ಕನ್ನಡಪ್ರಭ ವಾರ್ತೆ ಬೇಲೂರು

ಬಸವ ತತ್ವದಡಿಯಲ್ಲಿಯೇ ಸ್ಥಾಪಿತವಾದ ಮಠಗಳು ಬಸವಾದಿ ಶರಣ ನೀಡಿದ ವಿಚಾರ ಸಂದೇಶಗಳಿಂದ ವಿಮುಖರಾಗುತ್ತಿರುವುದು ಬೇಸರದ ವಿಷಯ ಎಂದು ಬೇಲೂರು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ವಿಷಾದ ವ್ಯಕ್ತಪಡಿಸಿದರು.ಹೆಬ್ಬಾಳು ಗ್ರಾಮದ ಸಮುದಾಯಭವನದಲ್ಲಿ ವಿವಿಧ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಂದ ಹಮ್ಮಿಕೊಂಡ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕದಲ್ಲಿನ ಮಠ ಪರಂಪರೆಗೆ ಇಡೀ ದೇಶದಲ್ಲಿ ವಿಶಿಷ್ಟ ಸ್ಥಾನಮಾನವಿದೆ. ಆದರೆ ಇತ್ತೀಚಿನ ಬಹುತೇಕ ಮಠಗಳ ಮಠಾಧೀಶರು ಶರಣರ ತತ್ವಗಳನ್ನು ಬದಿಗಿಟ್ಟು ರಾಜಕೀಯ ವ್ಯಾಮೋಹದ ಕಡೆ ಮುಖಮಾಡಿದ್ದಾರೆ. ತಮ್ಮ ತಮ್ಮ ಮಠಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸುವ ಅಖಾಡವನ್ನು ಮಾಡಿಕೊಂಡಿದ್ದಾರೆ. ತ್ರಿವಿಧ ದಾಸೋಹದ ಜೊತೆಗೆ ೧೨ನೇ ಶತಮಾನದ ಬಸವಾದಿ ಶರಣರ ನೀಡಿದ ವಚನಸಾಹಿತ್ಯ, ಸಮಾನತೆ, ಅನುಭವ ಮಂಟಪ, ಸ್ತ್ರೀ ಸ್ವಾತಂತ್ರ್ಯ, ಕಾಯಕ ಮತ್ತು ದಾಸೋಹ ಪರಿಕಲ್ಪನೆ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಕೆಲ ಮಠಗಳು ಸ್ವಪ್ರತಿಷ್ಠೆಯ ತಾಣವಾಗುವ ಮೂಲಕ ಜಾತಿಗಳಿಗೆ ಸೀಮಿತವಾಗಿವೆ. ಶರಣ ಆಶಯದಂತೆ ಮಠಗಳು ಜಾತಿ, ಧರ್ಮ ಭೇದವಿಲ್ಲದೆ ಸಮಾನತೆಯನ್ನು ಬೋಧಿಸುವ ಕೇಂದ್ರವಾಗಬೇಕಿದೆ. ವಚನಸಾಹಿತ್ಯ ಮತ್ತು ಶ್ರಮಸಂಸ್ಕೃತಿಯನ್ನು ಉತ್ತೇಜಿಸುವ ಕೇಂದ್ರಗಳಾಬೇಕು ಎಂದರು. ವಿಶೇಷವಾಗಿ ಇತ್ತೀಚಿನ ಸರ್ಕಾರಗಳು ಮಹಿಳೆಯರಿಗೆ ಶೇ. ೩೩ರಷ್ಟು ಮೀಸಲಾತಿ ನೀಡಲು ಮೀನಮೇಷ ಎಣಿಸುತ್ತಿರುವ ಕಾಲಘಟ್ಟದಲ್ಲಿ ಸುಮಾರು ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಮಹಿಳೆಗೆ ಸಮಾನ ಸ್ಥಾನವನ್ನು ನೀಡಿರುವುದು ಗಣನೀಯ. ಈಗಾಗಲೇ ಸರ್ಕಾರ ಬಸವಣ್ಣವರ ಭಾವಚಿತ್ರವನ್ನು ಪ್ರತಿ ಕಚೇರಿಯಲ್ಲಿ ಇಡುವುದು ಮತ್ತು ಅಖಂಡ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಣೆ ಮಾಡಿವುದು ಸಂತಸದ ವಿಷಯವಾಗಿದೆ ಎಂದರು. ವಿದ್ಯುತ್ ಗುತ್ತಿಗೆದಾರರಾದ ಚಂದ್ರಶೇಖರಯ್ಯ ಮಾತನಾಡಿ, ಬಸವಣ್ಣನವರು ನೀಡಿದ ಕಾಯಕ, ದಾಸೋಹ ಮತ್ತು ಸಮಾನತೆ ಸಂವಿದಾನದ ಆಶಯವಾಗಿವೆ. ಈ ಕಾರಣದಿಂದ ಕಲ್ಯಾಣ ರಾಜ್ಯ ಸ್ಥಾಪಿಸಲು ಬುದ್ದ,ಬಸವ, ಅಂಬೇಡ್ಕರ್ ವಿಚಾರಧಾರೆಗಳು ನಮಗೆ ಮಾರ್ಗದರ್ಶನ ಎಂದು ತಿಳಿಸಿದರು. ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರತಿದೇವಿ ಬಸವರಾಜು ಮಾತನಾಡಿ, ಮಕ್ಕಳಿಗೆ ವಚನ ಸಂಸ್ಕೃತಿ ಪರಿಚಯವಾಗಬೇಕು. ನೆಮ್ಮದಿ ಬದುಕಿಗೆ ಮಹಾನ್ ಪುರುಷರ ನೀಡಿದ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದರು.ಈ ಸಂದರ್ಭದಲ್ಲಿ ಹೆಬ್ಬಾಳು ಧರ್ಮಸ್ಥಳ ಸಂಘದ ಅಧ್ಯಕ್ಷೆ ಮಲ್ಲಿಗಮ್ಮ, ದೇಗುಲ ಖಜಾಂಚಿ ಮೋಹನ್, ನಿವೃತ್ತ ಶಿಕ್ಷಕ ರಮೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಗದೀಶ್, ಮಹಿಳಾ ಸಂಘದ ಪ್ರೇಮಾ, ಸಿದ್ದಮ್ಮ ಹಾಜರಿದ್ದರು.