ಕನ್ನಡಪ್ರಭ ವಾರ್ತೆ ಮೈಸೂರುಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಶಕ್ತಿ ಸ್ವರೂಪಿಣಿ, ಆದಿಶಕ್ತಿ ಪರಾಶಕ್ತಿ ಎಂದೆಲ್ಲಾ ವರ್ಣಿಸಿ ಅಪಾರ ಸ್ಥಾನಮಾನವನ್ನು ನೀಡಲಾಗಿದೆ ಎಂದು ಕವಯಿತ್ರಿ ಡಾ. ಲತಾ ರಾಜಶೇಖರ್ ತಿಳಿಸಿದರು.ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚಿಗುರು ಸಾಹಿತ್ಯ ಬಳಗ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಇಂದು ಮಹಿಳೆ ಕಾಲ ಮಿತಿ ಇಲ್ಲದೆ ದುಡಿಯುತ್ತಿದ್ದು, ಹೊರಗಡೆಯೂ ದುಡಿಯಬೇಕಾದ ಅನಿವಾರ್ಯತೆ ಇದೆ. ಇದರ ನಡುವೆಯೂ ಸಾಧನೆಗೈಯುತ್ತಿರುವುದು ಹೆಮ್ಮೆಯ ಸಂಗತಿ. ಇದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ತನ್ನ ಛಾಪನ್ನು ಮೂಡಿಸುತ್ತಿರುವುದಕ್ಕೆ ಸಾಕ್ಷಿ ಎಂದು ಅವರು ಹೇಳಿದರು.ಇದೇ ವೇಳೆ ಗಮಕ ಕ್ಷೇತ್ರದಲ್ಲಿ ಮಂಗಳಾ ರಾಮಮೂರ್ತಿ, ಸಂಗೀತ ಕ್ಷೇತ್ರದಲ್ಲಿ ವಿಜಯ ಸುದರ್ಶನ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಸೀಮಾ ಯೋಗಣ್ಣ, ಡಾ.ಬಿ. ಗಾಯತ್ರಿ, ಡಾ. ಕಾವ್ಯಾ, ಸಾಹಿತ್ಯ ಕ್ಷೇತ್ರದಲ್ಲಿ ಎಚ್.ಎಸ್. ಸುಧಾ ಜೋಶಿ ಅವರಿಗೆ ಸ್ತ್ರೀ ಕಸ್ತೂರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾಧ್ಯಕ್ಷ ನಾಗರಾಜು ವಿ. ಬೈರಿ, ಆಧ್ಯಾತ್ಮಿಕ ಚಿಂತಕಿ ಸುಮತಿ ಸುಬ್ರಹ್ಮಣ್ಯ, ಕಸಾಪ ಉಪಾಧ್ಯಕ್ಷ ಎನ್. ಅನಂತ, ಚಿಗುರು ಸಾಹಿತ್ಯ ಬಳಗದ ಕಾರ್ಯದರ್ಶಿ ನಾಗೇಂದ್ರ ಹೆಬ್ಬಾರ್, ಸಂಚಾಲಕ ಎಂ.ವಿ. ನಾಗೇಂದ್ರ ಬಾಬು, ಎ. ಹರ್ಷವರ್ಧನ ಮೊದಲಾದವರು ಇದ್ದರು.