ಉಪ್ಪಿನಂಗಡಿ: ಹಲವಾರು ಖಾಸಗಿ ಕಾರ್ಯಕ್ರಮಗಳ ಕಾರಣದಿಂದಾಗಿ ಜನರ ವಾಹನ ಸಂಚಾರ ಕಳೆದ ಕೆಲ ದಿನಗಳಿಂದ ಹೆಚ್ಚುತ್ತಿದೆ. ಪರಿಣಾಮ ಉಪ್ಪಿನಂಗಡಿಯ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಇಲ್ಲಿನ ನೇತ್ರಾವತಿ ನದಿ ಕಿನಾರೆಯಿಂದ ರಾಷ್ಟ್ರೀಯ ಹೆದ್ದಾರಿ ೭೫ ಕೂಡು ರಸ್ತೆಯಲ್ಲಿ ಮುಂಜಾನೆಯಿಂದ ಮಧ್ಯಾಹ್ನದವರೆಗೆ ವಾಹನ ದಟ್ಟಣೆಯಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ಇದರಿಂದಾಗಿ ಮೊದಲೇ ವ್ಯವಹಾರ ಕುಸಿತಕ್ಕೆ ಒಳಗಾಗಿರುವ ವ್ಯಾಪಾರಿಗಳು ಮತ್ತಷ್ಟು ಸಮಸ್ಯೆಗೆ ಸಿಲುಕುವಂತಾಯಿತು. ವಾಹನ ದಟ್ಟಣೆಯಿಂದಾಗಿ ಪೇಟೆಗೆ ಬಂದ ಬಂದಿ ಎಲ್ಲಿಯೂ ವಾಹನವನ್ನು ನಿಲ್ಲಿಸಲಾಗದೆ ತೊಂದರೆಗೆ ಒಳಗಾದರು.ಈ ಬಗ್ಗೆ ಸ್ಥಳೀಯ ವರ್ತಕರಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದಂತೆಯೇ ಸ್ಥಳೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಸಮಸ್ಯೆಯ ಸೂಕ್ಷ್ಮತೆಯನ್ನು ಪೊಲೀಸ್ ವೃತ್ತನಿರೀಕ್ಷಕರ ಗಮನಕ್ಕೆ ತಂದರು. ಅನಧಿಕೃತ ವ್ಯಾಪಾರ: ಉಪ್ಪಿನಂಗಡಿ ಅಂಡರ್‌ಪಾಸ್‌ನಲ್ಲಿ ಅನಧಿಕೃತವಾಗಿ ವಾಹನಗಳಲ್ಲಿ ಸರಂಜಾಮುಗಳನ್ನು ತಂದಿರಿಸಿ ವ್ಯಾಪಾರ ನಡೆಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಅಡೆ ತಡೆ ಎದುರಾಗಿದೆ ಎಂಬುದು ಜನರ ಆರೋಪ
ಕಾನೂನು ಹೋರಾಟ ಎಚ್ಚರಿಕೆ: ಈಗಾಗಲೇ ವರ್ತಕರಿಂದ ವ್ಯಾಪಕ ದೂರುಗಳು ಬಂದಿದ್ದು, ವಾಹನ ದಟ್ಟಣೆ ಸಮಸ್ಯೆಯಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಈ ಬಗ್ಗೆ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವರಿಕೆ ಮಾಡಲಾಗಿದೆ. ಠಾಣೆಯ ಸನಿಹದಲ್ಲೆ ಈ ರೀತಿ ಅವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗದೆ ಇದ್ದಲ್ಲಿ ಕಾನೂನು ಹೋರಾಟ ನಡೆಸಲು ಸಂಘದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ ತಿಳಿಸಿದರು.