ವಿ. ಬಾಡಗ ಹೈಫ್ಲೈಯರ್ಸ್ ಕಪ್ ಹಾಕಿ: ಇಂದು ಸೆಮಿಫೈನಲ್‌

| Published : Dec 09 2024, 12:49 AM IST

ಸಾರಾಂಶ

ಹೈಪ್ಲೈಯರ್ಸ್‌ ಕಪ್‌ನಲ್ಲಿ ಚಂದೂರ, ಚೇದಂಡ, ಮುರುವಂಡ ಮತ್ತು ತೀತಮಾಡ ಸೆಮಿಫೈನಲ್‌ ಪ್ರವೇಶಿಸಿದೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆದ.ಕೊಡಗಿನ ವಿ. ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆ ವತಿಯಿಂದ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಬಿಟ್ಟಂಗಾಲ, ಬಿ. ಶೆಟ್ಟಿಗೇರಿ ಮತ್ತು ಹಾತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಐನ್‌ಮನೆಗಳನ್ನು ಹೊಂದಿರುವ ಕೊಡವ ಮನೆತನಗಳ ನಡುವಿನ 3ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಫ್ಲೈಯರ್ಸ್ ಕಪ್‌ನಲ್ಲಿ ಚಂದೂರ, ಚೇಂದಂಡ, ಮುರುವಂಡ ಮತ್ತು ತೀತಮಾಡ ಸೆಮಿ ಫೈನಲ್‌ ಪ್ರವೇಶಿಸಿದೆ. ಸೆಮಿಫೈನಲ್‌ ಪಂದ್ಯಗಳು ಡಿ.9ರಂದು ಸೋಮವಾರ ನಡೆಯಲಿದೆ.

ಭಾನುವಾರ ನಡೆದ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಚಂದೂರ ತಂಡವು ಕಂಜಿತಂಡ ತಂಡವನ್ನು ಶೂಟೌಟ್‌ನಲ್ಲಿ 5-4 ಗೋಲುಗಳಿಂದ ಮಣಿಸಿ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿತು. ಪ್ರಥಮಾರ್ಧದ 19ನೇ ನಿಮಿಷದಲ್ಲಿ ಚಂದೂರ ತಂಡದ ಪ್ರಶಾಂತ್ ಮಿಂಚಿನ ಗೋಲೊಂದನ್ನು ದಾಖಲಿಸಿ ತಂಡದ ಖಾತೆ ತೆರೆದರು. ದ್ವಿತೀಯಾರ್ಥದ 38ನೇ ನಿಮಿಷದಲ್ಲಿ ಕಂಜಿತಂಡ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರನ್ನು ಸಮರ್ಥವಾಗಿ ಬಳಸಿಕೊಂಡ ತಂಡದ ಅತಿಥಿ ಆಟಗಾರ ದಿವಾನ್ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರಲ್ಲದೆ, ಗೋಲಿನ ಅಂತರವನ್ನು ಸಮವಾಗಿಸಿದರು. ನಂತರ ಉಭಯ ತಂಡಗಳು ಯಾವುದೇ ಗೋಲು ದಾಖಲಿಸಿದ ಕಾರಣ ಫಲಿತಾಂಶಕ್ಕಾಗಿ ಶೂಟೌಟ್‌ ಮೊರೆ ಹೋಗಲಾಯಿತು. ಈ ವೇಳೆ ವಿಜೇತ ತಂಡದ ಪರ 4 ಗೋಲುಗಳು ದಾಖಲಾದರೆ, ಪರಾಜಿತ ತಂಡದ ಪರ 3 ಗೋಲುಗಳು ದಾಖಲಾಯಿತು.2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೇಂದಂಡ ತಂಡ ಕೊಂಗಂಡ ತಂಡವನ್ನು 3-1 ಗೋಲುಗಳಿಂದ ಮಣಿಸಿತು. ಪಂದ್ಯ ಆರಂಭಗೊಂಡ 3ನೇ ನಿಮಿಷದಲ್ಲೇ ಕೊಂಗಂಡ ತಂಡದ ಅತಿಥಿ ಆಟಗಾರ ನಾಚಪ್ಪ, ಗೋಲು ಸಿಡಿಸಿ ತಂಡದ ಖಾತೆ ತೆರೆದರು. ಇದಾದ ಬಳಿಕ ಚೇಂದಂಡ ತಂಡದ ಆಟಗಾರ ಚಿರಾಗ್ 27ನೇ ನಿಮಿಷದಲ್ಲಿ ಗೋಲು ದಾಖಲಿಸಿ ಅಂತರವನ್ನು ಸಮನಾಗಿಸಿದರು. ಇದರಿಂದಾಗಿ ಬಿರುಸಿನ ಆಟಕ್ಕೆ ಒತ್ತು ನೀಡಿದ ಕೊಂಗಂಡ ತಂಡ ಎದುರಾಳಿಯ ‘ಡಿ’ ಆವರಣದೊಳಗೆ ನಿರಂತರವಾಗಿ ದಾಳಿ ನಡೆಸಿತು. ಪರಿಣಾಮ ಕೊಂಗಂಡ ತಂಡದ ಅತಿಥಿ ಆಟಗಾರ ಅವಿನಾಶ್ 51ನೇ ನಿಮಿಷದಲ್ಲಿ ಹಾಗೂ ಮತ್ತೋರ್ವ ಅತಿಥಿ ಆಟಗಾರ ಪೊನ್ನಣ್ಣ 53ನೇ ನಿಮಿಷದಲ್ಲಿ ಆಕರ್ಷಕ ಫೀಲ್ಡ್ ಗೋಲು ಬಾರಿಸಿ ತಂಡದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುರುವಂಡ ತಂಡ, ಮಳವಂಡ ತಂಡವನ್ನು ಶೂಟೌಟ್‌ನಲ್ಲಿ 2-1 ಗೋಲುಗಳಿಂದ ಸೋಲಿಸಿ ಮುನ್ನಡೆ ಸಾಧಿಸಿತು. ಆರಂಭದಿಂದಲೇ ಸಮಬಲದ ಹೋರಾಟ ಕಂಡುಬಂದ ಈ ಪಂದ್ಯದಲ್ಲಿ ದ್ವಿತೀಯಾರ್ಧ ಕೊನೆಗೊಳ್ಳುವವರೆಗೂ ಉಭಯ ತಂಡಗಳು ಯಾವುದೇ ಗೋಲುಗಳು ಗಳಿಸಿರಲಿಲ್ಲ. ಇದರಿಂದ ಪಂದ್ಯದ ವಿಜಯ ನಿರ್ಣಯಕ್ಕಾಗಿ ಶೂಟ್ ಔಟ್ ನಿಯಮಾವಳಿ ಅಳವಡಿಸಲಾಯಿತು. ಈ ಸಂದರ್ಭ ವಿಜೇತ ತಂಡದ ಪರ 2 ಗೋಲುಗಳು ದಾಖಲಾದರೆ, ಪರಾಜಿತ ತಂಡ ಏಕೈಕ ಗೋಲು ಸಿಡಿಸಲು ಶಕ್ತವಾಯಿತು.4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತೀತಮಾಡ ತಂಡವು ಕಡೇಮಾಡ ತಂಡವನ್ನು ಶೂಟ್ ಔಟ್‌ನಲ್ಲಿ 3-2 ಗೋಲುಗಳಿಂದ ಸೋಲಿಸಿ ಸೆಮೀಸ್‌ಗೆ ಅರ್ಹತೆ ಪಡೆಯಿತು. ಪ್ರಥಮಾರ್ಧದ 27ನೇ ನಿಮಿಷದಲ್ಲಿ ತೀತಮಾಡ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರನ್ನು ತಂಡದ ಅತಿಥಿ ಆಟಗಾರ ಮಾದಪ್ಪ ಗೋಲಾಗಿ ಪರಿವರ್ತಿಸಿದರು. ದ್ವಿತೀಯಾರ್ಥದ 59ನೇ ನಿಮಿಷದಲ್ಲಿ ಕಡೇಮಾಡ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರನ್ನು ತಂಡದ ಆಟಗಾರ ಚರ್ಮಣ ಗೋಲಾಗಿ ಪರಿವರ್ತಿಸಿ ಅಂತರವನ್ನು ಸಮವಾಗಿಸಿದರು. ಇದಾದ ಬಳಿಕ ಉಭಯ ತಂಡಗಳು ಯಾವುದೇ ಗೋಲು ಗಳಿಸದ ಕಾರಣ ಅಂತಿಮವಾಗಿ ಶೂಟ್ ಔಟ್ ಅಳವಡಿಸುವುದು ಅನಿವಾರ್ಯವಾಯಿತು.

ಇಂದಿನ ಸೆಮಿಫೈನಲ್‌: ಬೆಳಗ್ಗೆ 11 ಗಂಟೆಗೆ: ಮರುವಂಡ ಮತ್ತು ತೀತಮಾಡ, ಮಧ್ಯಾಹ್ನ 1 ಗಂಟೆಗೆ: ಚಂದೂರ ಮತ್ತು ಚೇಂದಂಡ