ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ಸ್ಥಾಪನೆಯಾಗಿ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾನುವಾರ ಆರ್.ಎಸ್.ಎಸ್ ಕಾರ್ಯಕರ್ತರಿಂದ ಶಾಂತಿಯುತ ಪಥ ಸಂಚಲನ ನಡೆಯಿತು.ಪಟ್ಟಣದ ಪೊಲೀಸ್ ಠಾಣೆ ಬಳಿಯ ಖಾಸಗಿ ಕಟ್ಟಡದ ಜಾಗದಲ್ಲಿ ಗಣವೇಷಧಾರಿಗಳಾಗಿ ಸೇರಿದ ಆರ್.ಎಸ್.ಎಸ್ ಕಾರ್ಯಕರ್ತರು ಸದಾ ವತ್ಸಲೇ ಮಾತೃಭೂಮಿ ಎನ್ನುವ ಆರ್.ಎಸ್.ಎಸ್ ಗೀತೆ ಹಾಡಿ ಧ್ವಜವಂದನೆ ಸಲ್ಲಿಸುವ ಮೂಲಕ ಪಥಸಂಚಲನ ಆರಂಭಿಸಿದರು.
ಧ್ವಜವಂದನೆ ಗೀತೆಯಲ್ಲಿ ಭಾಗವಹಿಸಿ ಭಾರತ ಮಾತೆಗೆ ಪ್ರಜೆ ಸಲ್ಲಿಸುವ ಮೂಲಕ ಶಾಸಕ ಎಚ್.ಟಿ.ಮಂಜು ಪಥ ಸಂಚಲನಕ್ಕೆ ತಮ್ಮ ನೈತಿಕ ಬೆಂಬಲ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಶಾಸಕರು, ಆರ್.ಎಸ್.ಎಸ್ ಯಾವುದೇ ರಾಜಕೀಯ ಸಂಘಟನೆಯಲ್ಲ. ಅದೊಂದು ಸಾಂಸ್ಕೃತಿಕ ಸಂಘಟನೆಯಾಗಿದೆ ಎಂದರು.ದೇಶದ ಸನಾತನ ಸಂಸ್ಕೃತಿ ಮತ್ತು ಧರ್ಮದ ರಕ್ಷಣೆಗಾಗಿ ಅದು ಕಳೆದ ಒಂದು ಶತಮಾನದಿಂದ ನಿರಂತರವಾಗಿ ಕೆಲಸ ಮಾಡುತ್ತಾ ದೇಶದ ಯುವಕರಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳೆಸುತ್ತಿದೆ. ಪಥ ಸಂಚಲನದ ಮೂಲಕ ಆರ್.ಎಸ್.ಎಸ್ ದೇಶದ ಜನರಲ್ಲಿ ರಾಷ್ಟ್ರೀಯತೆ ಮತ್ತು ಭಾವೈಕ್ಯತೆ ಸಂದೇಶ ಸಾರುತ್ತಿದೆ ಎಂದರು.
ಕ್ಷೇತ್ರದ ಶಾಸಕನಾಗಿ ದೇಶಭಕ್ತ ಸಂಘಟನೆಯ ಪಥಸಂಚಲನಕ್ಕೆ ನಾನು ಮತ್ತು ನಮ್ಮ ಪಕ್ಷದ ಕಾರ್ಯಕರ್ತರು ಆರ್.ಎಸ್.ಎಸ್ ಧ್ವಜವಂದನೆಯಲ್ಲಿ ಭಾಗವಹಿಸುವ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದರು.ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಗಣವೇಷಧಾರಿಯಾಗಿ ಕೈಯಲ್ಲಿ ದಂಡ ಹಿಡಿದು ಪಥಸಂಚಲನದಲ್ಲಿ ಭಾಗವಹಿಸುವ ಮೂಲಕ ಜನರ ಗಮನ ಸೆಳೆದರು. ಪಥ ಸಂಚಲನದ ವೇಳೆ ಮಾರ್ಗದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳು ಯಾವುದೇ ರೀತಿಯ ಘೋಷಣೆ ಕೂಗಿದರೂ ಕಾರ್ಯಕರ್ತರು ಅದಕ್ಕೆ ಕಿವಿಗೊಡದೆ ಪಥ ಸಂಚಲನದ ಶಿಸ್ತು ಕಾಪಾಡುವಂತೆ ಆರಂಭದಲ್ಲಿಯೇ ಸಂಘಟಕರು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು. ಪಥ ಸಂಚಲನದ ವೇಳೆ ಅನುಸರಿಸಬೇಕಾದ ಶಿಸ್ತಿನ ನಿಯಮಗಳನ್ನು ಬೋಧಿಸಿದರು.
ನಂತರ ಪಥ ಸಂಚಲನ ಪ್ರವಾಸಿ ಮಂದಿರ ವೃತ್ತ, ಅಗ್ನಿ ಶಾಮಕ ಠಾಣೆ ಮೂಲಕ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಹೊಸ ಕಿಕೇರಿ, ಹಳೇ ಕಿಕ್ಕೇರಿ ರಸ್ತೆ, ಜಾಮೀಯಾ ಮಸೀದಿ ವೃತ್ತ, ನಾಗಮಂಗಲ ರಸ್ತೆ, ಟಿಎಪಿಸಿಎಂಎಸ್ ಮಾರ್ಗವಾಗಿ ಸುಮಾರು 2 ಕೀ.ಮಿ ಸಂಚರಿಸಿ ತನ್ನ ಮೂಲ ಸ್ಥಾನಕ್ಕೆ ಆಗಮಿಸಿತು.ಪಥ ಸಂಚಲನ ಆರಂಭಗೊಂಡ ಜಾಗದಲ್ಲಿ ಮತ್ತೆ ಭಗವಾಧ್ವಜಕ್ಕೆ ವಂದನೆ ಸಲ್ಲಿಸುವ ಮೂಲಕ ಪಥ ಸಂಚಲನ ಅಂತ್ಯಗೊಂಡಿತು. ಮಾರ್ಗದುದ್ದಕ್ಕೂ ಸಾರ್ವಜನಿಕರು ರಸ್ತೆ ಬದಿಯಲ್ಲಿ ನಿಂತು ಹೂಮಳೆ ಸುರಿಸುವ ಮೂಲಕ ಪಥ ಸಂಚಲನಕ್ಕೆ ಶುಭಕೋರಿದರು. ಮಳೆ ಬೀಳಲಾರಂಭಿಸಿದರೂ ವಿಚಲಿತರಾಗದೆ ಆರ್.ಎಸ್.ಎಸ್ ಕಾರ್ಯಕರ್ತರು ಪಥ ಸಂಚಲನ ನಡೆಸಿದರು. ಯಾವುದೇ ಅಹಿತರ ಘಟನೆಗಳಿಗೆ ಆಸ್ಪದವಾಗದಂತೆ ಪಟ್ಟಣ ಪೊಲೀಸರು ಮುನ್ನೆಚ್ಚರಿಕಾ ಕ್ರಮಮಗಳನ್ನು ಕೈಗೊಂಡಿದ್ದರು.
ಮುಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಮಾಜಿ ಅಧ್ಯಕ್ಷರಾದ ಬಳ್ಳೇಕೆರೆ ವರದರಾಜೇಗೌಡ, ಅರವಿಂದ ಪರಮೇಶ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ತಾಲೂಕು ಬಿಜೆಪಿ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಪುರಸಭಾ ಸದಸ್ಯ ತಿಮ್ಮೇಗೌಡ, ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ಸಂಘಟಕ ಮಡುವಿನಕೋಡಿ ಎಂ.ಜೆ.ರವಿಕುಮಾರ್, ರಾಯಸಮುದ್ರ ನಾರಾಯಣಗೌಡ, ಹೆಚ್.ಬಿ.ಮಂಜುನಾಥ್ ಸೇರಿದಂತೆ ಸುಮಾರು 300 ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.ಭವ್ಯ ಬಲಿಷ್ಠ ಭಾರತದ ಸ್ವಯಂ ಸೇವಕರು ಎನ್ನುವ ಬ್ಯಾನರ್ ಹಿಡಿದು ಗಣವೇಷಧಾರಿಗಳಾಗಿ ಪಥಸಂಚಲನಕ್ಕೆ ಪುಟಾಣಿ ಮಕ್ಕಳು ಭಾಗವಹಿಸಿ ಗಮನ ಸೆಳೆದರು.
;Resize=(128,128))
;Resize=(128,128))
;Resize=(128,128))