ಸಾರಾಂಶ
ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಹೋದಲ್ಲಿ ಬಂದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಾರೆ. ಅವರಿಗೆ ತಾಕತ್ತಿದ್ದರೆ, ಅವರ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದು ಘೋಷಣೆ ಮಾಡಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಸವಾಲು ಹಾಕಿದರು.
ಚನ್ನಪಟ್ಟಣ: ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಹೋದಲ್ಲಿ ಬಂದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಾರೆ. ಅವರಿಗೆ ತಾಕತ್ತಿದ್ದರೆ, ಅವರ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದು ಘೋಷಣೆ ಮಾಡಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಸವಾಲು ಹಾಕಿದರು.
ಚನ್ನಪಟ್ಟಣ ನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಪ್ರಚಾರ ಮಾಡಿದ ಅವರು, ವಿರೋಧ ಪಕ್ಷದವರು, ಬಡವರ ಹೊಟ್ಟೆ ಮೇಲೆ ಬಟ್ಟೆ ಹಾಕುವ ಕೊಂಕು ಮಾತುಗಳನ್ನು ಹೇಳುತ್ತಿದ್ದಾರೆ. ಕುಮಾರಸ್ವಾಮಿ, ಯಡಿಯೂರಪ್ಪ, ಅಶೋಕ್ ವಿಜಯೇಂದ್ರಗೆ ತಾಕತ್ತಿದ್ದರೆ ಅವರ ಸರ್ಕಾರ ಬಂದಲ್ಲಿ ಗ್ಯಾರಂಟಿ ಯೋಜನೆ ನಿಲ್ಲಿಸುತ್ತೇವೆ ಎಂದು ಘೋಷಣೆ ಮಾಡಲಿ ಎಂದ ಅವರು, ಅವರು ತಿಂದ ೪೦ ಪರ್ಸೆಂಟ್ ಹಣವನ್ನು ಜನರಿಗೆ ಹಂಚುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಆ ಹೊಟ್ಟೆ ಉರಿ ತಡೆಯಲು ಆಗದೇ ಏನೇನೋ ಮಾಡುತ್ತಿದ್ದಾರೆ. ನಿಮ್ಮ ತಾಲೂಕಲ್ಲೇ ಹುಟ್ಟಿ ಬೆಳೆದವರಿಗೆ ನಿಮ್ಮ ಆರ್ಶಿವಾದ ಇರಲಿ. ನಾವೆಲ್ಲ ತಾಲೂಕಿನ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.
ಏನು ಸಂಬಂಧ:ಕುಮಾರಸ್ವಾಮಿ, ಅನಿತಾಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರಿಗೂ ಚನ್ನಪಟ್ಟಣಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಸಹ ನೀವೆಲ್ಲ ನಮ್ಮ ಪಟ್ಟಣ ಏನೋ ಸುಂದರವಾಗುತ್ತದೆ ಎಂದು ಎರಡು ಬಾರಿ ಅವರನ್ನು ಗೆಲ್ಲಿಸಿದ್ದೀರಾ. ಇಲ್ಲಿನ ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ಸರಿಹೋಗುತ್ತದೆ ಎಂದು ಗೆಲ್ಲಿಸಿದರಿ, ಇದು ಸರಿಹೋಯಿತೇ ಎಂದು ಪ್ರಶ್ನಿಸಿದರು.
ಕೆರೆ ತುಂಬಿಸಿದ ಯೋಗೇಶ್ವರ್‌ಗೆ ಕೈಕೊಟ್ಟು ಎಚ್ಡಿಕೆಯನ್ನು ಎರಡು ಬಾರಿ ಗೆಲ್ಲಿಸಿದಿರಿ, ಗೆದ್ದ ಮೇಲೆ ಅವರು ನಿಮ್ಮ ವಾರ್ಡ್ ಕಡೆ ಬರಲಿಲ್ಲ. ಜೆಡಿಎಸ್‌ನವರು ಅವರನ್ನು ನಿಮ್ಮ ವಾರ್ಡ್‌ಗಳಿಗೆ ಕರೆದುಕೊಂಡು ಬರಲಿಲ್ಲ. ನಗರ ಪ್ರದೇಶದ ವಾರ್ಡ್‌ಗಳಲ್ಲಿ ಕಸ ಕೊಳೆಯುತ್ತಿದೆ. ಅದನ್ನು ಕ್ಲೀನ್ ಮಾಡುವವರು ಇಲ್ಲ. ಬಡವರಿಗೆ ನಿವೇಶನ, ಮನೆ ನಿರ್ಮಿಸಿಕೊಡುವವರು ಇಲ್ಲದಂತಾಗಿದೆ ಎಂದು ಹೇಳಿದರು.
ಅವರಿಗೆ ಬೇಕಾಗಿರುವುದು ಅಧಿಕಾರ ಮಾತ್ರ. ಅವರಿಗೆ, ಅವರ ತಂದೆಗೆ, ಪತ್ನಿಗೆ, ಭಾವ, ಅಣ್ಣನ ಮಕ್ಕಳಿಗೆ ಅಧಿಕಾರ ಬೇಕು. ಈಗ ಮಗನನ್ನು ನಿಲ್ಲಿಸಿದ್ದಾರೆ. ಎರಡು ಬಾರಿ ಯೋಗೇಶ್ವರ್‌ರನನ್ನು ಸೋಲಿಸಿದ್ದೀರಿ. ಈ ಬಾರಿ ಬಹುಮತದಿಂದ ಅವರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರದಿಂದ ತಾಲೂಕಿನ ಅಭಿವೃದ್ಧಿಗೆ ೫೦೦ ಕೋಟಿ ನೀಡಿದೆ. ನಿಮ್ಮ ವಾರ್ಡ್ ವ್ಯಾಪ್ತಿಯಲ್ಲು ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸಮುದಾಯ ಭವನ, ಕ್ರೀಡಾಂಗಣ ಬೇರೆ ಕೆಲಸಗಳಿಗೆ ಆದ್ಯತೆ ನೀಡಲಾಗಿದೆ. ಯುಜಿಡಿ ೯೬ ಕೋಟಿ ನೀಡಲಾಗಿದೆ. ಅಭಿವೃದ್ಧಿಗೆ ನಿಮ್ಮ, ಮತ, ಸ್ಥಳೀಯರಿಗೆ ಮತ ನೀಡಿ. ನಿಮ್ಮ ಸ್ವಾಭಿಮಾನ ಉಳಿಸುವ ಕೆಲಸ ಮಾಡಿ, ಎಚ್‌ಡಿಕೆ ನಿಮಗೆ ಸಹಾಯ ಮಾಡಲು ಸಿಎಂಗಿಂತ ಹುದ್ದೆ ಬೇಕಿತ್ತಾ. ಈ ತಾಲೂಕು ಅಭಿವೃದ್ಧಿಗೆ ಅದಕ್ಕಿಂತ ಹುದ್ದೆ ಬೇಕಾ. ಅವರು ಸಿಎಂ ಆದಾಗ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಟೈಂ ಪಾಸ್ ಮಾಡುತ್ತಿದ್ದರು. ಜನರ ಕಷ್ಟ ನೋಡಲಿಲ್ಲ. ಅವರೇ ಐದು ವರ್ಷಕ್ಕೆ ಒಂದು ಬಾರಿ ಬಂದು ಹಣ ನೀಡಿದರೆ ಸಾಕು ಎಂದಿದ್ದಾರೆ ಎಂದು ಆರೋಪಿಸಿದರು.
ಎಚ್‌ಡಿಕೆ ಕಾಲದಲ್ಲಿ ಅಭಿವೃದ್ಧಿ ಕುಂಠಿತ: ಸುರೇಶ್
ಚನ್ನಪಟ್ಟಣ: ಕುಮಾರಸ್ವಾಮಿ ಅವರ ಕಾಲದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಜನಗಳಿಗೆ ಸ್ಪಂದಿಸದೆ ಇರುವುದನ್ನು ಗಮನದಲ್ಲಿಟ್ಟುಕೊಂಡು ಚನ್ನಪಟ್ಟಣ ಕ್ಷೇತ್ರದ ಜನ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರಿಗೆ ಬಹಳ ಉತ್ಸಾಹದಿಂದ ಬೆಂಬಲ ನೀಡುತ್ತಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಅವರು ಕೆರೆಗಳಿಗೆ ನೀರು ತುಂಬಿಸಿ ಅವರ ಬದುಕು ಬದಲಾವಣೆ ಮಾಡುವ ಪ್ರಯತ್ನ ಮಾಡಿದ ಕಾರಣಕ್ಕೆ ಅವರಿಗೆ ಮತ್ತೊಂದು ಅವಕಾಶ ನೀಡಲು ಮುಂದಾಗಿದ್ದಾರೆ. ಸರ್ಕಾರದ ಹಗರಣಗಳ ವಿರುದ್ಧ ಹೋರಾಟ ಎಂದು ವಿರೋಧ ಪಕ್ಷಗಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಹಾಗೂ ಬಿಜೆಪಿ ಅವರ ಕಾಲದಲ್ಲಿ ಆಗಿರುವ ಹಗರಣಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.
ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರು ಕಳೆದ ೭ ವರ್ಷಗಳಲ್ಲಿ ಎಂದಿಗೂ ಈ ಕ್ಷೇತ್ರದ ಜನರ ಕಷ್ಟ ಕೇಳಲು ಬಂದಿಲ್ಲ. ಈಗ ಮಗ ಹಾಗೂ ಮೊಮ್ಮಗನ ಗೆಲ್ಲಿಸಲು ಬಂದಿದ್ದಾರೆ. ಇಷ್ಟು ದಿನ ಜನರ ಕಷ್ಟ ಕೇಳಲು ಅವರು ಹಳ್ಳಿಗೆ ಹೋಗಿಲ್ಲ. ಅವರು ಎಂದಾದರೂ ಜನರ ಕಷ್ಟ ಕೇಳಲು ಹೋಗಿದ್ದರೆ ಅವರು ಮುಖ್ಯಮಂತ್ರಿ ಆಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಸಭೆ ಮಾಡಿದ್ದಾರೆ ಎಂದು ಮಾಹಿತಿ ನೀಡಲಿ ಎಂದು ಸವಾಲು ಹಾಕಿದರು.