ದೇಶವನ್ನು ಜಗತ್ತಿನ ಮುಂದೆ ಎದ್ದು ನಿಲ್ಲಿಸಿದ ಮೋದಿ: ಕೋಟ

| Published : Oct 27 2025, 12:45 AM IST

ಸಾರಾಂಶ

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಕ್ಕೆ ಹೋದಾಗ ದುಪ್ಪಟ್ಟು ಗೌರವ ಸಿಗುತ್ತಿದೆ. ಇದು ಅವರ ಸಮರ್ಥ ಆಡಳಿತ, ವಿದೇಶ ನೀತಿಗೆ ಕೈಗನ್ನಡಿಯಾಗಿದೆ. ಸಮೃದ್ಧ ಭಾರತದ ಕನಸನ್ನು ನನಸು ಮಾಡುತ್ತಿರುವ ಮೋದಿ ಅವರು ದೇಶ ಇಂದು ಆತ್ಮನಿರ್ಭರವಾಗಿಸಿ ಜಗತ್ತಿನ ಮುಂದೆ ಎದ್ದು ನಿಲ್ಲುವಂತೆ ಮಾಡಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.ಇಂದು ಮತ್ಸ್ಯೋದ್ಯಮಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಇದರಿಂದ ಮೀನುಗಾರ ಸಮುದಾಯಕ್ಕೆ ಬಹು ಲಾಭವಾಗಿದೆ. ಅದೇ ಸಮುದಾಯದ ಬೆಂಬಲದೊಂದಿಗೆ ಆರಂಭಗೊಂಡ ಮಹಾಲಕ್ಷ್ಮೀ ಬ್ಯಾಂಕ್ ಇಂದು ರಾಜ್ಯಮಟ್ಟದಲ್ಲಿ ಸಾಧನೆ ತೋರುತ್ತಿದೆ ಎಂದು ಶ್ಲಾಘಿಸಿದರು.ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಪ್ರತಿಯೊಬ್ಬರ ಮನಸ್ಸನ್ನು ತಟ್ಟಿದ ವ್ಯಕ್ತಿ ಮೋದಿ. ಕಳೆದ 11 ವರ್ಷದಲ್ಲಿ ದೇಶದ ಪ್ರತಿಯೊಬ್ಬರ ಜೀವನವನ್ನು ತಲುಪಿದ್ದಾರೆ. ಇಡೀ ದೇಶದ ಆಡಳಿತದಲ್ಲಿ ಬದಲಾವಣೆ ತಂದಿರುವ ಅಪರೂಪದ ನಾಯಕ ಎಂದರು.ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿ, ಸಹಕಾರಿ ಕ್ಷೇತ್ರಕ್ಕೆ ಮೋದಿ ಕೊಡುಗೆ ಅನನ್ಯವಾಗಿದ್ದು, ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರೂಪಿಸುವುದರೊಂದಿಗೆ ಆರ್ಥಿಕತೆಯಲ್ಲಿ ಶಿಸ್ತು ಮೂಡಿಸಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿ.ಪ. ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ವಿ.ಪ. ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಹೊಸದಿಗಂತ ಪತ್ರಿಕೆಯ ಸಿಇಒ ಪಿ.ಎಸ್. ಪ್ರಕಾಶ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಬ್ಯಾಂಕಿನ ಉಪಾಧ್ಯಕ್ಷ ವಾಸುದೇವ ಸಾಲಿಯಾನ್, ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಉಪಸ್ಥಿತರಿದ್ದರು.5 ವಿಭಾಗಳಲ್ಲಿ ಸ್ಪರ್ಧೆ:

‘ನಾ ಕಂಡಂತೆ ಪ್ರಧಾನಿ ನರೇಂದ್ರ ಮೋದಿ’ ಅಥವಾ ‘ಮೋದಿ ಇನ್ ಮೈ ಐಸ್: ಎ ವಿಶನರಿ’ ಎಂಬ ವಿಷಯದಲ್ಲಿ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಪ್ರಾಥಮಿಕ ವಿಭಾಗ (5-7 ತರಗತಿ), ಪ್ರೌಢಶಾಲಾ ವಿಭಾಗ (8-10), ಪಿಯುಸಿ ವಿಭಾಗ, ಪದವಿ ವಿಭಾಗ, ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

-----------------------------------

ಮೋದಿ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿರುವ ಈ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನದೊಂದಿಗೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಅವಕಾಶವನ್ನು ಬ್ಯಾಂಕಿನ ವತಿಯಿಂದ ಕಲ್ಪಿಸಲಾಗುವುದು.

। ಯಶ್ಪಾಲ್ ಸುವರ್ಣ, ಬ್ಯಾಂಕಿನ ಅಧ್ಯಕ್ಷರು