ವಚನಗಳು ಸಂವಿಧಾನದ ತಾಯಿ: ಚಿಂತಕ ರಂಜಾನ್‌ ದರ್ಗಾ

| Published : Nov 08 2024, 12:40 AM IST

ಸಾರಾಂಶ

ಹೊಸದುರ್ಗ: ಜಗತ್ತಿನ ಎಲ್ಲ ಸಂವಿಧಾನಗಳಿಗೆ ವಚನಗಳು ತಾಯಿ ಇದ್ದಂತೆ. ಆದರೆ ಅವುಗಳನ್ನು ಜಗತ್ತಿಗೆ ನಾವು ಪ್ರತಿಪಾದಿಸುತ್ತಿಲ್ಲ. ಏಕೆಂದರೆ ವಚನಗಳನ್ನು ನಾವು ಸರಿಯಾಗಿ ಓದಿಲ್ಲ ಎಂದು ಹಿರಿಯ ಸಾಹಿತಿ, ಚಿಂತಕ ರಂಜಾನ್‌ ದರ್ಗಾ ವಿಷಾದ ವ್ಯಕ್ತಪಡಿಸಿದರು.

ಹೊಸದುರ್ಗ: ಜಗತ್ತಿನ ಎಲ್ಲ ಸಂವಿಧಾನಗಳಿಗೆ ವಚನಗಳು ತಾಯಿ ಇದ್ದಂತೆ. ಆದರೆ ಅವುಗಳನ್ನು ಜಗತ್ತಿಗೆ ನಾವು ಪ್ರತಿಪಾದಿಸುತ್ತಿಲ್ಲ. ಏಕೆಂದರೆ ವಚನಗಳನ್ನು ನಾವು ಸರಿಯಾಗಿ ಓದಿಲ್ಲ ಎಂದು ಹಿರಿಯ ಸಾಹಿತಿ, ಚಿಂತಕ ರಂಜಾನ್‌ ದರ್ಗಾ ವಿಷಾದ ವ್ಯಕ್ತಪಡಿಸಿದರು.ರಾಷ್ಟೀಯ ನಾಟಕೋತ್ಸವ ಅಂಗವಾಗಿ ಇಲ್ಲಿನ ಎಸ್‌.ಎಸ್‌.ಒಳಾಂಗಣ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ʼಧರ್ಮ ಮತ್ತು ಮಾನವ ಹಕ್ಕುಗಳುʼ ಕುರಿತ ವಿಚಾರ ಸಂಕಿರಣದಲ್ಲಿ ಲಿಂಗಾಯತ ಧರ್ಮ ಕುರಿತು ಅವರು ಮಾತನಾಡಿದರು.ಮೊದಲನೇ ಮಹಾಯುದ್ಧದಲ್ಲಿ ಅಮಾಯಕರಾಗಿದ್ದ ಒಂದೂವರೆ ಕೋಟಿ, ಎರಡನೇ ಮಹಾಯುದ್ಧದಲ್ಲಿ ೫ ಕೋಟಿಗೂ ಹೆಚ್ಚು ಜನರು ಸತ್ತರು. ಇವರೆಲ್ಲ ಯುದ್ಧ ಮಾಡಿ ಸಾಯಲಿಲ್ಲ. ಹೀಗೆ ಆರೂವರೆ ಕೋಟಿ ಜನರನ್ನು ಕಳೆದುಕೊಂಡ ಮೇಲೆ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂತು. ನಂತರ ಮಾನವಹಕ್ಕುಗಳ ಕುರಿತು ಚರ್ಚೆ ಶುರುವಾಯಿತು. ಆದರೆ ಮಾನವಹಕ್ಕುಗಳ ಕುರಿತು ಮಾತನಾಡಿದ ಶರಣರ ಕಗ್ಗೊಲೆಯಾಯಿತು. ಇದರಿಂದ ಶರಣರು ವಚನಗಳನ್ನು ಕಳೆದುಕೊಂಡರು. ಇದನ್ನು ಕಲ್ಯಾಣಕ್ರಾಂತಿ ಎನ್ನುತ್ತೇವೆ. ಆದರೆ ನಿಜವಾಗಿಯೂ ಅಲ್ಲಿ ಶರಣರ ಹತ್ಯೆಯಾಯಿತು ಎಂದು ತಿಳಿಸಿದರು.ಮಾನವಹಕ್ಕುಗಳ ಕುರಿತು ಮಾತಾಡಿದ್ದಕ್ಕೆ ಅವರ ಹತ್ಯೆಯಾಯಿತು. ಯಾವುದೇ ವಚನ ಓದಿದರೂ ಮಾನವ ಹಕ್ಕುಗಳ ಕುರಿತ ಪ್ರಸ್ತಾಪವಿದೆ ಎಂಬುದನ್ನು ಅರಿಯಬೇಕಿದೆ ಎಂದು ವಿವರಿಸಿದರು.ಮಹಿಳೆಯರ, ದಲಿತರ, ಶೋಷಿತರ ಕುರಿತು ವಚನಗಳಲ್ಲಿ ಕಾಣಬಹುದು. ೧೨ನೇ ಶತಮಾನದಲ್ಲಿಯೇ ಬಸವಣ್ಣನವರು ಮಾನವಹಕ್ಕುಗಳ ಕುರಿತು ಮಾತನಾಡಿದರು. ಹಾಗೆಯೇ ಬಸವಣ್ಣನವರು ಸ್ತ್ರೀವಾದಿ ಚಿಂತನ ಹರಿಬಿಟ್ಟ ಪರಿಣಾಮ ನಮ್ಮ ಮಹಿಳೆಯರಿಗೆ ಸಮಾನತೆ ಸಾಧ್ಯವಾಗಿದೆ. ಇದಕ್ಕಾಗಿ ಬಸವತತ್ವವನ್ನು ಜಗತ್ತಿಗೆ ಹೇಗೆ ಮುಟ್ಟಿಸಬೇಕು ಎನ್ನುವುದನ್ನು ಚಿಂತಿಸಬೇಕು ಎಂದು ಸಲಹೆ ನೀಡಿದರು.ಜೈನ ಧರ್ಮದ ಕುರಿತು ಬ್ರಹ್ಮದೇವ ಹಡಲಗಿ, ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಬೌದ್ಧ ಧರ್ಮ, ಇಸ್ಲಾಂ ಧರ್ಮ ಕುರಿತು ಮಹಮ್ಮದ್‌ ಕುಂಞ, ಕ್ರೈಸ್ತ ಧರ್ಮದ ಕುರಿತು ಎಂ.ಎಸ್.ರಾಜು ಮಾತನಾಡಿದರು.

ಅತಿಥಿಗಳಾಗಿ ಹಿರಿಯೂರು ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಇತರರು ವೇದಿಕೆ ಮೇಲಿದ್ದರು.ನಂತರ ನಡೆದ ಸಂವಾದದಲ್ಲಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು ಭಾಗವಹಿಸಿದ್ದರು.

ಸುಡುವ ಬೆಂಕಿಯಾಗೋದು ಬೇಡ, ಎಲ್ಲರಿಗೂ ಬೆಳಕಾಗೋಣ: ಸಾಣೇಹಳ್ಳಿ ಶ್ರೀ

ಹೊಸದುರ್ಗ: ಜ್ಯೋತಿಗೆ ಜಾತಿಯಿಲ್ಲ, ಧರ್ಮವಿಲ್ಲ, ಲಿಂಗಭೇದವಿಲ್ಲ. ಎಲ್ಲ ಕಡೆಯೂ ಬೆಳಕು ಬೀರುತ್ತ ಕತ್ತಲನ್ನು ಜ್ಯೋತಿಯು ಕಳೆಯುತ್ತದೆ. ಎಲ್ಲ ಕಡೆ ಬೆಂಕಿಯಿಡುವ ಕೆಲಸವಾಗುತ್ತಿದೆ. ನಾವು ಸುಡುವ ಬೆಂಕಿಯಾಗುವುದು ಬೇಡ, ಎಲ್ಲರಿಗೂ ಬೆಳಕಾಗೋಣ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ʼಧರ್ಮ ಮತ್ತು ಮಾನವ ಹಕ್ಕುಗಳುʼ ಕುರಿತು ಗುರುವಾರ ಆಯೋಜಿಸಿದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಭೂಮಿ, ಹೇಮ, ಕಾಮಿನಿ ನಿನ್ನವಳಲ್ಲ ಎಂದು ಅಲ್ಲಮಪ್ರಭು ಹೇಳುತ್ತಾರೆ. ಈ ಜಗತ್ತಿನಲ್ಲಿರುವ ಬಹುತೇಕರು ಹೊನ್ನು, ಮಣ್ಣು, ಹೆಣ್ಣು ಎಂಬ ಭ್ರಮೆಯಲ್ಲಿರುತ್ತಾರೆ. ಜೊತೆಗೆ ಅನುಮಾನದಿಂದ, ಕ್ರೌರ್ಯದಿಂದ ನೋಡುವ ಪ್ರವೃತ್ತಿ ಹೆಚ್ಚುತ್ತಿದೆ. ನಿಜವಾದ ಸಂಪತ್ತು ಜ್ಞಾನ. ಈ ನೆಲೆಯಲ್ಲಿ ಕುವೆಂಪು ಅವರು ಭಾರತ ಸರ್ವಜನಾಂಗದ ಶಾಂತಿಯ ತೋಟದ ಹಾಗೆ ಬದುಕಬೇಕು ಎಂದು ಹೇಳಿದರು.ಈ ದೇಶದಲ್ಲಿ ಹಲವು ಭಾಷೆ, ಹಲವು ಜಾತಿ, ಹಲವು ಪಕ್ಷ, ಧರ್ಮ, ಪಂಗಡಗಳಿವೆ. ಇವೆಲ್ಲದರ ನಡುವೆ ಭಾವೈಕ್ಯ ಸಾಧಿಸುವುದು ಮುಖ್ಯ. ೧೨ನೇ ಶತಮಾನದಲ್ಲಿ ಶರಣರು ಎಲ್ಲರನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಕಾರ್ಯ ಮಾಡಿದರು. ತಲೆ ಎತ್ತಿ ಬದುಕದ ಸಮುದಾಯಕ್ಕೆ ತಲೆ ಎತ್ತಿ ಬದುಕುವ ಹಾಗೆ ಮಾಡಿದರು. ಆದರೆ ನಾವು ಮಾನವೀಯ ಅಂತಃಕರಣ ಮರೆಯುತ್ತಿದ್ದೇವೆ. ಅಲ್ಪಮಾನವತೆಯ ಮೂಲಕ ಬದುಕಿನ ಎಲ್ಲ ಸತ್ವಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರು.