ಮೂಡಿಗೆರೆಮೋಹಿನಿ ಸಿದ್ದೇಗೌಡ ತಮ್ಮ ನಾಲ್ಕು ದಶಕಗಳ ಸಾರ್ವಜನಿಕ ಬದುಕಿನಲ್ಲಿ ನಿರಂತರವಾಗಿ ಶೋಷಿತರು, ನೊಂದವರು, ಅಬಲೆಯರ ಪರವಾಗಿ ಗಟ್ಟಿಧ್ವನಿಯಾಗಿದ್ದರು, ಅವರು ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಅದೆಷ್ಟೋ ಮಂದಿಗೆ ದಾರಿ ದೀಪವಾಗಿದ್ದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

- ಹಿರಿಯ ಚೇತನ ಮೋಹಿನಿ ಸಿದ್ದೇಗೌಡರ ನುಡಿ ನಮನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಮೋಹಿನಿ ಸಿದ್ದೇಗೌಡ ತಮ್ಮ ನಾಲ್ಕು ದಶಕಗಳ ಸಾರ್ವಜನಿಕ ಬದುಕಿನಲ್ಲಿ ನಿರಂತರವಾಗಿ ಶೋಷಿತರು, ನೊಂದವರು, ಅಬಲೆಯರ ಪರವಾಗಿ ಗಟ್ಟಿಧ್ವನಿಯಾಗಿದ್ದರು, ಅವರು ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಅದೆಷ್ಟೋ ಮಂದಿಗೆ ದಾರಿ ದೀಪವಾಗಿದ್ದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಮೂಡಿಗೆರೆ ಮುದ್ರೆಮನೆ ಕಾಫಿ ಕ್ಯೂರಿಂಗ್ ಆವರದಲ್ಲಿ ಆಯೋಜಿಸಿದ್ದ ಅಗಲಿದ ಹಿರಿಯ ಚೇತನ ಮೋಹಿನಿ ಸಿದ್ದೇಗೌಡರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ ಮೋಹಿನಿ ಸಿದ್ದೇಗೌಡರನ್ನು ನಾನು ಬಹು ಹತ್ತಿರದಿಂದ ಬಲ್ಲವಳಾಗಿದ್ದೆ. ಅವರು ಸದಾ ಸಮಾಜಮುಖಿ ಚಿಂತನೆಯಲ್ಲಿ ತೊಡಗಿದ್ದರು. ಕಸ್ತೂರಿಬಾ ಸದನದ ಪ್ರಧಾನ ಕಾರ್ಯದರ್ಶಿಯಾಗಿ ಸತತ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು ಕೌಟುಂಬಿಕ ಸಲಹಾ ಕೇಂದ್ರ, ಸಾಂತ್ವನ ಕೇಂದ್ರದ ಮುಂತಾದ ಜವಾಬ್ದಾರಿಯುತ ಸ್ಥಾನಗಳಿಂದ ತಮ್ಮ ಬಳಿ ಬರುತ್ತಿದ್ದ ನೊಂದ ಮಹಿಳೆಯರಿಗೆ ಅಗತ್ಯ ಸಲಹೆ, ಮಾರ್ಗದರ್ಶನ, ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದರು. ಒಡೆದು ಹೋಗಿದ್ದ ಅನೇಕ ಕುಟುಂಬಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದರು. ಅದೆಷ್ಟೋ ಮಂದಿ ಅನಾಥರು, ಅಬಲೆಯರನ್ನು ತಮ್ಮ ಮಕ್ಕಳಂತೆ ಪೋಷಿಸಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ದಾರಿದೀಪವಾಗಿದ್ದರು ಎಂದರು.

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಮೋಹಿನಿ ಸಿದ್ದೇಗೌಡರು ಮೇಲ್ನೋಟಕ್ಕೆ ಕಠೋರವಾಗಿ ಕಂಡರು ಅಂತ ರಂಗದಲ್ಲಿ ಅತೀವ ಮೃದುವಾಗಿದ್ದರು. ಮಾದಕವಸ್ತು, ಮದ್ಯಪಾನದಂತಹ ಪಿಡುಗಿನ ವಿರುದ್ಧ ದೊಡ್ಡ ಧ್ವನಿಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಅತ್ಯಂತ ನಿಷ್ಠುರವಾದಿಯಾಗಿದ್ದರು. ತಮಗೆ ಸರಿಕಾಣದೇ ಇದ್ದಾಗ ನೇರ ನುಡಿಗಳಿಂದ ವಿರೋಧಿ ಸುತ್ತಿದ್ದರು. ಅವರು ಸದಾ ಸಮಾಜಪರ ಚಿಂತನೆಯಲ್ಲಿ ತೊಡಗಿದ್ದರು. ಅವರ ನಿಧನ ಸಮಾಜಕ್ಕಾದ ದೊಡ್ಡ ನಷ್ಟವೆಂದು ಹೇಳಿದರು.

ಹಿರಿಯ ಪತ್ರಕರ್ತ ಗಿರಿಜಾಶಂಕರ್ ಮಾತನಾಡಿ ಮೋಹಿನಿ ಸಿದ್ದೇಗೌಡರು ನಿಜ ಅರ್ಥದಲ್ಲಿ ಸಮಾಜಸೇವಕಿ. ನಿತ್ಯ ತಮ್ಮ ಬಳಿಗೆ ಬರುತ್ತಿದ್ದ ಹಲವಾರು ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸುತ್ತಿದ್ದರು. ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆಯಲ್ಲಿ ಮೋಹಿನಿ ಸಿದ್ದೇಗೌಡರ ಮಾತಿಗೆ ಅತ್ಯಂತ ಮಾನ್ಯತೆ ಸಿಗುತ್ತಿತ್ತು. ಅವರು ತಮ್ಮ ಶಕ್ತಿ, ಸಾಮರ್ಥ್ಯವನ್ನು ಎಂದಿಗೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳದೇ ಸಮಾಜಕ್ಕೆ ಧಾರೆಯೆರೆದರು ಎಂದು ಬಣ್ಣಿಸಿದರು.

ಪತ್ರಕರ್ತ ಅರಗ ರವಿ ಮಾತನಾಡಿ ಮೋಹಿನಿ ಸಿದ್ದೇಗೌಡರು ಎಂತಹುದೇ ಬೆದರಿಕೆಗೆ ಜಗ್ಗದೇ ನೊಂದವರ ಪರ ನಿಲ್ಲುತ್ತಿದ್ದರು. ಅವರು ಮುಕ್ತ ಚಿಂತನೆ, ಸಾಹಿತ್ಯ ಪ್ರೀತಿ ಬೆಳೆಸಿಕೊಂಡಿದ್ದರು. ನಾಡಿನ ಅನೇಕ ಹಿರಿಯ ಸಾಹಿತಿಗಳ ಕೃತಿಗಳನ್ನು ಓದಿ ವಿಮರ್ಶೆ ಮಾಡುತ್ತಿದ್ದರು. ಅಗಾದವಾದ ಜ್ಞಾನವಂತರಾಗಿದ್ದರು, ಯುವಕರಿಗೆ ಸದಾ ಮಾರ್ಗದರ್ಶಕರಾಗಿದ್ದರು. ಕುಟುಂಬ ಕ್ಕಿಂತ ಸಮಾಜಕ್ಕೆ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಕೊನೆ ಉಸಿರಿನವರೆಗೆ ಸಮಾಜದ ಪರವಾಗಿ ಚಿಂತನೆ, ಹೋರಾಟ ನಡೆಸಿದರು ಎಂದರು.

ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಸಕಲೇಶಪುರ ಮಾಜಿ ಶಾಸಕ, ಮೋಹಿನಿ ಸಿದ್ದೇಗೌಡರ ಸಹೋದರ ಎಚ್.ಎಂ.ವಿಶ್ವನಾಥ್, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ನವೀನ್ ಮುಂತಾದವರು ಮಾತನಾಡಿದರು.

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಮೋಹಿನಿ ಸಿದ್ದೇಗೌಡರ ಪುತ್ರರಾದ ಬಿ.ಎಸ್.ಸುಧೀರ್, ಬಿ.ಎಸ್.ಸಂತೋಷ್, ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಶಿಕ್ಷಕಿ ಹೇಮಲತಾ ಪ್ರಾರ್ಥನೆ ನೆರವೇರಿಸಿದರು, ಪತ್ರಕರ್ತ ಪ್ರಸನ್ನ ಗೌಡಳ್ಳಿ ನಿರೂಪಿಸಿ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.