ವಿಶೇಷಚೇತನರ ಆಶಾಕಿರಣ ಜೆಎಸ್‌ಎಸ್‌ ಪಾಲಿಟೆಕ್ನಿಕ್

| Published : Jan 19 2025, 02:17 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಬಳಿಕ ಮುಂದೇನು ಎಂದು ತಿಳಿಸದೇ ಸುಮ್ಮನಾಗುತ್ತಿರುವ ದೈಹಿಕ ಅಂಗವಿಕಲತೆ, ಶ್ರವಣದೋಷ, ಅಂಧತ್ವವುಳ್ಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿಯೇ ಇರುವ ಮೈಸೂರಿನ ಜೆಎಸ್‌ಎಸ್‌ ವಿಶೇಷಚೇತನರ ಪಾಲಿಟೆಕ್ನಿಕ್‌ನಲ್ಲಿ ಹಲವು ಸೌಲಭ್ಯಗಳಿವೆ ಎಂದು ಉಪಪ್ರಾಂಶುಪಾಲ ಎನ್.ಎಂ.ಶಿವಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಬಳಿಕ ಮುಂದೇನು ಎಂದು ತಿಳಿಸದೇ ಸುಮ್ಮನಾಗುತ್ತಿರುವ ದೈಹಿಕ ಅಂಗವಿಕಲತೆ, ಶ್ರವಣದೋಷ, ಅಂಧತ್ವವುಳ್ಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿಯೇ ಇರುವ ಮೈಸೂರಿನ ಜೆಎಸ್‌ಎಸ್‌ ವಿಶೇಷಚೇತನರ ಪಾಲಿಟೆಕ್ನಿಕ್‌ನಲ್ಲಿ ಹಲವು ಸೌಲಭ್ಯಗಳಿವೆ ಎಂದು ಉಪಪ್ರಾಂಶುಪಾಲ ಎನ್.ಎಂ.ಶಿವಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿರುವ ವಿಶೇಷಚೇತನರು ನಮ್ಮಲ್ಲಿ ಹಲವು ಕೋರ್ಸ್‌ಗಳನ್ನು ಮಾಡಿಕೊಂಡು ಭವಿಷ್ಯ ರೂಪಿಸಿಕೊಂಡಿದ್ದಾರೆ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿರುವ ವಿಶೇಷಚೇತನರಲ್ಲಿ 10ನೇ ತರಗತಿ ಪಾಸಾದವರಲ್ಲಿ ಬಹಳಷ್ಟು ಜನರು ಈ ವಿಶೇಷ ಕೋರ್ಸ್‌ಗಳಿಗೆ ಬರುತ್ತಿಲ್ಲ. ಆದ್ದರಿಂದ ಈ ಭಾಗಕ್ಕೂ ಅನುಕೂಲವಾಗಲೆಂದು ಈ ಭಾಗದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇನ್ನು ನಮ್ಮಲ್ಲಿ ಪ್ರವೇಶ ಪಡೆಯುವ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಸರ್ಕಾರ ಅಥವಾ ವಿವಿಧ ಸಂಘ ಸಂಸ್ಥೆಗಳಿಂದ ಪ್ರತಿ ವರ್ಷಕ್ಕೆ ತಲಾ ₹50 ಸಾವಿರ ಸ್ಕಾಲರ್‌ಶಿಪ್ ಕೊಡಲಾಗುತ್ತಿದೆ. ಅಲ್ಲದೆ ಈ ವರ್ಷ ವಿಶೇಷ ಚೇತನ ವಿದ್ಯಾರ್ಥಿಗಳಿಗಾಗಿ ಬಿಇ ಕೋರ್ಸ್ ಕೂಡ ಆರಂಭವಾಗಲಿದ್ದು, ವಿಶೇಷಚೇತನರು ಪ್ರಯೋಜನ ಪಡೆಯಬೇಕು ಎಂದರು.

ಉಪನ್ಯಾಸಕ ರಘು.ಎಂ.ಬಿ ಮಾತನಾಡಿ, ಜೆಎಸ್‌ಎಸ್‌ ಪಾಲಿಟೆಕ್ನಿಕ್‌ನಲ್ಲಿ ಈಗಾಗಲೇ 8 ಕೋರ್ಸ್‌ಗಳಿವೆ. 2025-26 ರಿಂದ ಇನ್ನೆರಡು ಹೊಸ ಕೋರ್ಸ್‌ಗಳು ಬರಲಿವೆ. ಇಲ್ಲಿರುವ ಎಲ್ಲ ಕೋರ್ಸ್‌ಗಳ ಅವಧಿ 3 ವರ್ಷದ್ದಾಗಿದ್ದು, ಅವುಗಳು ಆರು ಸೆಮೆಸ್ಟರ್‌ಗಳನ್ನು ಹೊಂದಿವೆ. ಜೆಎಸ್‌ಎಸ್‌ ವಿಶೇಷಚೇತನರ ಪಾಲಿಟೆಕ್ನಿಕ್‌ನಲ್ಲಿ ಪ್ರವೇಶ ಪಡೆಯಲು ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆಯಾಗಿರಬೇಕು. ಕನಿಷ್ಠ ಶೇ.40ರಷ್ಟು ಅದಕ್ಕಿಂತ ಮೇಲ್ಪಟ್ಟು ಮೂಳೆ ಮತ್ತು ಕೀಲು ಅಂಗವಿಕಲತೆ ಇರಬೇಕು. ಶೇ.60 ಡಿಬಿ ಅಥವಾ ಅದಕ್ಕಿಂತ ಮೇಲ್ಪಟ್ಟು ಕಿವುಡು ಮತ್ತು ಮೂಗು ಅಂಗವಿಕಲತೆ ಹೊಂದಿರಬೇಕು. 6-60 ಅಥವಾ 20-200 ಸ್ನೇಲೇನ್‌ ಭಾಗಶಃ ಮತ್ತು ಪೂರ್ಣ ಅಂಧತ್ವ ಮಕ್ಕಳು ಇರಬೇಕು ಎಂಬ ನಿಯಮಗಳಿವೆ ಎಂದು ತಿಳಿಸಿದರು.

ಸಂಸ್ಥೆಯು ವಿಶೇಷಚೇತನರ ಬಳಕೆಗೆ ಸೂಕ್ತವಾದಂತಹ ಕಟ್ಟಡ ಹೊಂದಿದೆ. ಸುಸಜ್ಜಿತ ಕೊಠಡಿಗಳು, ಪ್ರಯೋಗಾಲಯಗಳು, ಅತ್ಯುತ್ತಮ ಗ್ರಂಥಾಲಯ, ಆರೋಗ್ಯಕೇಂದ್ರ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ. ಪ್ರಸ್ತುತವಾಗಿ ಜೆಎಸ್‌ಎಸ್‌ ಪಾಲಿಟೆಕ್ನಿಕ್ ನಲ್ಲಿ 906 ವಿಶೇಷಚೇತನ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಅಲ್ಲದೆ ಇದುವರೆಗೂ 3 ಸಾವಿರ ವಿದ್ಯಾರ್ಥಿಗಳು ಡಿಪ್ಲೊಮಾ ಪದವಿ ಪಡೆದು ಭವಿಷ್ಯ ರೂಪಿಸಿಕೊಂಡು ಸ್ವತಂತ್ರವಾಗಿ ಬದುಕುತ್ತಿದ್ದಾರೆ ಎಂದರು.

ಉಪನ್ಯಾಸಕ ಡಾ.ಪಳನಿಸ್ವಾಮಿ ಮಾತನಾಡಿ, 1991-92ರಲ್ಲಿ ಆರಂಭವಾದ ಈ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ವಿಶ್ವವಿದ್ಯಾನಿಲಯದ ವರೆಗೆ ಕಲಿಯಲು ಅವಕಾಶವಿದೆ. ಇಲ್ಲಿ ಸಾಮಾನ್ಯ ಮಕ್ಕಳ ಶಿಕ್ಷಣದ ಜತೆಗೆ 10ನೇ ತರಗತಿ ಪಾಸಾದ ವಿಶೇಷಚೇತನ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮತ್ತು ಅವರು ಭವಿಷ್ಯಕ್ಕಾಗಿ ಎಲ್ಲ ರೀತಿಯ ಅನುಕೂಲಗಳನ್ನು ಕಲ್ಪಿಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ವಿಶೇಷಚೇತನರು ಇದರ ಸದುಪಯೋಗ ಪಡೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಧಾರವಾಡದಲ್ಲಿಯೂ ಅಭ್ಯಾಸ ಕೇಂದ್ರವನ್ನು ತೆಗೆಯಲು ಸಂಸ್ಥೆ ಯೋಚಿಸುತ್ತಿದೆ ಎಂದರು.

ಗೋಷ್ಠಿಯಲ್ಲಿ ಸಂಸ್ಥೆಯ ಮಾರ್ಗದರ್ಶಕ ಮಹಾದೇವಪ್ಪ ಸ್ವಾಮಿ ಉಪಸ್ಥಿತರಿದ್ದರು.