ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಐ.ಸಿ.ವೈ.ಎಂ. ಮೂಡುಬಿದಿರೆ ಘಟಕ ವತಿಯಿಂದ ಐ.ಸಿ.ವೈ.ಎಂ. ಮೂಡುಬಿದಿರೆ ವಲಯ ಮತ್ತು ಐ.ಸಿ.ವೈ.ಎಂ. ಮಂಗಳೂರು ಧರ್ಮಪ್ರಾಂತ್ಯದ ಸಹಯೋಗದೊಂದಿಗೆ ಮಾದಕ ದ್ರವ್ಯ ಸೇವನೆಯ ಬಗ್ಗೆ ಜಾಗೃತಿ ಮೂಡಿಸಲು ವಾಕಥಾನ್ ಕಾರ್ಯಕ್ರಮ ಭಾನುವಾರ ನಡೆಯಿತು.ವಿದ್ಯಾಗಿರಿ ಬಸ್ ನಿಲ್ದಾಣದಿಂದ ಸಂಜೆ 3 ಗಂಟೆಗೆ ವಾಕಥಾನ್ ಪ್ರಾರಂಭವಾಯಿತು. ಐ.ಸಿ.ವೈ.ಎಂ. ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕ ವಂ. ಗುರು ಅಶ್ವಿನ್ ಲೋಹಿತ್ ಕಾರ್ಡೋಜಾ ಮತ್ತು ಐ.ಸಿ.ವೈ.ಎಂ. ಮೂಡುಬಿದಿರೆ ಘಟಕದ ನಿರ್ದೇಶಕರಾದ ಅ.ವಂ. ಗುರು ಓನಿಲ್ ಡಿಸೋಜಾ ಪಥಸಂಚಲನದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿದರು.
ಐ.ಸಿ.ವೈ.ಎಂ. ಮಂಗಳೂರು ಕೇಂದ್ರಿಯ ಸಮಿತಿಯ ಅಧ್ಯಕ್ಷ ವಿನ್‌ಸ್ಟನ್ ಸಿಕ್ವೆರಾ ಪ್ರಾಸ್ತಾವಿಕವಾಗಿ ಮಾತನಾಡಿದರು.ಮೆರವಣಿಗೆ ಪ್ರಧಾನ ಬ್ಯಾನರ್‌ನೊಂದಿಗೆ ಮತ್ತು ಐ.ಸಿ.ವೈ.ಎಂ. ಮೂಡುಬಿದಿರೆ ಘಟಕ, ವಲಯ ಮತ್ತು ಧರ್ಮಪ್ರಾಂತ್ಯದ ಧ್ವಜದೊಂದಿಗೆ ನಡೆದಿತು. ಡ್ರಗ್ ಜಾಗೃತಿಯ ಕುರಿತ ಶಕ್ತಿಯುತ ಸಂದೇಶಗಳನ್ನು ಹೊಂದಿರುವ ಫಲಕಗಳನ್ನು ಹಿಡಿದಿದ್ದ ಪಾಲ್ಗೊಳ್ಳುವವರೊಂದಿಗೆ, ನೀರು ಮತ್ತು ಆಂಬ್ಯುಲೆನ್ಸ್ ಸೇರಿದಂತೆ ಅಗತ್ಯ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.
ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ, ಐ.ಸಿ.ವೈ.ಎಂ. ಮೂಡುಬಿದಿರೆ ಘಟಕವು ಮಾದಕ ದ್ರವ್ಯ ಬಳಕೆಯ ಅಪಾಯಗಳನ್ನು ಸಾರುವ ಬೀದಿ ನಾಟಕ ಪ್ರದರ್ಶಿಸಿತು.ಸಂಪನ್ಮೂಲ ವ್ಯಕ್ತಿ ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.28 ಯುವಕರು ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದಾರೆ ಎಂಬ ಅಂಕಿ ಅಂಶ ಹಂಚಿಕೊಂಡರು ಮತ್ತು ಈ ಸಮಸ್ಯೆ ನಿವಾರಿಸಲು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಈ ವಾಕಥಾನ್‌ನಲ್ಲಿ ಐ.ಸಿ.ವೈ.ಎಂ. ಕೇಂದ್ರಿಯ ಸಮಿತಿ ಸದಸ್ಯರು ಹಾಗೂ ಹಲವಾರು ಐ.ಸಿ.ವೈ.ಎಂ. ಘಟಕಗಳು ಸೇರಿದಂತೆ ಸುಮಾರು 200 ಯುವಕರು ಭಾಗವಹಿಸಿದ್ದರು.ಸಮಾರೋಪ ಸಮಾರಂಭವನ್ನು ಕೊರ್ಪುಸ್ ಕ್ರಿಸ್ಟಿ ಚರ್ಚ್‌ನಲ್ಲಿ ಏರ್ಪಡಿಸಲಾಯಿತು. ಐ.ಸಿ.ವೈ.ಎಂ. ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ವಿನ್‌ಸ್ಟನ್ ಸಿಕ್ವೆರಾ, ಐ.ಸಿ.ವೈ.ಎಂ. ಮೂಡುಬಿದಿರೆ ಘಟಕದ ಅಧ್ಯಕ್ಷ ವಿಯಾನ್ ಡಿಸೋಜ, ಐ.ಸಿ.ವೈ.ಎಂ. ಮೂಡುಬಿದಿರೆ ವಲಯದ ಅಧ್ಯಕ್ಷ ಜೇವಿನ್ ಡಿಸೋಜ,ಐ.ಸಿ.ವೈ.ಎಂ ಮೂಡುಬಿದಿರೆ ಘಟಕದ ಸಂಚಾಲಕರಾದ ಕೆವಿನ್ ಡಿಸೋಜ ಮತ್ತು ರಾಯಸ್ಟನ್ ಪಿಂಟೋ, ಗೋಲ್ಡನ್ ಜ್ಯುಬಿಲಿ ಸಂಚಾಲಕರಾದ ವಿನ್ಸೆಂಟ್ ಮಸ್ಕರೇನಸ್ ಸೇರಿದಂತೆ ಗಣ್ಯರು ಇದ್ದರು.
ವಿಯಾನ್ ಡಿಸೋಜಾ ಸ್ವಾಗತಿಸಿದರು, ನಂತರ ಧರ್ಮಗುರು ಅಶ್ವಿನ್ ಲೋಹಿತ್ ಕಾರ್ಡೋಜಾ ಮತ್ತು ಧರ್ಮ ಗುರು ಓನಿಲ್ ಡಿಸೋಜಾ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಅಶ್ವಿನ್ ಡಿಸೋಜ ಹಾಗೂ ನಿಶಲ್ ಡಿಸಿಲ್ವ ನಿರೂಪಿಸಿದರು. ಜೆವಿನ್ ಡಿಸೋಜಾ ವಂದಿಸಿದರು.