ಕನ್ನಡಪ್ರಭ ವಾರ್ತೆ ಹಲಗೂರು
ಮಾರುಕಟ್ಟೆಗಳಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಮಧ್ಯವರ್ತಿಗಳೇ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ರೈತರು ಉತ್ಪಾದನೆಗೆ ಹೆಚ್ಚಿನ ವೆಚ್ಚ ಭರಿಸುತ್ತಿದ್ದರೂ ಅವರಿಗೆ ತಕ್ಕ ಆದಾಯ ಸಿಗುತ್ತಿಲ್ಲ ಎಂದು ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಹಾಗೂ ಸಮಗ್ರ ಸಾವಯವ ಸಂಸ್ಥೆ ಅಧ್ಯಕ್ಷ ಜೋಗಿಗೌಡ ಬೇಸರ ವ್ಯಕ್ತಪಡಿಸಿದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಮೀಪದ ನಿಟ್ಟೂರು ಪ್ರೌಢಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದೆ. ಹೋರಾಟಕ್ಕಿಂತ ಸಂವಾದದ ಮೂಲಕ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.
ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆಯ ಯಮದೂರು ಸಿದ್ದರಾಜು ಮಾತನಾಡಿ, ಜೋಗಿಗೌಡರು ಕೃಷಿ ಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮ ನಡೆಸಿ ಜಾಗೃತಿ ಮೂಡಿಸಿದ್ದಾರೆ. ರಾಜ್ಯದಲ್ಲಿ ಸಾವಿರಾರು ಕೆರೆಗಳಿದ್ದು, ಅವುಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದರು.ಪರಿಸರ ಉಳಿದರೆ ಮಾತ್ರ ನಮ್ಮ ಬದುಕು ಸಾಧ್ಯ. ಪ್ರತಿಯೊಬ್ಬರೂ ತಮ್ಮ ಹೊಲಗದ್ದೆಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದರು.
ನೀರಾವರಿ ಇಲಾಖೆ ಗೋಪಿನಾಥ್ ಮಾತನಾಡಿ, ಜೂನ್ 5ರಂದು ವಿಶ್ವದಾದ್ಯಂತ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಆದರೆ, ಕೇವಲ ಸಸಿ ನೆಟ್ಟರೆ ಸಾಲದು, ಅವುಗಳನ್ನು ಸಂರಕ್ಷಿಸಿ ಬೆಳೆಸುವ ಜವಾಬ್ದಾರಿಯೂ ನಮ್ಮದಾಗಿದೆ. ಮರಗಳು ನಮಗೆ ಅಗತ್ಯ ಆಮ್ಲಜನಕವನ್ನು ನೀಡುತ್ತವೆ. ಪ್ಲಾಸ್ಟಿಕ್ ಬಳಕೆ ಮತ್ತು ಅಜಾಗರೂಕ ಕಸ ವಿಲೇವಾರಿ ಪರಿಸರಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಜೋಗಿಗೌಡ, ರಂಗೇಗೌಡ, ರಾಜಣ್ಣ, ಮುಖ್ಯ ಶಿಕ್ಷಕರಾದ ಕೆ.ಎಲ್. ದೇವರಾಜು, ತಿಮ್ಮರಾಜು, ಪಿಡಿಒ ನಟೇಶ್, ಅಶೋಕ ಅರ್ಜುನ್ ಹಾಗೂ ಶಿಕ್ಷಕರಾದ ಶಿವಲಿಂಗೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.