ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಮೊಬೈಲ್‌ಗಳ ಹಾವಳಿಯಿಂದ ವಿದ್ಯಾರ್ಥಿಗಳು ಇತ್ತೀಚಿಗೆ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಆಸಕ್ತಿ ತೋರದಿರುವುದು ನಿಜಕ್ಕೂ ಆತಂಕದ ಬೆಳವಣಿಗೆಯಾಗಿದ್ದು ವಿದ್ಯಾಭ್ಯಾಸದ ದಿನಗಳಲ್ಲಿ ಮೊಬೈಲ್ ಬಳಕೆ ಮಾಡದೇ ಪುಸ್ತಕ ಓದುವತ್ತ ಮುಖ ಮಾಡಬೇಕೆಂದು ನ್ಯಾಯಾಧೀಶರಾದ ಟಿ.ಕೆ.ಪ್ರಿಯಾಂಕ ತಿಳಿಸಿದರು.ಪಟ್ಟಣದ ಗುರು ಭವನದಲ್ಲಿ ಮಂಗಳವಾರ ಪೊಲೀಸ್ ಇಲಾಖೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯಿಂದ ಏರ್ಪಡಿಸಿದ್ದ ‘ನಮ್ಮ ನಡೆ ಜಾಗೃತಿಯ ಕಡೆ’ ಎನ್ನುವ ಮೂರು ದಿನಗಳ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪಟ್ಟಣದಲ್ಲಿ ಮೂರು ದಿನಗಳ ಕಾಲ ನಡೆವ ಈ ಜಾಗೃತಿ ಕಾರ್ಯಕ್ರಮವು ವಿನೂತನವಾಗಿದೆ. ಶಿಕ್ಷಣ ಇಲಾಖೆಯ ಬಿಇಒ ತಮ್ಮ ಶಾಲೆಗಳ ವಿದ್ಯಾರ್ಥಿಗಳನ್ನು ಪ್ರತಿ ದಿನವೂ ಕರೆತಂದು ಸಂಭವನೀಯ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಬೇಕು ಇದರ ಜತೆಗೆ ಪೋಲಿಸ್ ಇಲಾಖೆ ಸೇವೆಯನ್ನು ಅರಿತುಕೊಳ್ಳುವಂತೆ ಮಾಡಬೇಕು ಎಂದರು.
ಸಿಪಿಐ ವಸಂತ್ ವಿ.ಅಸೋದೆ ಮಾತನಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರ ಕನಸಿನ ಕೂಸಾಗಿರುವ ಈ ಜಾಗೃತಿ ಕಾರ್ಯಕ್ರಮದಲ್ಲಿ ಸೈಬರ್ ಕ್ರೈಂ, ಬಾಲ್ಯವಿವಾಹ, ಮಹಿಳಾ ದೌರ್ಜನ್ಯಗಳೂ ಸೇರಿದಂತೆ ಇನ್ನಿತರ ಅಪರಾಧಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಈ ಅಪರಾಧಗಳಿಗೆ ಕಾನೂನಿನಲ್ಲಿ ನೀಡಬಹುದಾದ ಶಿಕ್ಷೆಗಳನ್ನು ವಿವರಣೆ ಹಾಗೂ ಘಟನೆಗಳ ಮೂಲಕ ತಿಳಿಸಲಾಗುತ್ತದೆ. ಸಾರ್ವಜನಿಕರು, ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.ಜಿಲ್ಲಾ ಪೋಲಿಸ್, ಮೊಳಕಾಲ್ಮುರು ಪೋಲಿಸ್ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ ಜಾಗೃತಿ ಕಾರ್ಯಕ್ರಮದಲ್ಲಿ ಸೈಬರ್ ಪೋಲಿಸ್ ಠಾಣೆ, ಶ್ವಾನ ದಳ, ಮಹಿಳಾ ಪೊಲೀಸ್ ಠಾಣೆ, ಜಿಲ್ಲಾ ಶಸಸ್ತ್ರ ಪಡೆ, ಸಂಚಾರಿ ಪೊಲೀಸ್ ಠಾಣೆ ಸೇರಿ ವಿವಿಧ ವಿಭಾಗದ ಪೋಲಿಸ್ ಠಾಣೆಯ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಿಇಎನ್ ಠಾಣೆ ಪೊಲೀಸ್ ನಿರೀಕ್ಷಕ ವೆಂಕಟೇಶ್ ರೆಡ್ಡಿ, ಪಿಎಸ್‌ಐಗಳಾದ ಮಹೇಶ್ ಲಕ್ಷ್ಮಣ್ ಹೊಸಪೇಟೆ, ಬಾಹುಬಲಿ, ಸಿಪಿಐ ಶಿವರಾಜ್, ವಕೀಲರ ಸಂಘದ ಅಧ್ಯಕ್ಷ ಪಿ.ಜಿ.ವಸಂತ್ ಕುಮಾರ್, ಉಪಾಧ್ಯಕ್ಷ ಶಿವಣ್ಣ, ಕಾರ್ಯದರ್ಶ ಸಹಾಯಕ ಸರಕಾರಿ ಅಭಿಯೋಜಕ ಮೊಹಮ್ಮದ್ ಶಂಷೇರ್ ಅಲಿ, ವಕೀಲರಾದ ಎ.ಕೆ.ತಿಮ್ಮಪ್ಪ, ಮಂಜುನಾಥ್, ಪಾಪಯ್ಯ ಇದ್ದರು.
ಸಾಮಾಜಿಕ ಜಾಲತಾಣಗಳ ಕುರಿತು ಜಾಗೃತಿ:
ವಾಟ್ಸಾಪ್, ಫೇಸ್‌ಬುಕ್ ಮೂಲಕ ನಕಲಿ ಖಾತೆಗಳನ್ನು ಸೃಷ್ಟಿಸಿ ಮೋಸ ಮಾಡುವುದು, ಡೀಪ್ ಪೇಕ್ ಸೃಷ್ಟಿಸುವುದು, ಸಂಚಾರಿ ನಿಯಮಗಳ, ಬಾಲ ಕಾರ್ಮಿಕತೆ, ಬಾಲ್ಯ ವಿವಾಹ, ಮೊಬೈಲ್ ನಲ್ಲಿ ಏಕಾಂತದ ಪೋಟೋಗಳು ಕ್ಲಿಕ್ಕಿಸಿಕೊಂಡು ಬ್ಲಾಕ್ ಮೇಲ್ ಮಾಡುವುದು, ಸಾಮಾಜಿಕ ಜಾಲ ತಾಣಗಳಿಗೆ ಹರಿಬಿಡುವ ಬೆದರಿಕೆ, ಬ್ಯಾಂಕ್ ಖಾತೆಗಳ ಕುರಿತು ಓಟಿಪಿ ಪಡೆದು ಹಣ ದೋಚುವುದು. ಅಪರಿಚಿತ ಪೈಲ್, ಮೊಬೈಲ್ ಹ್ಯಾಕ್, ಮಾದಕ ವಸ್ತು, ಸಂಚಾರ ಸುರಕ್ಷತೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಯ ಕುರಿತು ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸಿದರು.