ಸಾರಾಂಶ
ಮಂಗಳೂರು: ರಾಜ್ಯ ಸರ್ಕಾರ ತರಾತುರಿಯಲ್ಲಿ ನಡೆಸಲುದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮರು ಪರಿಶೀಲಿಸಬೇಕು. ಅಲ್ಲದೆ ಹಿಂದೂ 47 ಉಪಜಾತಿಗಳಲ್ಲಿ ಸೇರಿಸಿರುವ ಕ್ರಿಶ್ಚಿಯನ್ ಪದ ಬಳಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಮಂಗಳೂರಿನ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಆಗ್ರಹಿಸಿದೆ.ಹಿಂದೂ ಜಾತಿಗಳ ನಡುವೆ ಕ್ರೈಸ್ತರನ್ನು ಸೇರಿಸುವ ಹುನ್ನಾರದ ವಿರುದ್ಧ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸ್ವಾಮೀಜಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ವಿಶ್ವಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ಶನಿವಾರ ನಗರದ ಬಾಳಂಭಟ್ ಸಭಾಂಗಣದಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಗೊಂದಲ ಶಮನ ಬಳಿಕವೇ ಸಮೀಕ್ಷೆ ನಡೆಸಿ:ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ತರಾತುರಿಯ ಜಾತಿ ಸಮೀಕ್ಷೆಯಿಂದಾಗಿ ಹಿಂದೂ ಸಮಾಜಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಸಮೀಕ್ಷೆಯ ಮೂಲಕ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯವನ್ನು ಹಿಂದೂ ಜಾತಿಯೊಳಗೆ ತರುವುದಕ್ಕೆ ತೀವ್ರ ವಿರೋಧವನ್ನು ಸಭೆ ವ್ಯಕ್ತಪಡಿಸಿದೆ. ಪ್ರಸ್ತುತ ಜಾತಿಗಣತಿಯಲ್ಲಿ ಇರುವ ಗೊಂದಲಗಳು ಬಗೆಹರಿದ ಬಳಿಕವಷ್ಟೇ ಈ ಸಮೀಕ್ಷೆ ನಡೆಯಬೇಕು ಎಂದರು.
ಜಾತಿ ಸಮೀಕ್ಷೆಯ ಆಯೋಗದ ನಿರ್ಧಾರ ಮತಾಂತರಕ್ಕೆ ಪ್ರೇರಣೆ ನೀಡಿದಂತಾಗಿದೆ. ತರಾತುರಿಯಲ್ಲಿ ನಡೆಸುವ ಸಮೀಕ್ಷೆಯ ಬಗ್ಗೆ ಆತಂಕವಿದ್ದು, ಸರ್ಕಾರ ತಕ್ಷಣ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ದಸರಾ ಹಬ್ಬದ ಈ ಸಂದರ್ಭ ಸಮೀಕ್ಷೆ ಸರಿಯಲ್ಲ. ರಾಜ್ಯದ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೇಸಿಗೆ ಕಾಲದಲ್ಲಿ ಸಮೀಕ್ಷೆ ಮಾಡುವುದು ಒಳಿತು. ಹಿಂದೂ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಎಂದು ನಮೂದಿಸಿದರೆ ಅವರಿಗೆ ಯಾವುದೇ ಮೀಸಲಾತಿ ಸಿಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಘೋಷಿಸಬೇಕು ಎಂದು ದುಂಡುಮೇಜಿನ ಸಭೆ ಆಗ್ರಹಿಸಿದೆ ಎಂದು ಸ್ವಾಮೀಜಿ ಹೇಳಿದರು.ಮಾಡೂರು ಶಿವಗಿರಿ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ, ಓಂಶ್ರೀ ಮಠದ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಶಿವಜ್ಞಾನಮಯಿ, ಕಾಣಿಯೂರು ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಗುರುಪುರ ಜಂಗಮ ಮಠದ ರುದ್ರಮುಖಿ ಮಹಾಸ್ವಾಮೀಜಿ, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಸ್ವಾಮೀಜಿ, ಮುಳಿಯ ಶ್ರೀ ಶಿವಾನಂದ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರೊ.ಎಂ.ಬಿ.ಪುರಾಣಿಕ್, ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕೆ.ಟಿ. ಉಲ್ಲಾಸ್ ಮತ್ತಿತರರು ಇದ್ದರು.