ಡಿವೈಡರ್ ನಿರ್ವಹಣೆಗೆ ನಗರಸಭೆ ಹೈರಾಣ

| Published : Nov 08 2024, 12:41 AM IST

ಸಾರಾಂಶ

ಚಿತ್ರದುರ್ಗ ನಗರದಲ್ಲಿ ನಿರ್ಮಾಣಗೊಂಡಿರುವ ಅವೈಜ್ಞಾನಿಕ ಡಿವೈಡರ್‌ಗಳು ಕೇವಲ ವಾಹನ ಚಾಲಕರು ಮತ್ತು ಪಾದಚಾರಿಗಳಿಗೆ ತಲೆನೋವಾಗಿಲ್ಲ. ಇವುಗಳ ನಿರ್ವಹಣೆ ಜವಾಬ್ದಾರಿ ಹೊತ್ತ ನಗರಸಭೆ ಹೈರಾಣವಾಗಿ ಹೋಗಿದೆ. ಯಾವುದೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಣ ಸಿಗದ ಹೆಚ್ಚುವರಿ ಜವಾಬ್ದಾರಿಯೊಂದನ್ನು ಮೈ ಮೇಲೆ ಎಳೆದುಕೊಂಡು ಚಡಪಡಿಸುವ ಪರಿಸ್ಥಿತಿ ಚಿತ್ರದುರ್ಗ ನಗರಸಭೆಯದ್ದಾಗಿದೆ.

ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭ ವಾರ್ತೆ ಚಿತ್ರದುರ್ಗ ಚಿತ್ರದುರ್ಗ ನಗರದಲ್ಲಿ ನಿರ್ಮಾಣಗೊಂಡಿರುವ ಅವೈಜ್ಞಾನಿಕ ಡಿವೈಡರ್‌ಗಳು ಕೇವಲ ವಾಹನ ಚಾಲಕರು ಮತ್ತು ಪಾದಚಾರಿಗಳಿಗೆ ತಲೆನೋವಾಗಿಲ್ಲ. ಇವುಗಳ ನಿರ್ವಹಣೆ ಜವಾಬ್ದಾರಿ ಹೊತ್ತ ನಗರಸಭೆ ಹೈರಾಣವಾಗಿ ಹೋಗಿದೆ. ಯಾವುದೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಣ ಸಿಗದ ಹೆಚ್ಚುವರಿ ಜವಾಬ್ದಾರಿಯೊಂದನ್ನು ಮೈ ಮೇಲೆ ಎಳೆದುಕೊಂಡು ಚಡಪಡಿಸುವ ಪರಿಸ್ಥಿತಿ ಚಿತ್ರದುರ್ಗ ನಗರಸಭೆಯದ್ದಾಗಿದೆ. ಚಿತ್ರದುರ್ಗದಲ್ಲಿರುವ ಡಿವೈಡರ್‌ಗಳು ತಡೆಗೋಡೆಗಳೆಂದೇ ಖ್ಯಾತಿ. ಡಿವೈಡರ್ ನಿರ್ಮಾಣ್ಕಕೆ ಎಷ್ಟು ವೆಚ್ಚವಾಗಿದೆಯೋ ಅದರೊಳಗೆ ಗಿಡ ನೆಡಲು ಹೆಚ್ಚು ಕಡಿಮೆ ಅಷ್ಟೇ ಪ್ರಮಾಣದ ಅನುದಾನ ಸರಿದೂಗಿಸಲಾಗಿದೆ. ಡಿವೈಡರ್‌ಗಳಿಗೆ ಮಣ್ಣು ತುಂಬಿ, ನಂತರ ಅದರಲ್ಲಿ ಡ್ರಿಪ್ ಎಳೆದು, ಅಲಂಕಾರಿಕ ಗಿಡ ನೆಟ್ಟು ಪೋಷಣೆ ಮಾಡುವುದು ಉದ್ದೇಶಿತ ಯೋಜನೆ ಮೂಲ ತಿರುಳು. ಇದಕ್ಕಾಗಿ 1.80 ಕೋಟಿ ರುಪಾಯಿ ಟೆಂಡರ್ ಕರೆಯಲಾಗಿದ್ದು, ಬೆಂಗಳೂರು ಮೂಲದ ಗುತ್ತಿಗೆದಾರ ಜವಾಬ್ದಾರಿ ಹೊತ್ತಿದ್ದ. ಅಲಂಕಾರಿಕ ಗಿಡ ನೆಟ್ಟು ಒಂದು ವರ್ಷ ಪೋಷಣೆ ಜವಾಬ್ದಾರಿ ಮಾತ್ರ ಆತನದಾಗಿತ್ತು. ನಂತರದ ಉಸ್ತುವಾರಿ ಸಹಜವಾಗಿಯೇ ಚಿತ್ರದುರ್ಗ ನಗರಸಭೆಗೆ ಒಳಪಡುತ್ತದೆ. ಚಳ್ಳಕೆರೆ ಟೋಲ್ ಗೇಟ್‌ನಿಂದ ಹಿಡಿದು ಕನಕ ಸರ್ಕಲ್ ಹಾಗೂ ಗಾಂಧಿ ವೃತ್ತದ ಮೂಲಕ ತಿಪ್ಪಾರೆಡ್ಡಿ ಮನೆ ಮುಂಭಾಗದಿಂದ ಜೆಎಂಐಟಿ ವರೆಗೆ ಬರುವ ಡಿವೈಡರ್‌ಗಳಲ್ಲಿ ಅಲಂಕಾರಿಕ ಗಿಡ ನೆಟ್ಟು ಪೋಷಣೆ ಮಾಡಬೇಕಾಗಿತ್ತು. ಅಲಂಕಾರಿಕ ಗಿಡ ಎಲ್ಲಿಂದ ತಂದರು, ಎಲ್ಲೆಲ್ಲಿ ನೆಟ್ಟರು ಎಂಬಿತ್ಯಾದಿ ಮಾಹಿತಿ ಅಷ್ಟಾಗಿ ನಗರಸಭೆ ಬಳಿ ಇಲ್ಲ. ಯಾವುದೇ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಿದ ನಂತರ ನಗರಸಭೆ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಆದರೆ ಇಲ್ಲಿ ಅಂತಹ ಯಾವುದೇ ಘಟನಾವಳಿಗಳು ಜರುಗಿಲ್ಲ. ಹಾಲಿ ಚಿತ್ರದುರ್ಗದ ಡಿವೈಡರ್‌ಗಳಲ್ಲಿ ಪಾರ್ಥೆನಿಯಂ ಬೆಳೆದಿದ್ದು, ಚಿತ್ರದುರ್ಗ ಪರಿಸರ ಪ್ರೇಮಿ ಯುವಕರು ಅವುಗಳ ನಾಶ ಪಡಿಸಿ ಪರಿಸರ ಕಾಯ್ದುಕೊಳ್ಳುವ ಗಿಡುಗಳ ನೆಟ್ಟಿದ್ದಾರೆ. ಮುಂದೊಂದು ದಿನ ಅವು ಹೆಮ್ಮರವಾಗಿ ಬೆಳೆಯಲಿವೆ. ನೇರಳೆ ಸೇರಿದಂತೆ, ಸಂಪಿಗೆ ಗಿಡಗಳ ಡಿವೈಡರ್‌ನಲ್ಲಿ ನೆಡಲಾಗಿದೆ. ಈ ಗಿಡಗಳಿಗೆ ನಿತ್ಯ ನಗರಸಭೆಯ ಕುಡಿವ ನೀರಿನ ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ನೆಡಲಾದ ಗಿಡಗಳು ಎತ್ತರಕ್ಕೆ ಹೋದಂತೆಲ್ಲ ಬೇರುಗಳು ಆಳಕ್ಕಿಳಿದು ಡಿವೈಡರ್ ಕುಸಿತಕ್ಕೆ ಒಳಗಾಗುವುದರಲ್ಲಿ ಸಂದೇಹವಿಲ್ಲ. ಬಿ.ಡಿ.ರಸ್ತೆಯಲ್ಲಿರುವ ಡಿವೈಡರ್‌ಗಳಲ್ಲಿ ಸಸಿ ನೆಟ್ಟು ಪೋಷಣೆ ಮಾಡುವ ಕಾರ್ಯ ನಡೆಯುತ್ತಿದ್ದರೂ, ಜೆಸಿಆರ್ ಬಡಾವಣೆ ಮುಂತಾದ ಕಡೆ ಡಿವೈಡರ್‌ನಲ್ಲಿ ಬೆಳೆದಿರುವ ಪಾರ್ಥೆಯನಿಂತ ಕಳೆ ತೆಗೆಯಲು ಪೌರ ಕಾರ್ಮಿಕರು ನಿರತರಾಗಿದ್ದಾರೆ. ಡಿವೈಡರ್ ಏರಿ ಕಟರ್ ಮೂಲಕ ನಾಶಪಡಿಸುವ ಅವರ ಸಾಹಸವ ನೋಡಲು ಎರಡು ಕಣ್ಣು ಸಾಲದು. ಅಷ್ಟರ ಮಟ್ಟಿಗೆ ಡಿವೈಡರ್‌ಗಳು ನಗರಸಭೆ ತಲೆ ನೋವಾಗಿ ಪರಿಣಮಿಸಿವೆ.ಚಿತ್ರದುರ್ಗದಲ್ಲಿ ನಿರ್ಮಿಸಲಾದ ಡಿವೈಡರಗಳಲ್ಲಿ ಅಲಂಕಾರಿಕ ಗಿಡ ನೆಟ್ಟಿರುವ ಬಗ್ಗೆ ಗುತ್ತಿಗೆದಾರ 1.80 ಕೋಟಿ ರುಪಾಯಿ ಹಣ ಪಾವತಿಸುವಂತೆ ನೇರವಾಗಿ ಹೈಕೋರ್ಟ್‌ ಮೊರೆ ಹೋಗಿದ್ದಾನೆ. ನಗರಸಭೆಗೆ ಯಾವುದೇ ತರಹದ ಬಿಲ್ ಸಬ್‌ಮಿಟ್ ಮಾಡಿಲ್ಲ. ಹೈಕೋರ್ಟ್‌ ಗೆ ಈ ಸಂಬಂಧ ನಗರಸಭೆ ವಕೀಲರು ಮಾಹಿತಿ ನೀಡಿ ಕೇಸು ನಡೆಸುತ್ತಿದ್ದಾರೆ. ರೇಣುಕಾ, ಪೌರಾಯುಕ್ತೆ, ಚಿತ್ರದುರ್ಗ ನಗರಸಭೆ