ಸಾರಾಂಶ
ಮುಂಡಗೋಡ: ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಸುಧಾ ಭೋವಿವಡ್ಡರ ಹಾಗೂ ಉಪಾಧ್ಯಕ್ಷರಾಗಿ ರಹಿಮಾಬಾನು ಕುಂಕೂರ್ ಆಯ್ಕೆಯಾಗಿದ್ದಾರೆ. ಆ ಮೂಲಕ ಇಲ್ಲಿನ ಪಟ್ಟಣ ಪಂಚಾಯಿತಿ ಶಿವರಾಮ್ ಹೆಬ್ಬಾರ ಬೆಂಬಲಿಗರ ಪಾಲಾಗಿದೆ.
ಮಂಗಳವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಜಯಸುಧಾ ಭೋವಿ, ಬಿಜೆಪಿ ಬೆಂಬಲಿತರಾಗಿ ಶಕುಂತಲಾ ನಾಯಕ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನಿಂದ ರಹಿಮಾಬಾನು ಕುಂಕೂರ್ ಮತ್ತು ಬಿಜೆಪಿಯಿಂದ ರಾಜೇಶ್ವರಿ ಅಂಡಗಿ ನಾಮಪತ್ರ ಸಲ್ಲಿಸಿದ್ದರು. ಪಟ್ಟಣ ಪಂಚಾಯಿತಿಯ ೧೯ ಸದಸ್ಯರ ಪೈಕಿ ೧೨ ಜನ ಕಾಂಗ್ರೆಸ್ ಬೆಂಬಲಿತರಿಗೆ ಮತ ಚಲಾಯಿಸಿದರೆ, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ೮ ಜನ ಮಾತ್ರ ಮತ ಚಲಾಯಿಸಿದರು.ಮತದಾನದಲ್ಲಿ ಶಾಸಕ ಶಿವರಾಮ ಹೆಬ್ಬಾರ ಪಾಲ್ಗೊಂಡರೂ ಯಾರ ಪರವಾಗಿಯೂ ಮತ ಚಲಾಯಿಸಲಿಲ್ಲ. ಸಂಸದ ಹಾಗೂ ಶಾಸಕರಿಬ್ಬರೂ ಬಿಜೆಪಿಯಿಂದ ಆಯ್ಕೆಯಾದವರಾದರೂ ಸಂಸದರು ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದರೆ ಶಾಸಕರು ಮಾತ್ರ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಿಂತಿದ್ದು ವಿಶೇಷವಾಗಿತ್ತು. ತಹಸೀಲ್ದಾರ್ ಶಂಕರ ಗೌಡಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಅಚ್ಚರಿಯ ಆಯ್ಕೆ: ಪಟ್ಟಣ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಜಯಸುಧಾ ಭೋವಿವಡ್ಡರ ಆಯ್ಕೆಯಾಗಿದ್ದು, ಅಚ್ಚರಿಯೆಂಬಂತೆ ಕೊನೆಯ ಕ್ಷಣದಲ್ಲಿ ಅಧ್ಯಕ್ಷ ಪದವಿ ಗಿಟ್ಟಿಸಿಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕಸರತ್ತು ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿತ್ತು.ಮಂಗಳವಾರ ಬೆಳಗಿನವರೆಗೂ ಕಸುಮಾ ಹಾವಣಗಿ ಅಥವಾ ನಿರ್ಮಲಾ ಬೆಂಡ್ಲಗಟ್ಟಿ ಅವರೇ ಕೈ ಪಡೆಯ ಅಧ್ಯಕ್ಷ ಅಭ್ಯರ್ಥಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಎಲ್ಲವೂ ಉಲ್ಟಾ ಆಗಿದೆ. ಸೋಮವಾರದವರೆಗೂ ಪಿಕ್ಚರ್‌ನಲ್ಲಿಯೇ ಇಲ್ಲದ ಜಯಸುಧಾ ಭೋವಿವಡ್ಡರ ಅವರಿಗೆ ಅಧ್ಯಕ್ಷ ಸ್ಥಾನ ದಕ್ಕಿರುವುದು ಅಚ್ಚರಿ ಮೂಡಿಸಿದೆ. ಈ ಹಿಂದಿನ ಅವಧಿಯಲ್ಲಿ ಬಿಜೆಪಿಯಿಂದ ಅಧ್ಯಕ್ಷರಾಗಿದ್ದ ಜಯಸುಧಾ ಭೋವಿವಡ್ಡರ ಎರಡನೇ ಬಾರಿಗೆ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅಚ್ಚರಿ ಮೂಡಿಸಿದೆ.
ಬಿಜೆಪಿಯಿಂದ ೧೦ ಸದಸ್ಯರು ಆಯ್ಕೆಯಾಗಿದ್ದರೂ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಶಿವರಾಮ ಹೆಬ್ಬಾರ ಅವರು ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡ ಹಿನ್ನೆಲೆ ಕೆಲವು ಸದಸ್ಯರು ಕಾಂಗ್ರೆಸ್‌ನಲ್ಲಿ ಬಹಿರಂಗವಾಗಿ ಗುರುತಿಸಿಕೊಂಡಿದ್ದರು. ಇದರಿಂದ ಮೊದಲ ಅವಧಿಯಲ್ಲಿ ಬಹುಮತ ಹೊಂದಿದ್ದ ಬಿಜೆಪಿ ಈ ಬಾರಿ ಅಲ್ಪಮತಕ್ಕೆ ಕುಸಿದು ಎರಡನೇ ಅವಧಿಗೆ ಅಧಿಕಾರ ಕೈಚೆಲ್ಲಿ ಕಾಂಗ್ರೆಸ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.ವಿಜಯೋತ್ಸವ: ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಿವರಾಮ ಹೆಬ್ಬಾರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ವಿ.ಎಸ್. ಪಾಟೀಲ್, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ನೂತನ ಅಧ್ಯಕ್ಷೆ ಉಪಾಧ್ಯಕ್ಷರನ್ನು ಅಭಿನಂದಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ, ಕೃಷ್ಣ ಹಿರೇಹಳ್ಳಿ, ಎಚ್.ಎಂ. ನಾಯ್ಕ, ರವಿಗೌಡ ಪಾಟೀಲ್, ಗುಡ್ಡಪ್ಪ ಕಾತೂರ, ದೇವು ಪಾಟೀಲ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಗೋಪಾಲ ಪಾಟೀಲ್ ಸೇರಿದಂತೆ ಪಕ್ಷದ ಕಾರ್ಯಕರ್ತರು, ಪಟ್ಟಣ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.