ಮಂಗಳೂರು: ಮಂಗಳೂರು ತಾಲೂಕು ಮೊಗೇರ ಸಂಘವು ನಗರದ ಪಂಜಿಮೊಗರುವಿನಲ್ಲಿ ನೂತನವಾಗಿ ನಿರ್ಮಿಸಿದ ಸಮುದಾಯ ಭವನ, ಉದ್ದೇಶಿತ ಸ್ವ ಉದ್ಯೋಗ ತರಬೇತಿ ಕೇಂದ್ರ ಮತ್ತು ಬಡ ಮಕ್ಕಳ ವಸತಿ ನಿಲಯಗಳನ್ನೊಳಗೊಂಡಿರುವ ಬಹು ಮಹಡಿಗಳ ಕಟ್ಟಡ ಮೊಗೇರ ಸೌಧ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಮೊಗೇರ ಸೌಧ ಉದ್ಘಾಟಿಸಿ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ ಕಾಣಿಸಿಕೊಂಡಿರುವ ಮೊಗೇರ ಸಮಾಜವು ಇಂದು ತನ್ನದೇ ಆದ ಸ್ವಂತ ಕಟ್ಟಡವನ್ನು, ಪಡೆದುಕೊಂಡಿರುವುದು ಶ್ಲಾಘನೀಯ. ಮೊಗೇರ ಸಂಘ ಇದರ ಹಿಂದೆ ನಡೆಸಿರುವ ಪ್ರಯತ್ನವು ಇತರರಿಗೆ ಮಾದರಿ ಎನಿಸಿದೆ. ಎಲ್ಲರೂ ಅಂಬೇಡ್ಕರ್ ತರಹ ಆಗಲು ಸಾಧ್ಯವಿಲ್ಲ. ಆದರೆ ಅವರ ಚಿಂತನೆಯನ್ನು ವೈಗೂಡಿಸುವ ಮುಖಾಂತರ ಸಮಾಜಕ್ಕೆ ಸೇವೆಯನ್ನು ಸಲ್ಲಿಸಬಹುದು. ಭವನದಲ್ಲಿ ಶಿಕ್ಷಣ ಮತ್ತು ಸ್ವ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಅಂಬೇಡ್ಕರ್ ಅವರ ಚಿಂತನೆಯನ್ನು ಸ್ವತಃ ಅಳವಡಿಸುವಲ್ಲಿ ಅರ್ಥಪೂರ್ಣವಾದ ಕೆಲಸವನ್ನು ಅಧ್ಯಕ್ಷರಾದ ಸೀತಾರಾಮ ಕೊಂಚಾಡಿ ಸಾರಥ್ಯದಲ್ಲಿ ಇವರ ತಂಡದವರು ಸೇರಿಕೊಂಡು ಮಾಡಿರುತ್ತಾರೆ. ಈ ಭವನವು ಸಮಾಜದ ಎಲ್ಲರಿಗೂ ಉಪಯೋಗ ವಾಗುವಂತಾಗಲಿ ಎಂದು ಶುಭ ಹಾರೈಸಿದರು.ನಗರದ ಪಂಜಿ ಮೊಗರುವಿನ ರಸ್ತೆಯ ಬದಿಯಲ್ಲಿ, ಸಂಘದ ಹೆಸರಿನಲ್ಲಿ ಸ್ವಂತ ಕ್ರಯಕ್ಕೆ ಪಡುಕೊಂಡ ಸುಮಾರು 0.20 ಎಕ್ರೆ ವಿಸ್ತೀರ್ಣದಲ್ಲಿ ನಾಲ್ಕು ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ನಿರುದ್ಯೋಗಿ ಯುವಕರಿಗೆ ಹಾಗೂ ಮಹಿಳೆಯರಿಗೆ ಸ್ವಉದ್ಯೋಗ ತರಬೇತಿ ಕೇಂದ್ರ ಮತ್ತು ಬಡ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯು ಒಂದು ಕೋಟಿ ಅನುದಾನವನ್ನು ಒದಗಿಸಿದೆ. ಜೊತೆಗೆ ರಾಜ್ಯಸಭಾ ಸದಸ್ಯರು, ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ತಮ್ಮ ವಿಶೇಷ ಅನುದಾನ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ದಾನಿಗಳು ನೆರವಿನ ಹಸ್ತವನ್ನು ನೀಡುತ್ತಾರೆ.ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಶಿಧರ ಹೆಗ್ದೆ, ಕರ್ನಾಟಕ ಸರಕಾರದ ಮಾಜಿ ಸಚಿವ ಎಸ್. ಅಂಗಾರ, ಡಾ. ವಾಸುದೇವ ಬೆಳ್ಳೆ, ದಲಿತ ಮುಖಂಡರಾದ ಎಂ ದೇವದಾಸ್, ಮಾಜಿ ಕಾರ್ಪೊರೇಟರ್ ಅನಿಲ್ ಕುಮಾರ್ , ಸುಭಾಷ್ ಹನುಮಂತ ಕಾನಡೆ, ಡಾ. ಘನ ಶ್ಯಾಮ ಪಾಠಣಕರ್, ನಂದರಾಜ್ ಸಂಕೇಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಂಘದ ಅಧ್ಯಕ್ಷರಾದ ಸೀತಾರಾಮ ಕೊಂಚಾಡಿ ಅಧ್ಯಕ್ಷತೆ ವಹಿಸಿದ್ದರು. ದೇವದಾಸ್ ಕೂಳೂರು, ರುಕ್ಮಯ್ಯ ಪಂಜಿಮೊಗರು ಮತ್ತಿತರರು ಇದ್ದರು.ಪ್ರಾರಂಭದಲ್ಲಿ ಕೂಳೂರು ವೃತ್ತದಿಂದ ಪಂಜಿಮೊಗರು ವರೆಗೆ ಸಮಾಜದ ನಾಗರಿಕರು ಮೆರವಣಿಗೆಯಲ್ಲಿ ಸಾಗಿ ಬಂದರು.
ಅಶೋಕ್ ಕೊಂಚಾಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಗಿರಿಯಪ್ಪ ಎಸ್. ಸ್ವಾಗತಿಸಿದರು. ಕೋಶಾಧಿಕಾರಿ ನಾರಾಯಣ ಉಳ್ಳಾಲ್ ವಂದಿಸಿದರು.