ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ತಮ್ಮ ಮಾಸಿಕ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಕಾಫಿ ನಾಡು ಕರ್ನಾಟಕವನ್ನು ಹಾಡಿಹೊಗಳಿದ್ದಾರೆ. ಜತೆಗೆ, ರಾಜ್ಯದ ಮುಧೋಳ ತಳಿಯ ನಾಯಿಯನ್ನು ಇದೇ ಮೊದಲ ಬಾರಿ ಗಡಿ ಭದ್ರತಾ ಪಡೆಗೆ ಸೇರಿಸಿಕೊಂಡ ಬಗ್ಗೆಯೂ ಉಲ್ಲೇಖಿಸಿ, ದೇಸೀ ಶ್ವಾನಗಳ ಕ್ಷಮತೆಯನ್ನು ಶ್ಲಾಘಿಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ತಮ್ಮ ಮಾಸಿಕ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಕಾಫಿ ನಾಡು ಕರ್ನಾಟಕವನ್ನು ಹಾಡಿಹೊಗಳಿದ್ದಾರೆ. ಜತೆಗೆ, ರಾಜ್ಯದ ಮುಧೋಳ ತಳಿಯ ನಾಯಿಯನ್ನು ಇದೇ ಮೊದಲ ಬಾರಿ ಗಡಿ ಭದ್ರತಾ ಪಡೆಗೆ ಸೇರಿಸಿಕೊಂಡ ಬಗ್ಗೆಯೂ ಉಲ್ಲೇಖಿಸಿ, ದೇಸೀ ಶ್ವಾನಗಳ ಕ್ಷಮತೆಯನ್ನು ಶ್ಲಾಘಿಸಿದ್ದಾರೆ.

‘ಭಾರತದ ಕಾಫಿ ಈಗ ವಿಶ್ವದೆಲ್ಲೆಡೆ ಜನಪ್ರಿಯತೆ ಗಳಿಸಿದೆ. ಕರ್ನಾಟಕದ ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ ತಮಿಳುನಾಡು ಹಾಗೂ ಕೇರಳದಲ್ಲಿ ಬೆಳೆಯಲಾಗುವ ವೈವಿಧ್ಯಮಯ ಕಾಫಿಗಳು ಅದ್ಭುತ. ಜತೆಗೆ ಒಡಿಶಾದ ಕೊರಾಪುಟ್‌ನಲ್ಲಿ ಬೆಳೆಯಲಾಗುವ ಕಾಫಿ ಕೂಡ ಜನಪ್ರಿಯತೆ ಗಳಿಸುತ್ತಿದೆ’ ಎಂದು ಪ್ರಧಾನಿ ಹೇಳಿದ್ದಾರೆ.

‘ಹಲವರು ಕಾರ್ಪೊರೇಟ್‌ ಕೆಲಸಗಳನ್ನು ಬಿಟ್ಟು ಕಾಫಿ ಬೆಳೆಗಾರರಾಗಿದ್ದಾರೆ’ ಎಂದ ಮೋದಿ, ‘ಕಾಫಿ ಪ್ರೀತಿ ಅಂಥವರ ಕ್ಷೇತ್ರವನ್ನೇ ಬದಲಿಸಿ ಹೊಸ ಉದ್ಯಮದಲ್ಲಿ ಯಶಸ್ಸು ಕಾಣುವಂತೆ ಮಾಡಿದೆ. ಕಾಫಿಯಿಂದಾಗಿ ಹಲವು ಮಹಿಳೆಯರ ಬದುಕೂ ಬದಲಾಗಿದೆ’ ಎಂದು ಹರ್ಷಿಸಿದ್ದಾರೆ. ಕರ್ನಾಟಕದಲ್ಲೇ ದೇಶದ ಶೇ.70ರಷ್ಟು ಕಾಫಿ ಬೆಳೆಯಲಾಗುತ್ತದೆ.

ಮುಧೋಳ ನಾಯಿ ಉಲ್ಲೇಖ:

ಇತ್ತೀಚೆಗಷ್ಟೇ ಗಡಿ ಭದ್ರತಾ ಪಡೆಯ ಭಾಗವಾದ ಕರ್ನಾಟಕದ ಮುಧೋಳ ನಾಯಿ ಬಗ್ಗೆ ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ‘ಹಲವು ಸ್ಪರ್ಧೆಗಳಲ್ಲಿ ಮುಧೋಳ ಸೇರಿದಂತೆ ಹಲವು ದೇಸೀ ತಳಿಯ ನಾಯಿಗಳು ವಿದೇಶಿ ಶ್ವಾನಗಳನ್ನು ಹಿಂದಿಕ್ಕಿವೆ. ಕಳೆದ ವರ್ಷ ಛತ್ತೀಸಗಢದಲ್ಲಿ 8 ಕೆ.ಜಿ. ಸ್ಫೋಟಕಗಳನ್ನೂ ಇವು ಪತ್ತೆಹಚ್ಚಿದ್ದವು. ಈಗ ಅವುಗಳನ್ನು ಬಿಎಸ್‌ಎಫ್‌ ಮತ್ತು ಸಿಆರ್‌ಪಿಎಫ್‌ಗೆ ಸೇರಿಸಿಕೊಂಡು ತರಬೇತಿ ನೀಡಲಾಗುತ್ತಿದೆ’ ಎಂದರು. ಈ ಹಿಂದೆಯೂ ಮೋದಿ ಮುಧೋಳ ನಾಯಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕರ್ನಾಟಕದ ಮುಧೋಳ ಮತ್ತು ಉತ್ತರ ಭಾರತದ ರಾಂಪುರ ಬೇಟೆ ನಾಯಿಗಳನ್ನು ಹೈರಿಸ್ಕ್‌ ಕಮಾಂಡೋ ಕಾರ್ಯಾಚರಣೆಗಳಲ್ಲಿ ಬಳಸಲು ಗಡಿ ಭದ್ರತಾ ಪಡೆ ಮುಂದಾಗಿದೆ.

ಬೆಂಗಳೂರಿನಲ್ಲಿ ಕಪಿಲ್ ಶರ್ಮಾರಿಂದ 46 ಜಲಮೂಲಗಳ ಪುನರುಜ್ಜೀವನ:

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಸ್ವಚ್ಛತೆ ಮತ್ತು ಅದಕ್ಕಾಗಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ತಮ್ಮ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ‘ಕೆರೆಗಳ ನಾಡೆಂದೇ ಕರೆಯಲಾಗುವ ಬೆಂಗಳೂರಿನಲ್ಲಿ ಕಪಿಲ್‌ ಶರ್ಮಾ ಎಂಬ ಎಂಜಿನಿಯರ್‌ ಒಬ್ಬರು ತಮ್ಮ ತಂಡದೊಂದಿಗೆ ಕೂಡಿಕೊಂಡು ಅಭಿಯಾನವೊಂದನ್ನು ಆಯೋಜಿಸಿದ್ದು, ಈಗಾಗಲೇ 40 ಬಾವಿ ಮತ್ತು 6 ಕೆರೆಗಳನ್ನು ಪುನರುಜ್ಜೀವನಗೊಳಿಸಿದ್ದಾರೆ. ಜತೆಗೆ ಅವರು ಮರ ನೆಡುವ ಅಭಿಯಾನದಲ್ಲೂ ಸಕ್ರಿಯರಾಗಿದ್ದಾರೆ. ಇದರಲ್ಲಿ ಅವರು ಉದ್ದಿಮೆಗಳು ಮತ್ತು ಸ್ಥಳೀಯ ನಿವಾಸಿಗಳನ್ನೂ ಸೇರಿಸಿಕೊಂಡಿರುವುದು ಗಮನಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದೇ ವೇಳೆ, ಛತ್ತೀಸಗಢದ ಅಂಬಿಕಾಪುರದಲ್ಲಿ ಕಸ ಕೊಡುವವರಿಗೆ ಹೊಟ್ಟೆ ತುಂಬ ಊಟ ಕೊಡುವ ಕೆಫೆ ಆರಂಭಿಸಿದ ಮಹಾನಗರ ಪಾಲಿಕೆಯ ಕೆಲಸವನ್ನೂ ಶ್ಲಾಘಿಸಿದ್ದಾರೆ.

2007ರಿಂದ ‘ಸೇಟ್ರೀಸ್‌’ ಎಂಬ ಎನ್‌ಜಿಒ ನಡೆಸುತ್ತಿರುವ ಶರ್ಮಾ, ತಮ್ಮ ಸಂಸ್ಥೆ ಮೂಲಕ ನಗರ ಪ್ರದೇಶಗಳಲ್ಲಿ ಸಸಿ ನೆಡುವ ಹಾಗೂ ಕೆರೆಗಳಿಗೆ ಮರುಹುಟ್ಟು ನೀಡುವ ಕೆಲಸದಲ್ಲಿ ತೊಡಗಿದ್ದಾರೆ. ಇವರು ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಹಾಗೂ ಹೈದ್ರಾಬಾದ್‌ನಲ್ಲೂ ಈ ಕೆಲಸ ಮಾಡಿದ್ದಾರೆ.