ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಮನುಷ್ಯ ಆರೋಗ್ಯವಾಗಿರಲು ಉತ್ತಮ ಆಹಾರ ಸೇವಿಸಬೇಕು, ಇಂದಿನ ಆಹಾರ ಪದ್ಧತಿಯಿಂದ ಹಲವು ರೋಗಗಳಿಗೆ ಬಲಿಯಾಗುತ್ತಿದ್ದಾನೆ. ಹಿರಿಯ ನಾಗರಿಕರು ವೈದ್ಯರ ಸಲಹೆ ಪಡೆದು ಆರೋಗ್ಯದೆಡೆ ಸಾಗಬೇಕು ಎಂದು ಗೋಮಟೇಶ ವಿದ್ಯಾಪೀಠದ ಸನತ್ ಕುಮಾರ್ ಹೇಳಿದರು.ಇಲ್ಲಿನ ಹಿಂದವಾಡಿಯ ಗೊಮಟೇಶ ವಿದ್ಯಾಪೀಠದಲ್ಲಿ ಸೋಮವಾರ ಕಾಂತ್ರಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನ ಹಾಗೂ ಯುನಿಕೇರ್ ಹಾಸ್ಪಿಟಲ್ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕ ದಿನಾಚರಣೆ ನಿಮಿತ್ತ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ರೋಗಗಳು ಬರುವ ಮನ್ನ ಎಚ್ಚರ ವಹಿಸಬೇಕು. ಮನುಷ್ಯನಿಗೆ ಕಾಯಿಲೆ, ಸಮಸ್ಯೆ ಬರುವುದು ಸಹಜ. ಎಲ್ಲದಕ್ಕೂ ಸೂಕ್ತ ಪರಿಹಾರವಿದೆ. ರೋಗದ ಲಕ್ಷಣ ಕಾಣುವ ಮುನ್ನವೇ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು. ಸಮಾಜಮುಖಿ ಕಾರ್ಯ ಮಾಡುತ್ತಿರುವ ಸಂಘ-ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದ ಅವರು, ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಲಿದೆ. ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜಿಸಬೇಕು ಎಂದು ತಿಳಿಸಿದರು.
ಸ್ತ್ರೀರೋಗ ತಜ್ಞ ಡಾ.ಮುಕ್ತಾ ಆಲಕುಂಟೆ ಮಾತನಾಡಿ, ಸ್ತ್ರೀಯರು ಖತುಮತಿ ವೇಳೆ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಬೇಕು. ನಿರ್ಲರ್ಕ್ಷ್ಯ ವಹಿಸಿದರೆ ಗರ್ಭಕೋಶಕ್ಕೆ ತೊಂದರೆಯಾಗಬಹುದು. ಆದಷ್ಟು ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕು. ಸ್ತನ ಸಮಸ್ಯೆ ಎದರಾದರೂ ವೈದ್ಯರ ಸಲಹೆ ಅಗತ್ಯವಿದೆ. ಮಹಿಳೆಯರು ಕೆಲವೊಂದು ಸಮಯದಲ್ಲಿ ಆರೋಗ್ಯ ಕಡೆ ಬಹಳಷ್ಟು ಕಾಳಜಿ ವಹಿಸಿಬೇಕು ಎಂದು ಹೇಳಿದರು.ಎಲುಬು ಹಾಗೂ ಕೀಲು ತಜ್ಞ ಡಾ.ಪವನ ಆಲಕುಂಟೆ ಮಾತನಾಡಿ, ಮುಪ್ಪಿನ ವಯಸ್ಸಿನಲ್ಲಿ ಬಿದ್ದಾಗ ಅಥವಾ ಕುಳಿತು ಏಳುವಾಗ ಎಲುಬುಗಳು ಬೇಗನೆ ಮುರಿಯುವ ಸಾಧ್ಯತೆ ಇರುತ್ತದೆ. ಇದಕ್ಕೆ ಬೇಗ ಚಿಕಿತ್ಸೆ ಪಡೆಯಬೇಕು. ಹೆದರದೇ ಅವಶ್ಯಕತೆ ಇದ್ದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಆರೋಗ್ಯವಂತರಾಗಬೇಕು. ಇಳಿ ವಯಸ್ಸಿನಲ್ಲಿ ಎಲುಬು , ಕೀಲು ಸಮಸ್ಯೆ ಸರ್ವೇ ಸಾಮಾನ್ಯ. ಹೀಗಾಗಿ ಹಿರಿಯರು ಗುಣಮಟ್ಟದ ಆಹಾರ ಸೇವಿಸಿ, ವ್ಯಾಯಾಮ ಮಾಡಬೇಕು. ನಿಯಮಿತವಾಗಿ ವೈದ್ಯರ ಸಲಹೆ ಪಡೆಯಬೇಕು ಎಂದು ಹೇಳಿದರು.ಈ ವೇಳೆ ಸುಮಾರು 200 ಕ್ಕೂ ಅಧಿಕ ನಾಗರಿಕರಿಗೆ ಬಿಪಿ, ಶುಗರ್ ಹಾಗೂ ಎಲುಬು ಕೀಲು ವೈದ್ಯಕೀಯ ತಪಾಸಣೆ ನಡೆಸಲಾಯಿತು.
ಹಿರಿಯ ನಾಗರಿಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಹಿರಿಯ ನಾಗರಿಕರು ಹಾಗೂ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.ವಿ.ಎಂ.ಬನೋಸಿ , ಪ್ರಸಾದ್ ಹಿರೇಮಠ, ಡಾ.ಬಸವರಾಜ ಗೋಮಾಡಿ , ರುದ್ರಪ್ಪ ಚೌಳಿಗೇರ , ವಿಶ್ವಾಸರಾವ್ ದುರಾಜಿ, ಸುರೇಂದ್ರ ದೇಸಾಯಿ, ಮಂಡಳದ ಅಧ್ಯಕ್ಷೆ ಮಂಗಲ ಮಠದ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ರತ್ನಪಗೊಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ನವಲೆ ಪ್ರಾರ್ಥಿಸಿದರು. ಹೇಮಾ ಬರಬರೆ ವಂದಿಸಿದರು. ಜ್ಯೋತಿ ಬಾನೆ ನಿರೂಪಿಸಿದರು.
ಸಮಾಜಕ್ಕೆ ಒಂದಿಷ್ಟೂ ಅಳಿಲು ಸೇವೆಯನ್ನು ಪ್ರತಿಯೊಬ್ಬರ ಮಾಡಬೇಕು. ಯುನಿಕೇರ್ ಆಸ್ಪತ್ರೆ ವತಿಯಿಂದ ಸಮಾಜಕ್ಕೆ ಸಹಾಯ, ಸಹಕಾರ ನೀಡುವ ಮಹತ್ವದ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಕೆಲಸ ನಿರಂತರವಾಗಿ ಸಾಗಲಿದೆ ಎಂದ ಅವರು, ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಹಲವಾರು ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ.-ಡಾ.ಅರವಿಂದ ಹಂಪಣ್ಣವರ ಎಲುಬು ಕೀಲುಗಳ ತಜ್ಞ ಯುನಿಕೇರ್ ಆಸ್ಪತ್ರೆ