ಕನ್ನಡಪ್ರಭ ವಾರ್ತೆ ಆಲೂರು

ಮುಸ್ಲಿಂ ಧರ್ಮಗುರುಗಳಿಗೆ ಅವಮಾನ ಆರೋಪದ ಮೇಲೆ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಅವರನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಶುಕ್ರವಾರ ಬೆಳಿಗ್ಗೆ ಆಲೂರು ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಬ೦ಧಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಮುಸ್ಲಿಂ ಧರ್ಮಗುರುಗಳಿಗೆ ಅವಮಾನ ಮಾಡಿದ್ದಾರೆ ಎಂದು ಅಬ್ದುಲ್ ರಜಾಕ್ ಎಂಬವರು ಪುನೀತ್ ಕೆರೆಹಳ್ಳಿ ಅವರ ಮೇಲೆ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ, ಆಲೂರು ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿರುವ ಪುನೀತ್ ಅವರ ವಾಸದ ಮೇಲೆ ಪೊಲೀಸರು ದಾಳಿ ಮಾಡಿ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಬಂಧನದ ವೇಳೆ ಸರ್ಕಾರದ ವಿರುದ್ಧ ಅವರು ಕಿಡಿಕಾರಿ ಮಾತನಾಡಿದ ಅವ ಪುನೀತ್ ಕೆರೆಹಳ್ಳಿ , ನಾನು ಈಗಾಗಲೇ ಅಬ್ದುಲ್ ರಜಾಕ್ ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದೆ ಆದರೆ ಪೊಲೀಸರು ಅವನನ್ನು ಬಂಧಿಸದೆ ನನ್ನನ್ನು ಬಂಧಿಸುತ್ತಿರುವುದು ಯಾವ ನ್ಯಾಯ ಸರ್ಕಾರ ಮುಸ್ಲಿಮರ ಪರವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಸತ್ಯದ ವಿರುದ್ಧ ಹಾಗೂ ಗೋವುಗಳ ರಕ್ಷಣೆಗೆ ಪಣತೊಟ್ಟು ನಿಂತಿರುವ ನನ್ನನ್ನು ಬಂಧಿಸಲೇಬೇಕು ಎಂಬುದು ಇವರ ನಿರ್ಧಾರವಾಗಿದೆ ಇದಕ್ಕೆಲ್ಲಾ ನಾನು ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುನೀತ್ ಕೆರೆಹಳ್ಳಿ ಅವರ ಬಂಧನದ ವೇಳೆ ಅವರ ತಾಯಿ ಶಿವಮ್ಮ ಅವರು ಕಣ್ಣೀರಿಟ್ಟು, ಮಗನನ್ನ ಬಂಧಿಸಬೇಡಿ ಎಂದು ಪೊಲೀಸರನ್ನು ಅಂಗಲಾಚಿದ ಬೇಡಿಕೊಂಡರು.===ಫೋಟೋ ಕ್ಯಾಪ್ಶನ್ :

ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಅವರನ್ನು ಆಲೂರು ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದರು.