ಸಾರಾಂಶ
ವ್ಯಕ್ತಿಯೊಬ್ಬ ಮಾಡಿದ ಅವಹೇಳನಕಾರಿ ಚಿತ್ರವುಳ್ಳ ಪೋಸ್ಟ್‌ನಿಂದಾಗಿ ಮೈಸೂರು ನಗರ ಉದ್ವಿಗ್ನಗೊಂಡಿದೆ. ಮೈಸೂರು ನಗರದ ಮುಸ್ಲಿಂ ಬಾಹುಳ್ಯವುಳ್ಳ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಸತೀಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರು : ವ್ಯಕ್ತಿಯೊಬ್ಬ ಮಾಡಿದ ಅವಹೇಳನಕಾರಿ ಚಿತ್ರವುಳ್ಳ ಪೋಸ್ಟ್‌ನಿಂದಾಗಿ ಮೈಸೂರು ನಗರ ಉದ್ವಿಗ್ನಗೊಂಡಿದೆ. ಮೈಸೂರು ನಗರದ ಮುಸ್ಲಿಂ ಬಾಹುಳ್ಯವುಳ್ಳ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಸತೀಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಸದ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರಗಳನ್ನು ವಿವಸ್ತ್ರಗೊಳಿಸಿ, ತಲೆ ಮೇಲೆ ಮುಸ್ಲಿಂ ಸಮುದಾಯ ಬಳಸುವ ಟೊಪ್ಪಿ ಇಟ್ಟು, ದೇಹದ ಮೇಲೆಲ್ಲಾ ಉರ್ದು ಭಾಷೆಯ ಕೆಲ ಪದಗಳನ್ನು ಬರೆದಿದ್ದು ಮುಸ್ಲಿಂ ಸಮುದಾಯ ಉದ್ವಿಗ್ನಗೊಳ್ಳಲು ಕಾರಣವಾಗಿದೆ.
ಸೋಮವಾರ ರಾತ್ರಿ ಮಾಹಿತಿ ತಿಳಿದು ಮುಸ್ಲಿಂ ಸಮುದಾಯದ ಸಾವಿರಾರು ಮಂದಿ ಉದಯಗಿರಿ ಮುಖ್ಯ ರಸ್ತೆ ತೆಡೆದು ಪ್ರತಿಭಟನೆಗೆ ಮುಂದಾದರು. ಒಂದು ಗುಂಪು ಉದಯಗಿರಿ ಪೊಲೀಸ್ ಠಾಣೆ ಎದುರು ಪ್ರತಿಭಟಿಸಿ, ತಪ್ಪಿತಸ್ಥನನ್ನು ಕೂಡಲೇ ಬಂಧಿಸಲು ಒತ್ತಾಯಿಸಿತು. ಈ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಕಂಡ ಪೊಲೀಸರು ಕೂಡಲೇ ಲಾಠಿ ಪ್ರಹಾರ ಮಾಡಿದರಲ್ಲದೆ, ಆಶ್ರುವಾಯು ಸಿಡಿಸಿ ಗುಂಪು ಚದುರಿಸಿದರು.
ಸದ್ಯ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವುದರಿಂದ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.