ಭೂಮಿ ಹಕ್ಕುಪತ್ರಕ್ಕೆ ಒತ್ತಾಯಿಸಿ ಕೊಳಚೆ ಪ್ರದೇಶದ ನಿವಾಸಿಗಳಿಂದ ಪ್ರತಿಭಟನೆ

| Published : Aug 21 2024, 12:36 AM IST

ಸಾರಾಂಶ

ಮಂಡ್ಯ ನಗರ ಮತ್ತು ಜಿಲ್ಲೆಯಲ್ಲಿ ಘೋಷಿತ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಕೂಡಲೇ ಫಾರಂ ನಂ.೫೦, ೫೩, ೫೭ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿರುವ ಭೂಮಿಗಳನ್ನು ಪಂಚನಾಮೆ, ಜಿಪಿಎಸ್ ಸರ್ವೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೊಳಚೆ ನಿವಾಸಿಗಳಿಗೆ ಭೂಮಿ ಹಕ್ಕುಪತ್ರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು. ಮಂಡ್ಯ ನಗರ ಮತ್ತು ಜಿಲ್ಲೆಯಲ್ಲಿ ಘೋಷಿತ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಕೂಡಲೇ ಫಾರಂ ನಂ.೫೦, ೫೩, ೫೭ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿರುವ ಭೂಮಿಗಳನ್ನು ಪಂಚನಾಮೆ, ಜಿಪಿಎಸ್ ಸರ್ವೆ ಮಾಡಬೇಕು ಎಂದು ಒತ್ತಾಯಿಸಿದರು.

ಮಂಡ್ಯ ನಗರ ಪ್ರದೇಶಗಳ (ಸ್ಲಂ) ಶ್ರಮಿಕ ನಗರಗಳಲ್ಲಿ ವಾಸಿಸುತ್ತಿರುವ, ನ್ಯೂ ತಮಿಳು ಕಾಲೋನಿ, ಕಾಳಪ್ಪ ಬಡಾವಣೆ, ಗುರು ಮಠ, ಕಾಳಿಕಾಂಬ, ಶ್ರಮಿಕನಗರ ಹಾಗೂ ಇತರೆ ಸ್ಲಂಗಳಲ್ಲಿ ವಾಸಿಸುತ್ತಿರುವ ಹೆಚ್ಚುವರಿ ಕುಟುಂಬಗಳ ಸರ್ವೆ ನಡೆಸಿ ಜಿಲ್ಲಾಡಳಿತ ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಕನಿಷ್ಠ ೨೦ ಎಕರೆ ಜಾಗವನ್ನು ಗುರುತಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಿ ವಸತಿ ಯೋಜನೆ ರೂಪಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮದ್ದೂರು ಪಟ್ಟಣದ ಕೆಇಬಿ ಮುಂಭಾಗದ ತಮಿಳು ಕಾಲೋನಿಯಲ್ಲಿ ಸುಮಾರು ೨೦ಕ್ಕೂ ಹೆಚ್ಚು ಕುಟುಂಬಗಳ ದಾಖಲೆಯಿದ್ದು, ನಿವೇಶನವಿಲ್ಲದೆ ಮತ್ತು ನಿವೇಶನ ಇದ್ದು ಸಂಪೂರ್ಣ ದಾಖಲೆಗಳಲ್ಲಿ ಪಡಿತರ ಚೀಟಿ ಹೊಂದಿರುವ ಕಾರಣ ಹೆಚ್ಚುವರಿ ಕುಟುಂಬಗಳು ವಾಸಿಸುತ್ತಿದ್ದು, ಹೊಸದಾಗಿ ನೀಡಿರುವ ತಮಿಳು ಕಾಲೋನಿ ನಿವಾಸಿಗಳಿಗೆ ೩ ಎಕರೆ ಪ್ರದೇಶಕ್ಕೆ ಹೊಂದಿಕೊಂಡಂತೆ ಹೆಚ್ಚುವರಿ ಒಂದು ಎಕರೆ ಪ್ರದೇಶ ಮಂಜೂರು ಮಾಡಲು ಕ್ರಮ ವಹಿಸುವಂತೆ ಒತ್ತಾಯಿಸಿದರು.

ಮುಖಂಡರಾದ ಸಿದ್ದರಾಜು, ಚಂದ್ರಶೇಖರ್, ಬಿ.ಎಸ್.ಶಿಲ್ಪಿ, ಸಿ.ಕುಮಾರಿ, ಲತಾ ಶಂಕರ್, ಕಂದೇಗಾಲ ಶ್ರೀನಿವಾಸ್, ರತ್ನ, ವೀರಮ್ಮ, ಅಲಮೇಲು, ಮೇರಿ, ರಮ್ಯ, ಸ್ವಾಮಿ, ನೀಲಮ್ಮ, ವೇಡಿಮ್ಮ, ಲಕ್ಷ್ಮಿ ಇತರರಿದ್ದರು.