯ ವ್ಯವಸ್ಥೆಗೆ ಅನುಕೂಲವಾಗುವಂತೆ ಕಾಮಗಾರಿಯನ್ನು ನಡೆಸಬೇಕು. ಇತಿಹಾಸ ಪ್ರಸಿದ್ಧ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯಕ್ಕೆ ಹೆದ್ದಾರಿಯಿಂದ ಕಲ್ಪಿಸಲಾದ ಸಂಪರ್ಕ ರಸ್ತೆಯನ್ನು ಉಳಿಸಿಕೊಳ್ಳಬೇಕೆಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನಿರ್ದೇಶನ ನೀಡಿದರು.ಅವರು ಶನಿವಾರ ಉಪ್ಪಿನಂಗಡಿಯಲ್ಲಿ ಹೆದ್ದಾರಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದರು.
ಇಲ್ಲಿನ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸಮೀಪದಲ್ಲಿರುವ ಬ್ರಿಟಿಷರ ಕಾಲದ ಕುಮಾರಧಾರಾ ಸೇತುವೆಯ ಧಾರಣಾ ಸಾಮರ್ಥ್ಯ ಕುಸಿದಿರುವ ಕಾರಣ ಘನವಾಹನಗಳ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಬೇಕು. ಈ ಸೇತುವೆಯ ಸಮೀಪದ ಸ್ಥಳವನ್ನು ದೇವಾಲಯಕ್ಕೆ ಆಗಮಿಸುವವರ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಯೋಜನಾಬದ್ಧವಾಗಿ ಬಳಸಬೇಕೆಂದು ತಿಳಿಸಿದರು.ಗಾಂಧಿಪಾರ್ಕ್ ಬಳಿ ಹೆದ್ದಾರಿ ಕಾಮಗಾರಿಯ ಸಲುವಾಗಿ ಕಡಿಯಲಾದ ಸ್ಥಳದ ಸುರಕ್ಷತೆಗಾಗಿ ಕೋಟೆ ರಸ್ತೆಗೆ ತಡೆಗೋಡೆ ನಿರ್ಮಿಸಲು ಸೂಚಿಸಿದ ಶಾಸಕರು, ಹೆದ್ದಾರಿ ಕಾಮಗಾರಿಯನ್ನು ನಿಗದಿ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ನವೀನ್, ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯ ರಘುನಾಥ ರೆಡ್ಡಿ, ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್, ಸದಸ್ಯರಾದ ಸೋಮನಾಥ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ಪುತ್ತೂರು ಬ್ಲಾಕ್ ಕೃಷ್ಣ ಪ್ರಸಾದ್ ಆಳ್ವ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಮತ್ತು ಮುರಳೀಧರ ರೈ ಮೊದಲಾದವರು ಉಪಸ್ಥಿತರಿದ್ದರು.