ಸಿಎಂ ಪತ್ನಿಗೆ ಮುಡಾ ನಿವೇಶನ ಕೊಟ್ಟ ಅಧಿಕಾರಿ, ಸಿದ್ದರಾಮಯ್ಯ ಆಪ್ತನಿಗೆ ಇ.ಡಿ. ಶಾಕ್‌

| Published : Oct 29 2024, 12:58 AM IST / Updated: Oct 29 2024, 09:09 AM IST

ಸಿಎಂ ಪತ್ನಿಗೆ ಮುಡಾ ನಿವೇಶನ ಕೊಟ್ಟ ಅಧಿಕಾರಿ, ಸಿದ್ದರಾಮಯ್ಯ ಆಪ್ತನಿಗೆ ಇ.ಡಿ. ಶಾಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ    ನಿವೇಶನ ಹಂಚಿಕೆ ಅಕ್ರಮ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ 10ಕ್ಕೂ ಹೆಚ್ಚಿನ ಕಡೆ ಏಕಕಾಲಕ್ಕೆ ಶೋಧ ಕಾರ್ಯ ನಡೆಸಿ ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

 ಬೆಂಗಳೂರು/ಮೈಸೂರು : ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸನ್ನಿವೇಶಗಳು ನಿರ್ಮಾಣಗೊಳ್ಳುತ್ತಿದ್ದು, ನಿವೇಶನ ಹಂಚಿಕೆ ಅಕ್ರಮ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ 10ಕ್ಕೂ ಹೆಚ್ಚಿನ ಕಡೆ ಏಕಕಾಲಕ್ಕೆ ಶೋಧ ಕಾರ್ಯ ನಡೆಸಿ ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

ಇದರ ನಡುವೆಯೇ, ಇ.ಡಿ. ದಾಳಿ ಹಿನ್ನೆಲೆಯಲ್ಲಿ ಮುಡಾ ಮಾಜಿ ಆಯುಕ್ತರಾದ ನಟೇಶ್ ಮತ್ತು ದಿನೇಶ್‌ ಕುಮಾರ್ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಈ ಪೈಕಿ ನಟೇಶ್‌ ಅವರು ಮುಡಾ ಆಯುಕ್ತರಾಗಿದ್ದಾಗಲೇ ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನ ಹಂಚಿಕೆಯಾಗಿತ್ತು ಎಂಬುದು ಗಮನಾರ್ಹ.

ಮೈಸೂರು, ಬೆಂಗಳೂರಲ್ಲಿ ಇ.ಡಿ. ರೇಡ್:

ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಇ.ಡಿ. ಅಧಿಕಾರಿಗಳು ಓರ್ವ ಬಿಲ್ಡರ್‌, ಮೈಸೂರಿನ ಕಾಂಗ್ರೆಸ್‌ ಮುಖಂಡ ಮತ್ತು ಈ ಹಿಂದೆ ಮುಡಾದ ಆಯುಕ್ತರಾಗಿದ್ದ ಇಬ್ಬರು ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಸೋಮವಾರ ಬೆಳ್ಳಂಬೆಳಗ್ಗೆಯಿಂದ ನಡೆಸಿದ ಶೋಧ ಕಾರ್ಯವು ತಡರಾತ್ರಿವರೆಗೂ ಮುಂದುವರಿದಿತ್ತು.

ಇತ್ತೀಚೆಗಷ್ಟೆ ಮೈಸೂರಿನ ಮುಡಾ ಕಚೇರಿಯಲ್ಲಿ ನಡೆಸಿದ ಶೋಧ ಕಾರ್ಯದಲ್ಲಿ ಲಭ್ಯವಾದ ಹಲವು ಮಾಹಿತಿಗಳ ಮೇರೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಬಿಲ್ಡರ್‌ ಮಂಜುನಾಥ್‌ ಅವರ ಬೆಂಗಳೂರು ಹಾಗೂ ಮೈಸೂರಿನಲ್ಲಿನ ಸ್ಥಳಗಳ ಮೇಲೆ, ಮೈಸೂರಿನ ಕಾಂಗ್ರೆಸ್‌ ಮುಖಂಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಎನ್ನಲಾದ ರಾಕೇಶ್‌ ಪಾಪಣ್ಣ, ಮುಡಾದ ಮಾಜಿ ಆಯುಕ್ತರಾದ ನಟೇಶ್‌ ಮತ್ತು ಜಿ.ಟಿ.ದಿನೇಶ್ ಕುಮಾರ್ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಪರಿಶೀಲನೆ ವೇಳೆ ಮುಡಾ ಹಗರಣ ಸಂಬಂಧ ಹಲವು ಮಾಹಿತಿಗಳು ಲಭ್ಯವಾಗಿವೆ ಎಂದು ಹೇಳಲಾಗಿದೆ.

ಬಿಲ್ಡರ್ ಮಂಜುನಾಥ್ ಅವರಿಗೆ ಸೇರಿದ ಬೆಂಗಳೂರು ಮತ್ತು ಮೈಸೂರಿನ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಬೆಂಗಳೂರಿನ ಜೆ.ಪಿ. ನಗರದಲ್ಲಿನ ನಿವಾಸ, ಕಚೇರಿಗಳು ದಾಳಿಗೊಳಗಾಗಿವೆ. ‘ಎನ್.ಕಾರ್ತಿಕ್ ಡೆವಲಪರ್ಸ್’ ಮಾಲೀಕರಾಗಿರುವ ಮಂಜುನಾಥ್, ಮೈಸೂರಿನಲ್ಲಿ ಕಾರ್ತಿಕ್ ಬಡಾವಣೆ ಹೆಸರಲ್ಲಿ ಲೇಔಟ್ ನಿರ್ಮಾಣ ಮಾಡಿದ್ದರು. ಈ ವೇಳೆ 50:50ರ ಅನುಪಾತದಲ್ಲಿ ನಿವೇಶನ ಹಂಚಿಕೆ ವೇಳೆ ಅಧಿಕಾರಿಗಳಿಗೆ ಲಂಚ ನೀಡಿದ್ದರು ಎನ್ನಲಾಗಿದೆ. ಈ ಆರೋಪ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಮೈಸೂರಿನಲ್ಲೂ ಬಿಲ್ಡರ್ ಮಂಜುನಾಥ್ ಮನೆ, ಕಚೇರಿ, ಫಾರ್ಮ್ ಹೌಸ್ ಮೇಲೆ ಇ.ಡಿ. ಅಧಿಕಾರಿಗಳ ತಂಡವು ಶೋಧ ನಡೆಸಿದೆ.

ಮೈಸೂರಿನ ಹಿನಕಲ್‌ನಲ್ಲಿರುವ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ರಾಕೇಶ್ ಪಾಪಣ್ಣ ಮನೆ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳ ದಾಳಿ ನಡೆಸಲಾಗಿದೆ. ಈ ವೇಳೆ ರಾಕೇಶ್‌ ಅವರನ್ನು ಇ.ಡಿ. ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿ ಅಗತ್ಯ ಮಾಹಿತಿಗಳನ್ನು ಪಡೆದಿದ್ದಾರೆ. 50-50 ನಿಯಮದಲ್ಲಿ 20ಕ್ಕೂ ಹೆಚ್ಚು ಮುಡಾ ನಿವೇಶನ ಪಡೆರುವ ಆರೋಪವು ರಾಕೇಶ್ ಪಾಪಣ್ಣ ವಿರುದ್ಧ ಕೇಳಿಬಂದಿದೆ ಎಂದು ಹೇಳಲಾಗಿದೆ.