ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರಕ್ಕೆ ಆಗಮಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಬಾಗವತ್ ಅವರನ್ನು ಸಮಾಜ ಸೇವಕ, ಯುವ ಸಬಲೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಉಮೇಶ ಕಾರಜೋಳ ಅವರು ಕೇಸರಿ ಶಲ್ಯ ಹೊದಿಸಿ ಹಾಗೂ ಪದ್ಮಶ್ರೀ ಕಾಕಾ ಕಾರಖಾನೀಸ್‌ ಅವರ ಪುಸ್ತಕವನ್ನು ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.

ನಗರದ ಸಾಯಿ ಮಂಗಲ ಕಾರ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಮೋಹನ್ ಭಾಗವತ್ ಅವರನ್ನು ಸನ್ಮಾನಿಸಿ ಹಾಗೂ ಅಭಿನಂದಿಸಿದ ಕಾರಜೋಳ ಅವರು, ತಾವು ವಿಜಯಪುರಕ್ಕೆ ಆಗಮಿಸಿರುವುದು ಅತ್ಯಂತ ಸಂತೋಷ ತಂದಿದೆ. ಸಂಘ ಪರಿವಾರ ಒಡನಾಡಿಗಳಿಗೆ ನಿಮ್ಮ ಆಗಮನ ಹೊಸ ಚೈತನ್ಯ ನೀಡಲಿದೆ. ನಿಮ್ಮ ಅನುಭವ, ಮಾರ್ಗದರ್ಶನದಿಂದ ನಮಗೆ ಹಾಗೂ ಎಲ್ಲ ಸ್ವಯಂ ಸೇವಕರಿಗೆ ಹೊಸ ಶಕ್ತಿ ತುಂಬಿದಂತಾಗಿದೆ ಎಂದು ಹೇಳಿದರು.

ಪದ್ಮಶ್ರೀ ಕಾಕಾ ಕಾರಖಾನೀಸ ಅವರ ಜೀವನಚರಿತ್ರೆಯ ಪುಸ್ತಕವನ್ನು ಅರ್ಪಿಸಿದ ಅವರು, ಪದ್ಮಶ್ರೀ ಕಾಕಾ ಕಾರಖಾನೀಸರು ಅಸ್ಪೃಶ್ಯತೆ ನಿವಾರಣೆ, ಸಮಾನತೆ ಹಾಗೂ ಶಿಕ್ಷಣ ಪ್ರಸಾರಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿರಿಸಿದ್ದರು, ಅವರ ಜೀವನ ಎಲ್ಲರಿಗೂ ಮಾರ್ಗದರ್ಶಿ ಹೇಳಿದರು.