ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ವೇದಾಂತ ದರ್ಶನಗಳ ಅಧ್ಯಯನದಿಂದಲೇ ನಾವು ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಅರಿತುಕೊಳ್ಳಲು ಸಾಧ್ಯವಿದೆ. ಬ್ರಹ್ಮಸೂತ್ರ, ಭಗವದ್ಗೀತೆ ಮತ್ತು ಉಪನಿಷತ್ತುಗಳೆಂಬ ಪ್ರಸ್ಥಾನತ್ರಯಗಳಲ್ಲಿ ಉಪನಿಷತ್ತುಗಳು ವೇದದ ಭಾಗವೇ ಆಗಿದೆ ಎಂದು ವೇದವಿದ್ವಾಂಸ ಡಾ. ಕಾರ್ತಿಕ್ ವಾಗ್ಳೆ ಪಂಚನಬೆಟ್ಟು ಹೇಳಿದರು.ಅವರು ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಸಹಯೋಗದಲ್ಲಿ ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ‘ಮಾಂಡೂಕ ಉಪನಿಷತ್ತು’ ಕುರಿತು ಉಪನ್ಯಾಸ ನೀಡಿದರು.ಅರ್ಥವೇದದಲ್ಲಿ ಬರುವ ಮಾಂಡೂಕ ಉಪನಿಷತ್ ಗಾತ್ರದ ದೃಷ್ಟಿಯಿಂದ ಹನ್ನೆರಡು ಮಂತ್ರಗಳುಳ್ಳ ಸಣ್ಣ ಉಪನಿಷತ್ತು. ಆದರೂ ಮೋಕ್ಷಾಪೇಕ್ಷಿಗಳಿಗೆ ಇದು ಅತ್ಯಂತ ಮಹತ್ವಪೂರ್ಣವಾದ ಉಪನಿಷತ್ ಆಗಿದ್ದು, ಬ್ರಹ್ಮ ಜ್ಞಾನವನ್ನು ಹೊಂದುವುದರಿಂದ ಲೌಕಿಕದ ಮೇಲಿನ ಮೋಹ ಕಳೆದು ಮೋಕ್ಷದೆಡೆಗೆ ಸಾಗುವ ಸಾಧನಾಮಾರ್ಗವನ್ನು ಇದು ವಿವರಿಸುತ್ತದೆ ಎಂದರು.ಡಾ.ನಾ.ಮೊಗಸಾಲೆ, ಎಸ್. ನಿತ್ಯಾನಂದ ಪೈ, ಮಾಜಿ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಉಪಸ್ಥಿತರಿದ್ದರು. ಶಾರ್ವರಿ ಪ್ರಾರ್ಥಿಸಿದರು. ಮಾಲತಿ ವಸಂತರಾಜ್ ಅತಿಥಿಗಳನ್ನು ಪರಿಚಯಿಸಿದರು. ಸುಲೋಚನಾ ಬಿ.ವಿ. ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ಶೈಲಜಾ ಹೆಗ್ಡೆ ವಂದಿಸಿದರು.