ಸಾರಾಂಶ
ನೂತನ ಎಸ್ಪಿ ಅಂಶುಕುಮಾರ್ ಹೇಳಿಕೆ
ಕನ್ನಡಪ್ರಭ ವಾರ್ತೆ ಹಾವೇರಿಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಳವಾಗಿದ್ದು, ಅಪಘಾತ ಹೆಚ್ಚುತ್ತಿವೆ. ಅದಕ್ಕಾಗಿ ಹೆಲ್ಮೆಟ್ ಕಡ್ಡಾಯ ಸೇರಿದಂತೆ ಸಂಚಾರ ನಿಯಮ ಪಾಲನೆ ಕುರಿತು ಒಂದು ತಿಂಗಳ ಕಾಲ ಜಾಗೃತಿ ಮೂಡಿಸಲಾಗುವುದು. ನಂತರ ಹೆಲ್ಮೆಟ್ ಕಡ್ಡಾಯ ಜಾರಿಗೊಳಿಸಲಾಗುವುದು ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ತಿಳಿಸಿದರು.
ಇಲ್ಲಿಯ ಎಸ್ಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಓಡಾಡುತ್ತಿದ್ದಾರೆ. ಇದರಿಂದ ಅಪಘಾತ ಪ್ರಕರಣಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲಾದ್ಯಂತ ಸಂಚಾರ ನಿಯಮ ಪಾಲನೆ ಮತ್ತು ಹೆಲ್ಮೆಟ್ ಧರಿಸುವ ಬಗ್ಗೆ ಒಂದು ತಿಂಗಳು ಜಾಗೃತಿ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳುತ್ತೇವೆ. ನಂತರ ಹೆಲ್ಮೆಟ್ ಧರಿಸದ ಬೈಕ್ ಸವಾರರು ಮತ್ತು ಸೀಟ್ ಬೆಲ್ಟ್ ಧರಿಸದ ವಾಹನ ಚಾಲಕರಿಗೆ ದಂಡ ಹಾಕುತ್ತೇವೆ. ಟ್ರಿಪಲ್ ರೈಡಿಂಗ್ ಮತ್ತು ಅತಿವೇಗ ಚಾಲನೆ ವಿರುದ್ಧವೂ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಅಕ್ರಮಕ್ಕೆ ಬ್ರೇಕ್:
ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು ಮುಂತಾದ ಅಕ್ರಮ ಚಟುವಟಿಕೆಗಳು ಗಮನಕ್ಕೆ ಬಂದರೆ ಸಾರ್ವಜನಿಕರು ವಾಟ್ಸ್‌ಆ್ಯಪ್ ಸಂದೇಶ ಅಥವಾ ಕರೆ ಮಾಡಿ ದೂರು ಸಲ್ಲಿಸಬಹುದು.ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.ಸರಗಳ್ಳತನ ಮತ್ತು ಮನೆಗಳ್ಳತನ ಪ್ರಕರಣಗಳು ಎಲ್ಲಿ ಹೆಚ್ಚು ನಡೆಯುತ್ತಿವೆ ಎಂಬುದನ್ನು ತಿಳಿದುಕೊಂಡು ಅಂತಹ ಪ್ರದೇಶಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುತ್ತೇವೆ.ರಾತ್ರಿ ವೇಳೆ ಗಸ್ತು ಕಾರ್ಯಾಚರಣೆ ಚುರುಕುಗೊಳಿಸಿ, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ವಿಚಾರಣೆ ನಡೆಸುತ್ತೇವೆ. ಬೆಳಗ್ಗೆ 4ರಿಂದ ಬೆಳಗ್ಗೆ 9 ರವರೆಗೆ ಗುಡ್ ಮಾರ್ನಿಂಗ್ ಬೀಟ್ ಜಾರಿಗೊಳಿಸುತ್ತೇವೆ ಎಂದರು.
ನಗರ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕೊರತೆ ಗಮನಕ್ಕೆ ಬಂದಿದೆ. ನಗರಸಭೆ ಮತ್ತು ಜಿಲ್ಲಾಡಳಿತದ ಜತೆ ಈ ಬಗ್ಗೆ ಚರ್ಚಿಸಿ, ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅನುಷ್ಠಾನಕ್ಕೆ ಒತ್ತು ನೀಡಲಾಗುವುದು. ಮನೆ, ಅಂಗಡಿ ಮಾಲೀಕರು ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸುತ್ತೇವೆ ಎಂದರು.ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸದೇ ರಾಜಿ, ಸಂಧಾನ ನಡೆಯುತ್ತಿರುವ ಬಗ್ಗೆ ಮಾಧ್ಯಮವರ ಪ್ರಶ್ನೆಗೆ ಮುಖ್ಯಮಂತ್ರಿಯವರು ಸಾರ್ವಜನಿಕರ ದೂರು ದಾಖಲಿಸಿಕೊಂಡು, ನಿಷ್ಪಕ್ಷಪಾತ ತನಿಖೆಗೆ ಸೂಚನೆ ನೀಡಿದ್ದಾರೆ. ಅದರಂತೆ ಎಫ್‌ಐಆರ್ ದಾಖಲಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ರಾಜಿ, ಸಂಧಾನ ಮಾಡಿಸುವುದು ಪೊಲೀಸರ ಕೆಲಸವಲ್ಲ ಎಂದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))