ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಕಾಲೇಜು ಮಟ್ಟದಲ್ಲಿ ಇಂತಹದೊಂದು ಕಾರ್ಯಕ್ರಮ ನಡೆಯಲೇಬೇಕು. ವಿದ್ಯಾರ್ಥಿಗಳು ಕೇವಲ ಪಠ್ಯಕಷ್ಟೇ ಸೀಮಿತವಾಗದೆ ಸಹಪಠ್ಯ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಅರಸು ವಂಶಸ್ಥರಾದ ಹರೀಶ್ ಕಾಂತರಾಜ್ ಅರಸ್ ತಿಳಿಸಿದರು.

ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಎಂ. ಜಯಲಕ್ಷಮ್ಮಣ್ಣಿ ಸ್ಮಾರಕ ರಾಜ್ಯ ಮಟ್ಟದ ಅಂತರ ಕಾಲೇಜು ಸಂಗೀತ ಸ್ಪರ್ಧೆ ಮತ್ತು ಸಣ್ಣೇಗೌಡ ಸ್ಮಾರಕ ಜಿಲ್ಲಾ ಮಟ್ಟದ ಕನ್ನಡ ಚರ್ಚಾ ಸ್ಪರ್ಧೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು

ಗಾಯಕಿ ಅರ್ಪಿತಾ ವೇಣು ಮಾತನಾಡಿ, ಕಾಲೇಜು ಹಂತದಲ್ಲಿ ನಾವು ಸ್ಪರ್ಧಿಸುವ ಇಂತಹ ಒಂದೊಂದು ಸ್ಪರ್ಧೆಗಳೇ ನಮ್ಮ ಸಾಧನೆಯ ಮೆಟ್ಟಿಲುಗಳು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಅನಿತಾ ಮಾತನಾಡಿ, ವಿದ್ಯಾರ್ಥಿನಿಯರು ಸರ್ವತೋಮುಖ ಅಭಿವೃದ್ಧಿಗಾಗಿ ಹೇಗೆ ಶ್ರಮಿಸಬೇಕು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳುವುದು ಎಂಬುದರ ಬಗ್ಗೆ ತಿಳಿಸಿದರು.


ಈ ಸ್ಪರ್ಧೆಗಳಲ್ಲಿ ರಾಜ್ಯದ 23 ಕಾಲೇಜುಗಳ 70 ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿವರಾಂಪೇಟೆ ಎಸ್‌ ಬಿಐ ಶಾಖೆಯ ವ್ಯವಸ್ಥಾಪಕ ಸಿ.ಆರ್. ಹೇಮಂತ್ ಕುಮಾರ್, ವಿದುಷಿ ಕೆ.ಎನ್. ಶಾರದಾಂಬ, ನಟ ಹಾಗೂ ನಿರ್ದೇಶಕ ಆನಿಶ್, ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಪ್ರೊ.ಕೆ.ಎಸ್. ಭಾಸ್ಕರ್, ಖಜಾಂಚಿ ಡಾ.ಟಿ. ನಾಗವೇಣಿ, ಪ್ರೊ. ರಾಘವೇಂದ್ರ ಕರ್ಜೆ, ಡಾ. ನಂಜುಂಡಯ್ಯ ಇದ್ದರು.