ಕನ್ನಡಪ್ರಭ ವಾರ್ತೆ ವಿಜಯಪುರ

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಸೋಮವಾರ ನಗರದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಒ) ಅಗತ್ಯ ಮಾಹಿತಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆಯಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬೂತ್ ನಂ.70ರ ಬಿಎಲ್ಒ, ಮೇಲ್ವಿಚಾರಕರು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಮ್ಮುಖದಲ್ಲಿ ಮಾತನಾಡಿದ ಅವರು, ಕೆಲವು ದಿನಗಳಿಂದ ಬಿಎಲ್ಒ ಗಳಿಗೆ ಕೆಲವರಿಂದ ಬೆದರಿಕೆ ಹಾಗೂ ಒತ್ತಡದ ಕರೆಗಳು ಬರುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಯಾರೂ ಯಾರ ಒತ್ತಡಕ್ಕೆ, ಬೆದರಿಕೆಗೆ ಮಣಿಯದೇ ಚುನಾವಣೆ ಅಧಿಕಾರಿಗಳ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಲು ತಿಳಿಸಿದರು.

ನಗರದ ಎಲ್ಲ ಮತದಾರರು ಬಿ.ಎಲ್.ಒ ಗಳು ನೀಡಿದ ಅರ್ಜಿ ಪಾರ್ಮ್ ಗಳನ್ನು ಮೊದಲು ಝರಾಕ್ಷ್ ಪ್ರತಿಯಲ್ಲಿ ತುಂಬಿ, ಬಿ.ಎಲ್.ಒ ಗಳಿಗೆ ತೋರಿಸಿ ನಂತರ ಮೂಲ ಪ್ರತಿ (ಓರಿಜನಲ್ ಫಾರ್ಮ್) ಯಲ್ಲಿ ತುಂಬಿ ಬಿಎಲ್ಒಗಳಿಗೆ ಕೊಟ್ಟು ಸಹಕಾರ ನೀಡಬೇಕು. ಬಿಎಲ್ಒಗಳು ಸಹ ಮನೆ ಮನೆಗೆ ಹೋಗಿ ಸಮಾಧಾನದಿಂದ ತಪ್ಪಾಗದ ರೀತಿಯಲ್ಲಿ ಫಾರ್ಮ್ ತುಂಬಿಸಿ ಅಶಿಕ್ಷಿತ, ಕಾರ್ಮಿಕ ವರ್ಗ, ಬಡ ಕೂಲಿ ಕಾರ್ಮಿಕರಿಗೂ ಸಹಕಾರ ನೀಡಿ, ಪರಸ್ಪರ ಸಹಾಯ ಸಹಕಾರ ದಿಂದ ನಿಗದಿತ ಸಮಯದೊಳಗೆ (ಜುಲೈ 29) ಎಸ್.ಐ.ಆರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಲಹೆ ನೀಡಿದರು.

ಈಗಾಗಲೇ ಸುತ್ತಮುತ್ತಲಿನ ಕಾಖಂಡಕಿ, ತಿಕೋಟಾ, ಜುಮನಾಳ, ಶಿವಣಗಿ ಇತ್ಯಾದಿಗಳಿಂದ ಅಲ್ಪಸಂಖ್ಯಾತರ ಮತಗಳು ನಗರ ಪ್ರದೇಶದಲ್ಲಿ ಸೇರ್ಪಡೆಯಾಗಿವೆ ಎಂಬ ಆರೋಪವಿದ್ದು, ಇವುಗಳನ್ನು ಸಹ ರೇಶನ್ ಪಡೆಯಲು, ಸೊಸಾಯಿಟಿ ಸಾಲಕ್ಕಾಗಿ ತಮ್ಮ ಮೂಲ ವಾಸಸ್ಥಾನ ಗ್ರಾಮಗಳಲ್ಲಿಯೇ ಉಳಿಸುವುದು ಅವಶ್ಯವಾಗಿದೆ. ನಗರ ಪ್ರದೇಶದಿಂದ ರದ್ದುಗೊಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇದು ಮ್ಯಾಪಿಂಗ್ ಸಮಯದಲ್ಲಿಯೂ ಗುರುತಿಸಲಾಗಿದೆ ಎಂದು ತಿಳಿಸಿದರು.


ಅನೇಕ ಅಲ್ಪಸಂಖ್ಯಾತರ ಮತಗಳು ನಗರದ ವಿವಿಧ ವಾರ್ಡ್‌ಗಳಲ್ಲಿ 2-3 ಕಡೆ ಇರುವುದು ಗಮನಕ್ಕೆ ಬಂದಿದ್ದು, ಒಂದೇ ಕಡೆ ಇಟ್ಟು ಉಳಿದ ಕಡೆ ಡಿಲೀಟ್ ಮಾಡಲಾಗುತ್ತದೆ. ಸಾವಿರಾರು ಮತದಾರರು ಸಾವನ್ನಪ್ಪಿದ್ದು, ಇದರಿಂದ ಮತದಾರ ಪಟ್ಟಿಯ ಬುಕ್ ಹೊರೆಯಾಗಿತ್ತು. ಇವುಗಳನ್ನು ಡಿಲೀಟ್ ಮಾಡಲಾಗುತ್ತದೆ. ಅಕ್ರಮ ಬಾಂಗ್ಲಾದೇಶಿ ಮತಗಳನ್ನು ಗುರ್ತಿಸಲು ಸೂಚಿಸಲಾಗಿದೆ ಎಂದರು.

ಕೆಲವರು ಎಸ್.ಐ.ಆರ್ ಗೆ ಅಂಜಿ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಮುಖಂಡರು ನನ್ನ ವಿರುದ್ಧ ಹಾಕಿದ ಕೇಸ್ ನಲ್ಲಿ ಹೈಕೋರ್ಟ್, ಸುಪ್ರೀಂಕೋರ್ಟ್ ನಲ್ಲಿ ಸೋತು, ಲಕ್ಷಕ್ಕೂ ಅಧಿಕ ದಂಡ ತುಂಬಿ ಇಂಗು ತಿಂದ ಮಂಗನಂತೆ, ಹುಚ್ಚನಂತೆ ಬಿಎಲ್ಒ ಗಳಿಗೆ ಫೋನ್ ಮಾಡಿ ಹೆದರಿಸುತ್ತಿರುವುದನ್ನು ಅನೇಕ ಬಿಎಲ್ಒಗಳು ನನ್ನ ಗಮನಕ್ಕೆ ತಂದಿದ್ದು, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವ ಇಂತವರ ವಿರುದ್ಧ ತಕ್ಷಣ ಕಾಯ್ದೆ ಪ್ರಕಾರ ಕೇಸ್ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಬಿಎಲ್ಒಗಳು ಸೇರಿ ಇತರೆ ಅಧಿಕಾರಿಗಳಿದ್ದರು.

ಕೆಲವು ಗೂಂಡಾಗಳು ಪ್ರದೇಶ ಮತ್ತು ಬೂತ್‌ಗಳು ಸಂಬಂಧವಿಲ್ಲದಿದ್ದರೂ ಸಹ ಬಿ.ಎಲ್.ಎ-2 ಎಂದು ಹೇಳಿಕೊಂಡು ಪ್ರತಿ ಬೂತ್‌ಗಳಿಗೆ ಭೇಟಿ ನೀಡಿ ಬಿಎಲ್ಒಗಳಿಗೆ ದಬ್ಬಾಳಿಕೆ ಮಾಡಿ ತಮ್ಮ ಲೀಡರ್ ಮಾತಾಡುತ್ತಾರೆ ಎಂದು ಫೋನ್ ಹಚ್ಚಿ ಕೊಟ್ಟು ಒತ್ತಡ ಹೇರುತ್ತಿರುವುದನ್ನು ನಾನು ಸಹಿಸುವುದಿಲ್ಲ. ಯಾರಾದರೂ ಹೊರಗಿನವರು ಬಂದಲ್ಲಿ ಮೊಬೈಲ್ ನಲ್ಲಿ ಫೋಟೋ ತೆಗೆದು ಕಳಿಸಿದರೆ ಮತ್ತು ಬಿಎಲ್ಒ ಗಳ ಮೇಲೆ ಒತ್ತಡ ಹೇರುವುದು, ದಬ್ಬಾಳಿಕೆ ಮಾಡಿ ಸಮಯ ಹಾಳು ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಬಿಎಲ್ಒಗಳು ಸೇರಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಧಿಕಾರಿಗಳು, ನಾಗರಿಕರು ಹೆದರದೇ ನಿಷ್ಠೆಯಿಂದ ಕಾರ್ಯನಿರ್ವಹಿಸಿ.

- ಬಸನಗೌಡ ಪಾಟೀಲ ಯತ್ನಾಳ ಶಾಸಕರು ವಿಜಯಪುರ