ಕನ್ನಡಪ್ರಭವಾರ್ತೆ ಚಳ್ಳಕೆರೆ

ತಾಲೂಕಿನ ಮೀರಾಸಾಬಿಹಳ್ಳಿಯ ರಾಣೀಕೆರೆಯಿಂದ ಕೆಳಭಾಗದ ಮೂರು ಚೆಕ್ ಡ್ಯಾಂಗಳಿಗೆ ಜನ-ಜಾನುವಾರುಗಳ ಕುಡಿಯುವ ನೀರಿನ ಅನುಕೂಲಕ್ಕೆ ನೀರು ಬಿಡಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಅಚ್ಚುಕಟ್ಟು ಪ್ರದೇಶದ ಜನರ ನಡುವೆ ಉಂಟಾಗಿದ್ದು ಭಿನ್ನಾಭಿಪ್ರಾಯ ಶುಕ್ರವಾರ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗೊಂದಲಕ್ಕೆ ತೆರೆ ಎಳೆದು ಒಮ್ಮತದ ತೀರ್ಮಾನಕ್ಕೆ ಬರಲಾಯಿತು.

ಮುಂಗಾರು ಮಳೆ ಪ್ರಸಕ್ತ ವರ್ಷದಲ್ಲಿ ವಾಡಿಕೆಗಿಂತ ಕಡಿಮೆ ಆಗಿರುವುದರಿಂದ ಸಹಜವಾಗಿಯೇ ಕುಡಿಯುವ ನೀರಿಗೂ ತತ್ವಾರ ಪಡುವಂತಾಗಿದೆ. ಅದರಲ್ಲೂ ಅತಿ ಕಡಿಮೆ ಮಳೆ ಬೀಳುವ ಚಳ್ಳಕೆರೆ ತಾಲೂಕಿನಲ್ಲಿ ಬರದ ಕಾರ್ಮೋಡ ಬಂದು ಮನೆ ಬಾಗಿಲಿಗೆ ನಿಂತಂತಹ ಅನುಭವವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನ ಜಾನುವಾರುಗಳ ಕುಡಿಯುವ ಬವಣೆ ನಿವಾರಣೆಗಾಗಿ ರಾಣೀಕೆರೆ ಕೆಳ ಭಾಗದಲ್ಲಿ ಇರುವ ಗರಣಿಹಳ್ಳದ ಚೆಕ್ ಡ್ಯಾಂಗಳಿಗೆ ನೀರು ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಪೂರಕನಾಲೆ ಹೋರಾಟಗಾರರು ಮನವಿ ಸಲ್ಲಿಸಿದ್ದರು.ಇಂತಹ ಮನವಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸಣ್ಣ ನೀರಾವರಿ ಇಲಾಖೆಯ ಮಾಹಿತಿ ಪಡೆದು ಮೂರು ಚೆಕ್ ಡ್ಯಾಂಗಳಿಗೆ ನೀರು ಹರಿಸುವಂತೆ ಆದೇಶವನ್ನೂ ಮಾಡಿದ್ದರು.

ಇಂತಹ ಆದೇಶದ ಕುರಿತು ಮಾಹಿತಿ ನೀಡಲು ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಈಚೆಗೆ ಚಳ್ಳಕೆರೆಯಲ್ಲಿ ಸಭೆ ಕರೆದಾಗ ಅಚ್ಚುಕಟ್ಟು ಪ್ರದೇಶದ ಮೇಲ್ಭಾಗದ ಭರಮಸಾಗರ, ಬೊಮ್ಮಸಮುದ್ರ ಗ್ರಾಮದ ಜನರು ಕೆಳಭಾಗದ ಚೆಕ್ ಡ್ಯಾಂಗಳಿಗೆ ನೀರು ಹರಿಸಲು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಶಾಸಕರ ನೇತೃತ್ವದಲ್ಲಿ ಅಚ್ಚುಕಟ್ಟು ಪ್ರದೇಶದ ಜನರ ಸಭೆ ಕರೆಯಲಾಗಿತ್ತು.

ಈ ಸಂದರ್ಭದಲ್ಲಿ ಕೆರೆ ಬಳಕೆದಾರರನ್ನು ಉದ್ಧೇಶಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಮೈಸೂರಿನ ಮಹಾರಾಜರು ಈ ಭಾಗದ ಜನರ ಹಿತದೃಷ್ಟಿಯಿಂದ ರಾಣೀಕೆರೆ ನಿರ್ಮಾಣ ಮಾಡಿದ್ದಾರೆ. ಇಲ್ಲಿನ ನೀರನ್ನು ಈ ಭಾಗದ ಅಚ್ಚುಕಟ್ಟುದಾರರು ಉಪಯೋಗಿಸುವ ಹಕ್ಕಿದೆ. ಈಗಾಗಲೇ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಈಗಿರುವ ನೀರಿನ ಪ್ರಮಾಣದಲ್ಲಿ ಒಂದೂವರೆ ಅಡಿಯಷ್ಟು ರಂಗವ್ವನಹಳ್ಳಿ, ವಿಡುಪನಕುಂಟೆ, ವಿಶ್ವೇಶ್ವರ ಪುರ, ಕರೀಕೆರೆ ಭಾಗದ ಚೆಕ್ ಡ್ಯಾಂ ಸೇರಿದಂತೆ ಇನ್ನೂ ಎರಡು ಚೆಕ್ ಡ್ಯಾಂ ಗೆ ನೀರು ಹರಿಸಿದರೆ, ಆ ಭಾಗದ ಜನರಿಗೆ ಅನುಕೂಲವಾಗಲಿದೆ. ಹಂಚಿಕೊಂಡು ತಿನ್ನಬೇಕಾದ ನಾವುಗಳೇ ವಿರೋಧಿಸಿದರೆ ಹೇಗೆ? ಇರುವ ನೀರಿನ ಪ್ರಮಾಣ ಆಧರಿಸಿ ಅವರಿಗೂ ಬಿಡುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಮನವೊಲಿಸಿದರು.


ತೂಬು ಎತ್ತಿ ಅನೇಕ ವರ್ಷಗಳೇ ಕಳೆದಿರುವುದರಿಂದ ನೀರು ಹರಿಸುವಾಗ ವಿನಾಕಾರಣ ನೀರು ಪೋಲಾಗುವ ಆತಂಕವನ್ನು ಕೆಲ ರೈತರು ವ್ಯಕ್ತಪಡಿಸಿದಾಗ ಮುಳುಗು ತಜ್ಞರನ್ನು ಕರೆಸಿ ತೂಬೆತ್ತುವ ಕೊರಡು ಪರೀಕ್ಷೆ ಮಾಡಿಸಬೇಕು ಎಂದು ಶಾಸಕ ರಘುಮೂರ್ತಿ ಸಣ್ಣನೀರಾವರಿ ಇಲಾಖೆ ಎಂಜಿನಿಯರ್ ಗೆ ಸೂಚಿಸಿದರು.

ಈ ವಾರದಲ್ಲಿ ಸಣ್ಣ ನೀರಾವರಿ ಸಚಿವರು ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಿಸಲು ಬರುವುದರಿಂದ ಇನ್ನೇನು ಕೆಲವೇ ತಿಂಗಳುಗಳಲ್ಲಿ ಭದ್ರಾ ನೀರು ಹರಿಯಲಿದೆ. ತಾಲೂಕಿಗೆ ಇದರಿಂದಾಗಿ ಅನುಕೂಲವಾಗಲಿದೆ ಎಂದು ಹೇಳಿದರು.

ಕೆಲವೇ ತಿಂಗಳ ನಂತರ ಚಿತ್ರದುರ್ಗ ಜಿಲ್ಲೆಯ ಗೋನೂರಿನ ಕೆರೆಗೆ ಭದ್ರಾ ನೀರು ಹರಿಯಲಿದ್ದು, ಇದರಿಂದ ರಾಣೀಕೆರೆಗೂ ಅನುಕೂಲವಾಗಲಿದೆ. ಅಲ್ಪಸ್ವಲ್ಪ ಕಾಮಗಾರಿ ಬಾಕಿ ಇದ್ದು ಸುಮಾರು 11.50 ಸಾವಿರ ಕೋಟಿ ರು. ವೆಚ್ಚದಲ್ಲಿ ಅದನ್ನು ಪೂರೈಸಿದರೆ ಈ ಭಾಗದ ಜನರಿಗೆ ನೀರಿನ ಸೌಲಭ್ಯ ದೊರಕಿಸಿದಂತಾಗುತ್ತದೆ. ಆದ್ದರಿಂದ, ರಾಣೀಕೆರೆ ಕೆಳಭಾಗದ ಜನರಿಗೆ ಒಂದೂವರೆ ಅಡಿ ನೀರು ಹರಿಸಿದರೆ ಮೂರು ಹಾಗೂ ಹೊಸ ಚೆಕ್‍ಡ್ಯಾಂ ಭರ್ತಿಯಾದರೆ ಆ ಭಾಗದ ರೈತರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ನೀಡಿದ ಪುಣ್ಯದೊರೆಯುತ್ತದೆ ಎಂದು ವಿವರಿಸಿದರು.

ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕೆ.ಎಂ.ಕೃಷ್ಣ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ವಿಭಾಗದ ಈಗಾಗಲೇ ಎರಡ್ಮೂರು ಸಭೆ ನಡೆಸಿ ತೂಬು ಎತ್ತುವ ವಿಚಾರದಲ್ಲಿ ಸಾರ್ವಜನಿಕರಿಂದ ಮಾಹಿತಿ ಪಡೆಯಲಾಗಿದೆ. ಯಾವುದೇ ಕಾರಣಕ್ಕೂ ರಾಣೀಕೆರೆಯ ನೀರು ಪೋಲಾಗದಂತೆ ಇಲಾಖೆ ಎಚ್ಚರಿಕೆ ವಹಿಸಲಿದೆ.

ರೈತರು ಆತಂಕ ಪಡುವುದು ಬೇಡ. ರಾಣೀಕೆರೆಯ ಬಲತೂಬಿನಿಂದ ನೀರು ಬಿಡಲಾಗುವುದು. ಮೀರಸಾಬಿಹಳ್ಳಿ, ಕರೀಕೆರೆ, ವಿಡಪನಕುಂಟೆ, ರಂಗವ್ವನಹಳ್ಳಿ, ವಿಶ್ವೇಶ್ವರಪುರ, ದೊಡ್ಡೇರಿ ವ್ಯಾಪ್ತಿಯ ಬೊಮ್ಮಸಮುದ್ರ, ಭರಮಸಾಗರ ವ್ಯಾಪ್ತಿಯ 891 ಹೆಕ್ಟೇರ್ ಅಚ್ಚು ಪ್ರದೇಶವನ್ನು ಹೊಂದಿದ್ದು, ಕೆರೆ ಎರಡೂ ತೂಬುಗಳನ್ನು ಪರಿಶೀಲನೆ ನಡೆಸಲಾಗಿದೆ. ಇನ್ನೊಮ್ಮೆ ಮುಳುಗು ತಜ್ಞರನ್ನು ಕರೆಸಿ ಪರೀಕ್ಷಿಸಲಾಗುವುದು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಕಾಂತರಾಜ್, ತಹಶೀಲ್ದಾರ್ ರೇಹಾನ್‍ಪಾಷ, ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ರವಿಕುಮಾರ್ ಅಚ್ಚುಕಟ್ಟು ಪ್ರದೇಶದ ಜನರು ಉಪಸ್ಥಿತರಿದ್ದರು.ರಾಣೀಕೆರೆ ಮೈಸೂರು ಅರಸರ ಕಾಲದಲ್ಲಿ ಈ ಭಾಗದ ಜನರ ಹಿತದೃಷ್ಟಿಯಿಂದ ಕಟ್ಟಲಾದ ಕೆರೆ. ಈ ಭಾಗದ ಜನರ ಜೀವನಾಡಿ. ಅಂತರ್ಜಲ ಹೆಚ್ಚಳ ಸೇರಿದಂತೆ, ಮೀನುಗಾರಿಕೆಗೆ ಸಹಕಾರಿ. ಕೆಳಭಾಗದ ಜನರಿಗೆ ಜಾನುವಾರುಗಳ ಕುಡಿವ ನೀರಿನ ಬವಣೆ ನೀಗಿಸಲು ನೀರು ಹರಿಸುವುದು ನ್ಯಾಯ ಸಮ್ಮತ. ಈ ನೀರನ್ನು ಬಳಸಲು ಎಲ್ಲರಿಗೂ ಹಕ್ಕಿದೆ. ಈಗಿರುವ 16.50 ಅಡಿ ನೀರಿನಲ್ಲಿ ಗರಣಿಹಳ್ಳ ಸೇರಿದಂತೆ ಶಾಸಕರೇ ನಿರ್ಮಿಸಿರುವ ಚೆಕ್ ಡ್ಯಾಂಗಳಿಗೆ ನೀರು ಹರಿಸಿದರೆ ಐದಾರು ಹಳ್ಳಿಗಳಿಗೆ ಅನುಕೂಲವಾಗಲಿದೆ. ಕೆರೆಯ ನೀರಿನ ವಿಚಾರ ಸುಖಾಂತ್ಯಗೊಂಡಿದ್ದು ಸಂತಸ ತಂದಿದೆ.

-ಡಾ.ಸಿ.ಶಿವಲಿಂಗಪ್ಪ, ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷರು ಮೀರಾಸಾಬಿಹಳ್ಳಿ