ಕನ್ನಡ ರಾಜ್ಯೋತ್ಸವ ವಿಶೇಷವಾಗಿ ಆಚರಿಸಲು ಚಿಂತನೆ: ತಹಸೀಲ್ದಾರ್ ಬಿ.ವಿ.ಕುಮಾರ್

| Published : Oct 29 2024, 12:58 AM IST

ಕನ್ನಡ ರಾಜ್ಯೋತ್ಸವ ವಿಶೇಷವಾಗಿ ಆಚರಿಸಲು ಚಿಂತನೆ: ತಹಸೀಲ್ದಾರ್ ಬಿ.ವಿ.ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ರಾಜೋತ್ಸವವನ್ನು ಮಳವಳ್ಳಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳಿಗೆ ಹೆಚ್ಚು ಒತ್ತು ನೀಡಬೇಕು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ರಾಜೋತ್ಸವ ಹಬ್ಬದ ಮೆರಗು ಹೆಚ್ಚಿಸಲಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಪ್ರಸಕ್ತ ವರ್ಷದ ಕನ್ನಡ ರಾಜೋತ್ಸವವನ್ನು ವಿಶೇಷವಾಗಿ ಆಚರಿಸಲು ಚಿಂತನೆ ನಡೆಸಲಾಗಿದೆ ಎಂದು ಪ್ರಭಾರ ತಹಸೀಲ್ದಾರ್ ಬಿ.ವಿ.ಕುಮಾರ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನ.1ರ ಕನ್ನಡ ರಾಜೋತ್ಸವದ ಅಂಗವಾಗಿ ಸೋಮವಾರ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದ ಭಕ್ತಕನಕದಾಸ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ನಡೆಯುವ ಕನ್ನಡ ರಾಜೋತ್ಸವವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳ ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚನೆ ನೀಡಿದರು.

ತಾಲೂಕು ಮಟ್ಟದ ಅಧಿಕಾರಿಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳಿಗೆ ಹೆಚ್ಚು ಒತ್ತು ನೀಡಬೇಕು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ರಾಜೋತ್ಸವ ಹಬ್ಬದ ಮೆರಗು ಹೆಚ್ಚಿಸಲಿದೆ ಎಂದರು.

ತಾಲೂಕಿನ ಎಲ್ಲ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಂಲಕಾರ ಮಾಡುವುದರ ಜತೆಗೆ ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಕ್ರೀಡಾಂಗಣದ ಸುತ್ತ ಕನ್ನಡ ಬಾವುಟಗಳನ್ನು ಅಳವಡಿಸಬೇಕು ಎಂದರು.

ತಾಪಂ ಇಒ ಎಚ್.ಜಿ.ಶ್ರೀನಿವಾಸ್ ಮಾತನಾಡಿ, ಪ್ರಸಕ್ತ ವರ್ಷ ಕನ್ನಡ ರಾಜೋತ್ಸವ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿರುವುದರಿಂದ ತಾಲೂಕಿನ ಅಧಿಕಾರಿಗಳ ಒಗ್ಗಟ್ಟಿನಿಂದ ಹಬ್ಬದ ರೀತಿ ಆಚರಿಸಲು ಎಲ್ಲರ ಸಹಕಾರ ಅಗತ್ಯ ಎಂದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ಚೇತನ್ ಕುಮಾರ್ ಮಾತನಾಡಿ, ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಈ ಬಾರಿ ಕನ್ನಡ ರಾಜೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು. ಕಸಾಪ ವತಿಯಿಂದ ಕನ್ನಡ ಬಾವುಟಗಳನ್ನು ಕೊಡಿಸಲಾಗುವುದು ಎಂದರು.

ಕರವೇ ತಾಲೂಕು ಅಧ್ಯಕ್ಷ ಅಪ್ಪೇಗೌಡ ಸಭೆಯಲ್ಲಿ ಮಾತನಾಡಿ, ನಾಡುನುಡಿ ನೆಲಜಲ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಕನ್ನಡ ರಾಜೋತ್ಸವಕ್ಕೆ ಕನ್ನಡ ಜನಪರ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಿದೆ ಎಂದರು.

ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.