ಬಳ್ಳಾರಿ ಜಿಲ್ಲೆಯ ಬಾಣಂತಿಯರ ಸಾವಿನ ಪ್ರಕರಣ : ವರದಿಗೆ ರಾಜ್ಯ ಸರ್ಕಾರ ಸಮಿತಿ ರಚನೆ

| Published : Dec 09 2024, 12:49 AM IST / Updated: Dec 09 2024, 06:43 AM IST

ಬಳ್ಳಾರಿ ಜಿಲ್ಲೆಯ ಬಾಣಂತಿಯರ ಸಾವಿನ ಪ್ರಕರಣ : ವರದಿಗೆ ರಾಜ್ಯ ಸರ್ಕಾರ ಸಮಿತಿ ರಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ಜಿಲ್ಲೆಯ ಬಾಣಂತಿಯರ ಸಾವಿನ ಪ್ರಕರಣದಲ್ಲಿ ಔಷಧಗಳ ಖರೀದಿ ಹಾಗೂ ಅಧಿಕಾರಿಗಳ ಲೋಪದ ಕುರಿತು ಪರಿಶೀಲಿಸಿ ವರದಿ ನೀಡಲು ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಜೊತೆಗೆ ಐದು ದಿನದಲ್ಲಿ ವರದಿ ನೀಡುವಂತೆ ಸಮಿತಿಗೆ ಸೂಚಿಸಿದೆ.

  ಬೆಂಗಳೂರು : ಬಳ್ಳಾರಿ ಜಿಲ್ಲೆಯ ಬಾಣಂತಿಯರ ಸಾವಿನ ಪ್ರಕರಣದಲ್ಲಿ ಔಷಧಗಳ ಖರೀದಿ ಹಾಗೂ ಅಧಿಕಾರಿಗಳ ಲೋಪದ ಕುರಿತು ಪರಿಶೀಲಿಸಿ ವರದಿ ನೀಡಲು ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಜೊತೆಗೆ ಐದು ದಿನದಲ್ಲಿ ವರದಿ ನೀಡುವಂತೆ ಸಮಿತಿಗೆ ಸೂಚಿಸಿದೆ.

ಸಮಿತಿಯಲ್ಲಿ ಯಾರ್‍ಯಾರು?:

ಈ ಸಂಬಂಧ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ.ಕನಗವಲ್ಲಿ ನೇತೃತ್ವದಲ್ಲಿ ಔಷಧ ನಿಯಂತ್ರಣ ಇಲಾಖೆ ಸಹಾಯಕ ಔಷಧ ನಿಯಂತ್ರಕ ವೆಂಕಟೇಶ್‌, ಬೆಂಗಳೂರು ವೈದ್ಯಕೀಯ ಕಾಲೇಜಿನ ಮೈಕ್ರೋಬಯೋಲಜಿಸ್ಟ್‌ ಡಾ.ಆಸೀಮಾಬಾನು ಹಾಗೂ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿಯಿಂದ ನಾಮನಿರ್ದೇಶಿತ ಹಿರಿಯ ಫಾರ್ಮಾಕಾಲಜಿ ಪ್ರಾಧ್ಯಾಪಕರನ್ನು ಒಳಗೊಂಡ ಪರಿಶೀಲನಾ ಸಮಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಚಿಸಿದೆ.

ಸಮಿತಿ ಕಾರ್ಯವೇನು?:

ನ.30ರವರೆಗೆ 196 ಬ್ಯಾಚ್‌ ರಿಂಗರ್‌ ಲ್ಯಾಕ್ಟೇಟ್‌ ದ್ರಾವಣದ ಖರೀದಿ ಆದೇಶದ ಸಂದರ್ಭದಿಂದ ಬಳಿಕ ಘಟನೆಗಳನ್ನು ಅನುಕ್ರಮವಾಗಿ ವಿಶ್ಲೇಷಿಸಬೇಕು; ಕೆಎಸ್‌ಎಂಎಸ್‌ಸಿಎಲ್‌ನಲ್ಲಿ ಆಗಿರಬಹುದಾದ ಲೋಪದೋಷ ಪರಿಶೀಲಿಸಬೇಕು; ವೈದ್ಯಕೀಯ ಸರಬರಾಜು ನಿಗಮದಲ್ಲಿ ಕಾರ್ಯವಿಧಾನ ಬಗ್ಗೆ ಸಮಿತಿಯು ಅಧಿಕಾರಿಗಳ ಪಾತ್ರವನ್ನು ತನಿಖೆ ಮಾಡಬೇಕು; ಲೋಪದೋಷಗಳ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ನಿಗದಿಪಡಿಸಬೇಕಾಗಿದೆ.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ (ಕೆಎಎಸ್‌ಎಂಎಸ್‌ಸಿಎಲ್‌) ಅಸ್ತಿತ್ವದಲ್ಲಿರುವ ಕಾರ್ಯವಿಧಾನ ಪರಿಶೀಲಿಸಬೇಕಿದೆ. ಮತ್ತು ಪ್ರಮಾಣಿತ ಪ್ರಕ್ರಿಯೆ ಅಥವಾ ಉತ್ತಮಪಡಿಸಿಕೊಳ್ಳಬೇಕಾದ ಅಂಶ ತಿಳಿಸಬೇಕು. ಔಷಧ ಸಂಗ್ರಹಣೆ, ಗುಣಮಟ್ಟ ಪರೀಕ್ಷೆ, ಪ್ರತಿಕೂಲ ಪರಿಣಾಮಗಳ ವರದಿ ಇತ್ಯಾದಿಗಳಿಗೆ ಸಂಬಂಧಿಸಿ ತಮಿಳುನಾಡು ರಾಜಸ್ಥಾನದಂಥ ರಾಜ್ಯಗಳಲ್ಲಿ ಅನುಸರಿಸಲಾಗುತ್ತಿರುವ ಉತ್ತಮ ಪ್ರಕ್ರಿಯೆ ಅಥವಾ ಕಾರ್ಯವಿಧಾನವನ್ನು ಕೆಎಸ್‌ಎಂಎಸ್‌ಸಿಎಲ್‌ ನಲ್ಲಿ ಅಸ್ತಿತ್ವದಲ್ಲಿರುವ ಅಭ್ಯಾಸದೊಂದಿಗೆ ತುಲನೆ ಮಾಡಿ ತಿಳಿಸಬೇಕಾಗಿದೆ. ವೈದ್ಯಕೀಯ ಸೌಲಭ್ಯ ಹೆಚ್ಚಳಕ್ಕಾಗಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಉಪಕುಲಪತಿ ಅಥವಾ ಪ್ರತಿನಿಧಿಗಳಿಂದ ಸಲಹೆ ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.