ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮುಂಬರುವ ದಿನಗಳಲ್ಲಿ ಅಂಗವೈಕಲ್ಯ ತಡೆಗಟ್ಟುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ವೈದ್ಯಕೀಯ ಉಪಕರಣಗಳಿಂದ ಕೂಸು ಹುಟ್ಟುವ ಮುನ್ನವೇ ಕೂಸಿನ ನೂನ್ಯತೆ ಕಂಡು ಹಿಡಿದು, ಸೂಕ್ತ ಚಿಕಿತ್ಸೆ ನೀಡುವ ತಾಂತ್ರಿಕತೆ ಪರಿಣಾಮಕಾರಿಯಾಗಿ ಬಳಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜನೆ ಹಾಕಿಕೊಡಿದೆ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ತಿಳಿಸಿದರು.ತಾಲೂಕಿನ ವಡ್ಡಿನಹಳ್ಳಿ ಗ್ರಾಮದಲ್ಲಿ ಸುಮಾರು 25 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ದಿವ್ಯಾಂಗ ವ್ಯಕ್ತಿಗಳ ಕೌಶಲ್ಯಾಭಿವೃದ್ಧಿ ಪುನರ್ವಸತಿ ಸಬಲೀಕರಣ ಸಂಯುಕ್ತ ಪ್ರಾದೇಶಿಕ ಕೇಂದ್ರವನ್ನು ಸಾಮಾಜಿಕ ನ್ಯಾಯ, ಸಬಲೀಕರಣ ಕೇಂದ್ರ ಸಚಿವ ಡಾ.ವೀರೇಂದ್ರಕುಮಾರ ವರ್ಚ್ಯುವಲ್ ಮೂಲಕ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ದೇಶದ ಎಲ್ಲ ರಾಜ್ಯಗಳಿಗೂ ಒಂದರಂತೆ ಸಿಆರ್‌ಸಿ ಕೇಂದ್ರ ಆರಂಭಿಸಿದ್ದು, ಕರ್ನಾಟಕ-ಗೋವಾ ರಾಜ್ಯಗಳಿಗೆಂದೇ ಸಿಆರ್‌ಸಿ ಕೇಂದ್ರವನ್ನು ದಾವಣಗೆರೆಯಲ್ಲಿ ಆರಂಭಿಸಿದ್ದು ಜನರ ಪುಣ್ಯ ಎಂದರು. ಒಂದು ವರ್ಷದಲ್ಲಿ 25 ಕೋಟಿ ವೆಚ್ಚದಲ್ಲಿ ಸಿಆರ್‌ಸಿ ಕೇಂದ್ರ ನಿರ್ಮಾಣವಾಗಿ, ಉದ್ಘಾಟನೆಯಾಗುತ್ತಿದೆ. ಇಲ್ಲಿನ ಸಿಆರ್‌ಸಿ ಕೇಂದ್ರದಲ್ಲಿ ಅಂಗವಿಕಲತೆಯನ್ನು ಮೊದಲೇ ಪತ್ತೆ ಹಚ್ಚುವ ತಂತ್ರಜ್ಞಾನದ ವ್ಯವಸ್ಥೆ ಕಲ್ಪಿಸಲು ಕೇಂದ್ರದ ಅನುಮತಿಯೂ ದೊರೆತಿದೆ. ಬಾಕಿ ಜಾಗ ಬಳಸಿಕೊಂಡು ಸಿಆರ್‌ಸಿ ಕೇಂದ್ರ ಪೂರ್ಣ ಪ್ರಮಾಣದಲ್ಲಿ ನಿರ್ಮಿಸಲಾಗುವುದು. ಸಮೀಪದ ಕೊಗ್ಗನೂರು ಬಳಿ 7.23 ಎಕರೆ ಜಾಗದಲ್ಲಿ ದಿವ್ಯಾಂಗರಿಗೆ ಕ್ರೀಡಾ ಸಮುಚ್ಛಯ ನಿರ್ಮಿಸುವ ಉದ್ದೇಶವಿದೆ. ಈಗಾಗಲೇ ಕೇಂದ್ರ ಸಚಿವರ ಗಮನಕ್ಕೂ ತಂದಿದ್ದೇನೆ ಎಂದು ಅವರು ಹೇಳಿದರು.
ಬಹು ಚಿಕಿತ್ಸಕ ಈಜುಕೊಳ, ದಿವ್ಯಾಂಗರು ಬಳಸುವ ಸಹಾಯಕ ಸಾಧನಗಳ ಉತ್ಪಾದನಾ ಘಟಕ ಸ್ಥಾಪಿಸುವ ಆಲೋಚನೆ ಇದೆ. 2ನೇ ಹಂತದಲ್ಲಿ ಅಲ್ಪಾವಧಿ ಮತ್ತು ದೀರ್ಘಾ ವಧಿ ಕೋರ್ಸ್ ಮಾಡುವ ವಿದ್ಯಾರ್ಥಿಗಳು, ವಿಶೇಷ ಚೇತನರ ವಸತಿಗಾಗಿ 100 ಹಾಸಿಗೆಗಳ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗುವುದು. ಪವರ್ ಗ್ರಿಡ್ ಕಾರ್ಪೋರೇಷನ್‌ನಿಂದ ದಾವಣಗೆರೆ ಸಿಆರ್‌ಸಿ ಕೇಂದ್ರಕ್ಕೆ ಸಿಎಸ್‌ಆರ್ ನಿಧಿಯಡಿ 14 ಲಕ್ಷ ರು. ವೆಚ್ಚದ ಮಿನಿ ಬಸ್ ಒದಗಿಸಲಾಗಿದೆ. ಇಲ್ಲಿಗೆ ಬರುವ ದಿವ್ಯಾಂಗರ ಅನುಕೂಲಕ್ಕೆ ಸಾರಿಗೆ ಬಸ್ಸು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.ಕೇಂದ್ರದ ನೋಡೆಲ್ ಅಧಿಕಾರಿ ಗಣೇಶ ಶೇರಗಾರ ಮಾತನಾಡಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ದಿವ್ಯಾಂಗರ ಚಿಕಿತ್ಸೆ, ಪುನರ್ವಸತಿಗಾಗಿ ಸಂಯುಕ್ತ ಪ್ರಾದೇಶಿಕ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗಿದೆ. 9 ಎಕರೆ ಸರ್ಕಾರಿ ಜಾಗದಲ್ಲಿ 25 ಕೋಟಿ ವೆಚ್ಚದಲ್ಲಿ ಸಿಆರ್‌ಸಿ ಕಟ್ಟಡ ನಿರ್ಮಿಸಲಾಗಿದೆ. ವಡ್ಡಿನಹಳ್ಳಿ ಬಳಿ 9 ಎಕರೆ ಹಾಗೂ ಕೊಗ್ಗನೂರು ಬಳಿ 7.23 ಎಕರೆ ಸೇರಿ ಒಟ್ಟು 16.23 ಎಕರೆ ಜಮೀನು ನೀಡಲಾಗಿದೆ. ಕರ್ನಾಟಕ-ಗೋವಾ ರಾಜ್ಯಗಳಿಗೆ ಸೇರಿದ ವಿಶೇಷ ಚೇತನರಿಗೆ ಸೇವೆ ಒದಗಿಸುವ ಕೆಲಸ ಸಿಆರ್‌ಸಿಯದ್ದಾಗಿದೆ ಎಂದರು.
ದಾವಣಗೆರೆಯಲ್ಲಿ 2017ರಲ್ಲಿ ಸಿಆರ್‌ಸಿ ಕಾರ್ಯಾರಂಭಿಸಿದೆ. ಈವರೆಗೆ ಸುಮಾರು 38,552 ಜನರಿಗೆ ಅಲ್ಪಾವಧಿ ತರಬೇತಿ ನೀಡಿದೆ. ಈವರೆಗೆ 7 ಸಾವಿರಕ್ಕೂ ಅಧಿಕ ದಿವ್ಯಾಂಗರು ವಿಶೇಷ ತರಬೇತಿಗೆ ನೋಂದಾಯಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ 3212 ಜನರಿಗೆ ವ್ಹೀಲ್ ಚೇರ್, ಶ್ರವಣಯಂತ್ರ ವಿತರಿಸಲಾಗಿದೆ. 2019ರಿಂದ ದಾವಣಗೆರೆ ಸಿಆರ್‌ಸಿ ಕೇಂದ್ರ 2 ಡಿಪ್ಲೋಮಾ ಕೋರ್ಸ್ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಸಿಆರ್‌ಸಿ ಕೇಂದ್ರವು ದಿವ್ಯಾಂಗರಿಗೆ ವರವಾಗಿ ಪರಿಣಮಿಸಲಿದೆ ಎಂದು ಅವರು ಹೇಳಿದರು.ಮಾಜಿ ಶಾಸಕ ಪ್ರೊ.ಎನ್.ಲಿಂಗಣ್ಣ, ಉಪ ಮೇಯರ್ ಯಶೋಧ ಯೋಗೇಶ, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ಓಬಿಸಿ ಮೋರ್ಚಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಅಣಬೇರು ಜೀವನಮೂರ್ತಿ, ಮಾಜಿ ಮೇಯರ್ ಎಸ್.ಟಿ.ವೀರೇಶ, ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಗ್ರಾಪಂ ಅಧ್ಯಕ್ಷೆ ಪ್ರಭಾವತಿ, ಉಪಾಧ್ಯಕ್ಷ ನಾಗರಾಜ, ಗಂಗಾಧರ, ಕೆ.ಎಂ.ವೀರೇಶ, ವೀಣಾ, ಭಾಗ್ಯ ಪಿಸಾಳೆ, ನೋಡಲ್ ಅಧಿಕಾರಿ ಕನಕ ಸಭಾಪತಿ ಇತರರು ಇದ್ದರು.ಭಾರತ್ ಬ್ರಾಂಡ್ ಅಕ್ಕಿ ಕಳಪೆ ಎನ್ನಲು ಮುನಿಯಪ್ಪ ಯಾರು?: ಸಂಸದ ಕಿಡಿ
ದಾವಣಗೆರೆ: ಕೇಂದ್ರ ಸರ್ಕಾರದ ಭಾರತ್ ಬ್ರಾಂಡ್ ಅಕ್ಕಿ ಕಳಪೆಯೆಂದು ಟೀಕಿಸಲು ಸಚಿವ ಕೆ.ಎಚ್.ಮುನಿಯಪ್ಪ ಯಾರು? ಕೇಂದ್ರವನ್ನು ಹೀಯಾಳಿಸುವುದೇ ವಿಪಕ್ಷದವರ ಕೆಲಸವಾಗಿದೆ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಹರಿಹಾಯ್ದಿದ್ದಾರೆ.ತಾಲೂಕಿನ ವಡ್ಡಿನಹಳ್ಳಿ ಗ್ರಾಮದಲ್ಲಿ 25 ಕೋಟಿ ವೆಚ್ಚದ ಸಿಆರ್‌ಸಿ ಕೇಂದ್ರ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಬ್ರಾಂಡ್ ಅಕ್ಕಿಯನ್ನು ಕಳಪೆ ಅಕ್ಕಿಯಾಗಿ ಹೇಗೆ ಕೊಡಲು ಬರುತ್ತದೆ ಎಂದು ಪ್ರಶ್ನಿಸಿದರು.ಭಾರತ್ ಅಕ್ಕಿ ಬಗ್ಗೆ ಟೀಕಿಸುತ್ತಿರುವ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ವಿಪಕ್ಷದವರಿಗೆ ಕೇಂದ್ರದ ಯೋಜನೆಗಳನ್ನು ಹೀಯಾಳಿಸುವುದೇ ವಿಪಕ್ಷದವರ ಕೆಲಸ. ಕಾಂಗ್ರೆಸಿಗರು ಕೊಡುತ್ತೇವೆ ಅಂದಿದ್ದ 10 ಕೆಜಿ ಉಚಿತ ಅಕ್ಕಿಯನ್ನೇ ಇನ್ನೂ ಜನರಿಗೆ ಕೊಟ್ಟಿಲ್ಲ. ಮೊದಲು ಅದನ್ನು ಕೊಡಲು ಹೇಳಿ. ಆ ನಂತರ ಭಾರತ್ ಅಕ್ಕಿ ಬಗ್ಗೆ ಮಾತನಾಡಲಿ ಎಂದು ಅವರು ಕಿಡಿಕಾರಿದರು.ಎಂಪಿ ಟಿಕೆಟ್ ನಂಗೇ ಸಿಗತ್ತೆ: ಸಿದ್ದೇಶ್ವರ
ದಾವಣಗೆರೆ: ನಾನು ಇದುವರೆಗೂ ಯಾರಿಗೂ ಟಿಕೆಟ್ ಕೇಳಿಲ್ಲ. ಅವರೇ ಕೊಡುತ್ತಾ ಬರುತ್ತಿದ್ದಾರೆ. ಇನ್ನು ಮುಂದೆಯೂ ಕೊಡುತ್ತಾರೆ. ಟಿಕೆಟ್ ನನಗೇ ಸಿಗುತ್ತದೆ. ಕ್ಷೇತ್ರದ ಜನರು ಸಹ ಆಶೀರ್ವಾದ ಮಾಡುತ್ತಾರೆ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.ಯಾರಿಗೆ ಟಿಕೆಟ್ ಕೊಟ್ಟರೂ ಪಕ್ಷದ ಪರವಾಗಿ ಕೆಲಸ ಮಾಡಲೇಬೇಕು. ಮಾಡುತ್ತೇನೆ. ಪಕ್ಷದ ವರಿಷ್ಟರ ತೀರ್ಮಾನಕ್ಕೆ ನಾನು ಬದ್ಧನಿದ್ದೇನೆ. ಇನ್ನು, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ನಾನು ಹೋಗಿದ್ದೆನೆಯೇ ಹೊರತು, ಟಿಕೆಟ್ ಕೇಳುವುದಕ್ಕೆ ಹೋಗಿರಲಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.ನನ್ನ ಮಗ ಯಾಕೆ ಅಭ್ಯರ್ಥಿ ಆಗಬಾರದು? : ರಾಜ್ಯದಲ್ಲಿ ಕೂಡ ತಲೆಮಾರುಗಳಿಂದ ರಾಜಕೀಯ ಮಾಡಿಕೊಂಡು ಬಂದವರು ಸಾಕಷ್ಟು ಜನ ಇದ್ದಾರೆ. ಜನರು ಆಶೀರ್ವಾದ ಮಾಡಿದರೆ ಗೆಲ್ಲುತ್ತೇವೆ ಎಂದರಲ್ಲದೆ, ನನ್ನ ಮಗನಿಗೆ ಟಿಕೆಟ್ ಸಿಗುವುದು ಭಗವಂತನ ಇಚ್ಛೆ. ನನ್ನ ಮಗನಿಗೆ ಮಾತ್ರವಲ್ಲದೇ, ಯಾರಿಗೆ ಟಿಕೆಟ್ ಕೊಟ್ಟರೂ ಒಪ್ಪಿಗೆ ಇದೆ ಎಂದು ಅವರು ಹೇಳಿದರು.