ಸಾರಾಂಶ
ಈ ಬ್ಯಾರಿಕೇಡ್ ಅಳವಡಿಕೆಯಿಂದಾಗಿ ಸಿಟಿ ಬಸ್ ಸ್ಟ್ಯಾಂಡ್ ಬಳಿ ಮತ್ತು ಕುಂಜಿಬೆಟ್ಟು ಬಳಿಯ ಯೂ ಟರ್ನ್‌ಗಳಲ್ಲಿ ಕೃತಕ ವಾಹನ ದಟ್ಟಣೆ ಉಂಟಾಗಿ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶ್ರೀ ಕೃಷ್ಣ ಮಠ, ಕಡಿಯಾಳಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಹಾಗೂ ಸ್ಥಳೀಯ ವ್ಯಾಪಾರಸ್ಥರಿಗೆ ತೊಂದರೆ ಉಂಟಾಗುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ನಗರಸಭಾ ವ್ಯಾಪ್ತಿಯ ಕಲ್ಸಂಕ ಜಂಕ್ಷನ್ ಬಳಿ ಕಳೆದ ಡಿಸೆಂಬರ್‌ನಲ್ಲಿ ಪ್ರವಾಸಿಗರ ವಾಹನದ ದಟ್ಟಣೆಯನ್ನು ಮನಗಂಡು ಸುಗಮ ಸಂಚಾರಕ್ಕಾಗಿ ತಾತ್ಕಾಲಿಕ ನೆಲೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಪ್ರಸ್ತುತ ವಾಹನದ ದಟ್ಟಣೆಯು ಕಡಿಮೆಯಿದ್ದು, ಈ ಬ್ಯಾರಿಕೇಡ್‌ಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯನ್ನು ಆಗ್ರಹಿಸಿದ್ದಾರೆ.ಈ ಬ್ಯಾರಿಕೇಡ್ ಅಳವಡಿಕೆಯಿಂದಾಗಿ ಸಿಟಿ ಬಸ್ ಸ್ಟ್ಯಾಂಡ್ ಬಳಿ ಮತ್ತು ಕುಂಜಿಬೆಟ್ಟು ಬಳಿಯ ಯೂ ಟರ್ನ್‌ಗಳಲ್ಲಿ ಕೃತಕ ವಾಹನ ದಟ್ಟಣೆ ಉಂಟಾಗಿ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶ್ರೀ ಕೃಷ್ಣ ಮಠ, ಕಡಿಯಾಳಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಹಾಗೂ ಸ್ಥಳೀಯ ವ್ಯಾಪಾರಸ್ಥರಿಗೆ ತೊಂದರೆ ಉಂಟಾಗುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದ ಬಳಿಯಿಂದ ಮಣಿಪಾಲಕ್ಕೆ ತೆರಳುವ ವಾಹನಗಳು ಕಡಿಯಾಳಿ ಬಳಿ ಯೂ ಟರ್ನ್ ತೆಗದುಕೊಳ್ಳುತ್ತಿರುವುದರಿಂದ ಕಡಿಯಾಳಿ ಬಳಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಶಾರದಾ ಮಂಟಪದ ಕಡೆಯಿಂದ ಬಂದ ಹಲವಾರು ವಾಹನಗಳು ಬಲಕ್ಕೆ ತಿರುಗಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿರುವುದರಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಹಾಗೂ ಶಾರದ ಕಲ್ಯಾಣ ಮಂಟಪದ ತಿರುವಿನಲ್ಲಿ ಡಿವೈಡರ್ ತೆರವುಗೊಳಿಸುವ ಅಗತ್ಯತೆಯಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಲ್ಸಂಕ ಜಂಕ್ಷನ್ ಬಳಿ ಬ್ಯಾರಿಕೇಡ್ ಅಳವಡಿಸುವುದನ್ನು ತಕ್ಷಣ ಸ್ಥಗಿತಗೊಳಿಸಿ ಮತ್ತು ಶಾರದ ಕಲ್ಯಾಣ ಮಂಟಪದ ತಿರುವಿನಲ್ಲಿ ಡಿವೈಡರ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.