ಹೂವಿನಹಡಗಲಿ: ಬಳ್ಳಾರಿ ಸಂಸದರ ನಿಧಿಯಲ್ಲಿ ವಿಕಲಚೇತನರಿಗೆ ವಿತರಣೆಯಾಗಬೇಕಿದ್ದ 14 ಯಂತ್ರ ಚಾಲಿತ ತ್ರಿಚಕ್ರ ವಾಹನಗಳು, ವಿಜಯನಗರ ಜಿಲ್ಲಾ ಒಳ ಕ್ರೀಡಾಂಗಣದಲ್ಲಿ ಮಳೆ, ಗಾಳಿ ಬಿಲಿಸಿಗೆ ಮೈಯೊಡ್ಡಿ ತುಕ್ಕು ಹಿಡಿಯುತ್ತಿವೆ.
2024 -25ನೇ ಸಾಲಿನ ಅಖಂಡ ಬಳ್ಳಾರಿ ಜಿಲ್ಲಾ ಸಂಸದ ಈ. ತುಕಾರಾಂ ಅವರ ಸಂಸದರ ನಿಧಿಯಡಿ 49 ಯಂತ್ರ ಚಾಲಿತ ತ್ರಿಚಕ್ರ ವಾಹನಗಳನ್ನು ಖರೀದಿಸಲಾಗಿದೆ. ಇದರಲ್ಲಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕಡೆಗೂ ವಿತರಣೆಯಾಗಿವೆ. ಇಲ್ಲಿನ ವಿಕಲಚೇತನರು ಯಂತ್ರ ಚಾಲಿತ ತ್ರಿಚಕ್ರ ವಾಹನಗಳನ್ನು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.ವಿಕಲಚೇತನರಿಗೆ ವಾಹನಗಳ ವಿತರಣೆಗೆ ಕೆಲ ಸಮಸ್ಯೆಗಳು ಅಡ್ಡಿಯಾಗಿವೆ. ಇದರಲ್ಲಿ ಫಲಾನುಭವಿಗಳು ಎರಡು ಬಾರಿ ಅರ್ಜಿ ಸಲ್ಲಿಸಿದ್ದಾರೆ. ಅಂಧರು, ಕೈ ಇಲ್ಲದವರೂ ಅರ್ಜಿ ಹಾಕಿದ್ದಾರೆ. ಇಂತಹವರನ್ನು ಆಯ್ಕೆ ಮಾಡಲು ಬರುವುದಿಲ್ಲ. ಇದರಲ್ಲಿಯೂ ರಾಜಕೀಯ ಒಳಸುಳಿ ಸೇರಿಕೊಂಡಿರುವ ಹಿನ್ನೆಲೆಯಲ್ಲಿ ಮತ್ತಷ್ಟು ವಿಳಂಬವಾಗಿದೆ ಎನ್ನಲಾಗಿದೆ.
ಕಳೆದ 4 ತಿಂಗಳ ಹಿಂದೆಯೇ ವಿಕಲಚೇತನರಿಗೆ ಯಂತ್ರ ಚಾಲಿತ ತ್ರಿಚಕ್ರ ವಾಹನಗಳು ವಿತರಣೆಯಾಗಬೇಕಿತ್ತು. ಆದರೆ, ವಿಜಯನಗರ ಜಿಲ್ಲಾ ಒಳ ಕ್ರೀಡಾಂಗಣದ ಆವರಣದಲ್ಲಿ, ಬಿಸಿಲು, ಮಳೆ, ಗಾಳಿಗೆ ತುಕ್ಕು ಹಿಡಿದು ಹಾಳಾಗುತ್ತಿವೆ. ಕೂಡಲೇ ಸಂಸದ ಈ ತುಕಾರಾಂ ಹಾಗೂ ಶಾಸಕ ಕೃಷ್ಣನಾಯ್ಕ ಈ ಕುರಿತು ಗಮನ ಹರಿಸಿ ವಿತರಣೆ ಮಾಡಬೇಕೆಂಬ ಒತ್ತಾಯ ಕೇಳಿ ಬರುತ್ತಿವೆ.ಈಗಾಗಲೇ ಫಲಾನುಭವಿಗಳ ಆಯ್ಕೆ ಪಟ್ಟಿ ಸಿದ್ಧವಿದೆ. ಜತೆಗೆ ಅವರ ಹೆಸರಿನಲ್ಲಿ ವಾಹನಗಳ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿವೆ. ತಾಂತ್ರಿಕ ದೋಷವಿದೆ ಎಂಬ ಕುಂಟು ನೆಪ ಹೇಳುತ್ತ, ವಾಹನಗಳ ವಿತರಣೆಗೆ ಕ್ರಮ ಕೈಗೊಳ್ಳದಿರುವ ಹಿಂದಿನ ಮರ್ಮವೇನು? ವಾಹನಗಳು ಹಾಳಾಗುವ ಮೊದಲೇ ಬಡ ಫಲಾನುಭವಿಗೆ ವಿತರಣೆ ಮಾಡಿದರೇ ಅನುಕೂಲವಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ.
ನಮ್ಮ ತಾಲೂಕಿಗೆ ಸಂಸದರ ನಿಧಿಯಲ್ಲಿ 14 ಯಂತ್ರ ಚಾಲಿತ ತ್ರಿಚಕ್ರಗಳನ್ನು ನೀಡಿದ್ದಾರೆ. ವಿತರಣೆಗೆ ತಾಂತ್ರಿಕ ದೋಷವಿದೆ ಎಂಬ ನೆಪಗಳನ್ನು ಅಧಿಕಾರಿಗಳು ಹೇಳುತ್ತಿದ್ದಾರೆ. ವಿತರಣೆ ಮಾಡಬೇಕಿದ್ದ ವಾಹನಗಳನ್ನು ಕಳೆದ 4 ತಿಂಗಳಿನಿಂದ ಬಿಸಿಲಿನಲ್ಲೇ ಇಟ್ಟಿದ್ದಾರೆ. ಅವುಗಳು ಈಗಾಗಲೇ ಕೆಟ್ಟು ಹೋಗಿರುವ ಅನುಮಾನವಿದೆ. ಇಂತಹ ವಾಹನಗಳನ್ನು ನೀಡಿದರೇ ವಾರದಲ್ಲೇ ರಿಪೇರಿಗೆ ಬರುತ್ತದೆ. ಆದರಿಂದ ವಾಹನಗಳ ಗುಣಮಟ್ಟ ಪರೀಕ್ಷೆ ಮಾಡಿ ಬೇಗನೇ ವಿತರಣೆಗೆ ಕ್ರಮ ಕೈಗೊಳ್ಳದಿದ್ದರೆ ಸಂಘದಿಂದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು
ವಿಕಲಚೇತನ ಹಾಗೂ ಪಾಲಕರ ಸಂಘದ ಅಧ್ಯಕ್ಷ ಎಸ್. ಚಂದ್ರಪ್ಪ ತಳಕಲ್ಲು ತಿಳಿಸಿದರು.