ಕನ್ನಡಪ್ರಭ ವಾರ್ತೆ ಮದ್ದೂರು
ಆರೋಗ್ಯವಂತ ಪ್ರತಿಯೊಬ್ಬರು ವೈದ್ಯರ ಸಲಹೆ ಪಡೆದು ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆ ಇರುವ ಜೀವಗಳನ್ನು ಉಳಿಸಲು ಮುಂದಾಗಬೇಕು ಎಂದು ವೈದ್ಯನಾಥಪುರ ಕದಂಬ ಜಂಗಮ ಮಠದ ಪೀಠಾಧ್ಯಕ್ಷ ಶ್ರೀ ರೇಣುಕಾ ಶಿವಚಾರ್ಯ ಸ್ವಾಮೀಜಿ ಸಲಹೆ ನೀಡಿದರು.ನಗರ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ವಿವಿಧ ಸಂಘ, ಸಂಸ್ಥೆಗಳ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಚನಕಾರ ಶ್ರೀ ಬಸವಣ್ಣ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು ಹಾಗೂ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ಗೌರವಾರ್ಥ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಪಂಚದಲ್ಲಿ ರಕ್ತಕ್ಕೆ ಪರ್ಯಾಯವಾದ ಯಾವುದೇ ವಸ್ತುವಿಲ್ಲ. ಹೀಗಾಗಿ ಸಂಘ, ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಶಿಬಿರ ಆಯೋಜಿಸಿ ರಕ್ತ ಸಂಗ್ರಹ ಮಾಡುವ ಸಂಕಷ್ಟದಲ್ಲಿರುವ ಜೀವಗಳನ್ನು ಉಳಿಸಬೇಕು ತಿಳಿಸಿದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಂಡು ಸಸಿಗಳನ್ನು ವಿತರಣೆ ಮಾಡಿ ಪರಿಸರ ಸಂರಕ್ಷಣೆಗೆ ಮುಂದಾಗಿರುವುದು ಪ್ರಶಂಸನೀಯ. ಪರಿಸರ ಉಳಿದರೆ ಮಾತ್ರ ಭೂಮಿ ಮೇಲಿನ ಸಕಲ ಜೀವರಾಶಿ ನೆಮ್ಮದಿಯಾಗಿ ಜೀವಿಸಲು ಸಾಧ್ಯ ಎಂಬುವುದನ್ನು ಪ್ರತಿಯೊಬ್ಬರು ತಿಳಿಯಬೇಕು ಎಂದರು.
ರೋಟರಿ ಅಧ್ಯಕ್ಷ ಎಸ್.ಪಿ.ಶ್ರೀನಿವಾಸ್ ಮಾತನಾಡಿ, ರಕ್ತದಾನವು ಮಹಾದಾನ. ಒಬ್ಬರು ನೀಡುವ ರಕ್ತವು ತುರ್ತು ಪರಿಸ್ಥಿತಿಯಲ್ಲಿರುವ ಮೂವರ ಜೀವವನ್ನು ಉಳಿಸಬಲ್ಲದು. ಅಪಘಾತ, ಶಸ್ತ್ರಚಿಕಿತ್ಸೆ ಅಥವಾ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಕ್ತದ ಅವಶ್ಯಕತೆ ಇದೆ ಎಂದರು.
ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. 18 ರಿಂದ 65 ವರ್ಷದೊಳಗಿನ ಆರೋಗ್ಯವಂತರು ಕನಿಷ್ಠ 45 ಕೆ.ಜಿ ಇರುವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು ಎಂದು ಹೇಳಿದರು.
ಶಿಬಿರದಲ್ಲಿ 66 ಯೂನಿಟ್ ರಕ್ತ ಸಂಗ್ರಹವಾಯಿತು. ಗೋಲ್ಡನ್ ಮ್ಯೂಸಿಕ್ ಚಂದ್ರಶೇಖರ್ ನಡೆಸಿಕೊಟ್ಟ ರಸ ಮಂಜರಿ ಕಾರ್ಯಕ್ರಮ ಕೇಳುಗರ ಗಮನ ಸೆಳೆಯಿತು.ಶಿಬಿರದಲ್ಲಿ ನಾಲ್ವಡಿ ಬಳಗದ ಕೃಷ್ಣ, ಅನಿಲ್, ಗಣೇಶ್, ನವೀನ್, ತಿಲಕ್, ಟಿ.ವೆಂಕಟೇಶ್, ಸಿ.ಎಂ.ಪ್ರಸನ್ನಕುಮಾರ್, ಚಾಮನಹಳ್ಳಿ ಮಂಜು, ಕೀರ್ತಿ ರಾಜು, ಪ್ರಾಂಶುಪಾಲ ರವಿ, ಪ್ರೊ.ಮಹೇಶ್ ಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ಹೊನ್ನೇಗೌಡ, ತಿಪ್ಪೂರು ರಾಜೇಶ್, ಸೊ.ಶಿ.ಪ್ರಕಾಶ್, ವಿ.ಸಿ.ಉಮಾಶಂಕರ್, ಶಶಿಗೌಡ, ಮಹೇಶ್, ಎಂ.ಜೆ.ಸುಮಂತ್, ಹೊಂಡಾ ಷೋ ರೂಮ್ ಮಹೇಶ್ ಸೇರಿದಂತೆ ಇತರರು ಇದ್ದರು.