ಮೂಡುಬಿದಿರೆ: ಎಜಿಇ ಕಾಲೇಜು ಶಿಕ್ಷಕರ ನಾಲ್ಕನೇ ಸಮಾವೇಶ

| Published : Sep 22 2025, 01:02 AM IST

ಸಾರಾಂಶ

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ಮಣಿಪಾಲ ಅಕಾಡೆಮಿ ಹೈಯರ್ ಎಜುಕೇಶನ್ (ಮಾಹೆ) ಕುಲಾಧಿಪತಿ ಡಾ.ರಾಮದಾಸ್ ಎಂ. ಪೈ ಜನ್ಮ ದಿನಾಚರಣೆಯ ಅಂಗವಾಗಿವ್‌ ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಎಜಿಇ) ಕಾಲೇಜು ಶಿಕ್ಷಕರ ೪ ನೇ ಸಮಾವೇಶ ನೆರವೇರಿತು.

ಮೂಡುಬಿದಿರೆ: ಕೃತಕ ಬುದ್ಧಿಮತ್ತೆ ಸೇರಿದಂತೆ ಆಳವಾದ ತಂತ್ರಜ್ಞಾನಗಳು ಶಿಕ್ಷಣ ಕ್ಷೇತ್ರದ ಮೇಲೆ ಅಪಾರ ಪ್ರಭಾವ ಬೀರುತ್ತಿವೆ. ಆದರೆ ಮಾನವನನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಏಕೆಂದರೆ ಕೃತಕ ಬುದ್ಧಿಮತ್ತೆಯನ್ನು ಮಾನವರೇ ಕಂಡುಹಿಡಿದು ಅಭಿವೃದ್ಧಿ ಪಡಿಸಿದ್ದಾರೆ. ಆದ್ದರಿಂದ ನಾವು ನಮ್ಮನ್ನು ಬಲಪಡಿಸಿಕೊಳ್ಳಬೇಕು, ಜ್ಞಾನವನ್ನು ವಿಸ್ತರಿಸಬೇಕು ಎಂದು ಮಾಹೆ ಉಪಕುಲಪತಿ ಲೆ.ಜ. ಡಾ. ಎಂ.ಡಿ. ವೆಂಕಟೇಶ್ ಹೇಳಿದ್ದಾರೆ.

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ಮಣಿಪಾಲ ಅಕಾಡೆಮಿ ಹೈಯರ್ ಎಜುಕೇಶನ್ (ಮಾಹೆ) ಕುಲಾಧಿಪತಿ ಡಾ.ರಾಮದಾಸ್ ಎಂ. ಪೈ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಎಜಿಇ) ಕಾಲೇಜು ಶಿಕ್ಷಕರ ೪ ನೇ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಪದ್ಮಶ್ರೀ ಪುರಸ್ಕೃತ ಡಾ.ಟಿ.ಎಂ.ಎ.ಪೈ ಅವರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಎಜಿಇ)ನ್ನು ಮಣಿಪಾಲದಲ್ಲಿ ಸ್ಥಾಪಿಸಿದರು. ಈ ಸಂಸ್ಥೆಗಳ ಮೂಲಕ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದರು. ತಮ್ಮ ತಂದೆಯ ದೃಷ್ಟಿಯನ್ನು ಮುಂದುವರಿಸಿದ ಡಾ.ರಾಮದಾಸ್ ಎಂ. ಪೈ ಅವರ ನಾಯಕತ್ವದಲ್ಲಿ ಮಣಿಪಾಲವು ಅಸಾಧಾರಣ ಸಾಧನೆಗಳನ್ನು ಕಂಡಿ ಎಂದು ಎಜಿಇ ಆಡಳಿತಾಧಿಕಾರಿ ಡಾ. ಶ್ರೀಧರ ರಂಗನಾಥ್ ಪೈ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.

ಟಿ.ಎಂ.ಎ.ಪೈ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಉಪಸ್ಥಿತರಿದ್ದರು. ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷ್ಮಿ ವಂದಿಸಿದರು. ಭೌತ ಶಾಸ್ತ್ರ ಉಪನ್ಯಾಸಕಿ ಚೈತ್ರಾ ನಿರೂಪಿಸಿದರು.