ಕರ್ನಾಟಕ ಸೋಪ್ಸ್ ಆ್ಯಂಡ್‌ ಡಿಟರ್ಜೆಂಟ್ಸ್ ಲಿಮಿಟೆಡ್ ಸಂಸ್ಥೆಯು (ಕೆಎಸ್‌ಡಿಎಲ್‌) ಜ.11ರಿಂದ ಜ.20ರವರೆಗೆ ವಿಜಯಪುರದ ಸಿದ್ದೇಶ್ವರ ಸಂಸ್ಥೆ ಆವರಣದಲ್ಲಿರುವ ಶಿವಾನುಭವ ಮಂಟಪದಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ ಮೇಳ ಆಯೋಜಿಸಿದ್ದು, ವಿಶೇಷ ರಿಯಾಯತಿ ದರದಲ್ಲಿ ಉತ್ಪನ್ನಗಳ ಮಾರಾಟ ಇರಲಿದೆ ಎಂದು ಕೆಎಸ್‌ಡಿಎಲ್‌ ಆಡಳಿತ ಹಾಗೂ ಮಾರುಕಟ್ಟೆಯ ಪ್ರಧಾನ ವ್ಯವಸ್ಥಾಪಕ ಎಂ.ಗಂಗಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಕರ್ನಾಟಕ ಸೋಪ್ಸ್ ಆ್ಯಂಡ್‌ ಡಿಟರ್ಜೆಂಟ್ಸ್ ಲಿಮಿಟೆಡ್ ಸಂಸ್ಥೆಯು (ಕೆಎಸ್‌ಡಿಎಲ್‌) ಜ.11ರಿಂದ ಜ.20ರವರೆಗೆ ವಿಜಯಪುರದ ಸಿದ್ದೇಶ್ವರ ಸಂಸ್ಥೆ ಆವರಣದಲ್ಲಿರುವ ಶಿವಾನುಭವ ಮಂಟಪದಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ ಮೇಳ ಆಯೋಜಿಸಿದ್ದು, ವಿಶೇಷ ರಿಯಾಯತಿ ದರದಲ್ಲಿ ಉತ್ಪನ್ನಗಳ ಮಾರಾಟ ಇರಲಿದೆ ಎಂದು ಕೆಎಸ್‌ಡಿಎಲ್‌ ಆಡಳಿತ ಹಾಗೂ ಮಾರುಕಟ್ಟೆಯ ಪ್ರಧಾನ ವ್ಯವಸ್ಥಾಪಕ ಎಂ.ಗಂಗಪ್ಪ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮೇಳವು ಭಾನುವಾರದಿಂದ ಪ್ರತಿದಿನ ಬೆಳಗ್ಗೆ 9.30 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ. ಸಾಬೂನು ಮೇಳದಲ್ಲಿ ಮೈಸೂರು ಅರಮನೆಯ ದರ್ಬಾರ್ ಹಾಲ್ ಸೆಟ್‌ ವಿಶೇಷ ಆಕರ್ಷಣೆಯಾಗಿದ್ದು, ಸಂಸ್ಥೆ ಉತ್ಪಾದಿಸುತ್ತಿರುವ 50ಕ್ಕೂ ಹೆಚ್ಚು ಉತ್ಕೃಷ್ಟ ದರ್ಜೆಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷ ರಿಯಾಯತಿ ದರದಲ್ಲಿ ಗ್ರಾಹಕರು ತಮಗೆ ಬೇಕಾದ ಉತ್ಪನ್ನಗಳನ್ನು ಖರೀದಿಸಬಹುದು ಎಂದರು.

ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರ್‌ ಅವರು ಸ್ಥಾಪಿಸಿದ ಕೆಎಸ್‌ಡಿಎಲ್‌ ಸಂಸ್ಥೆಯನ್ನು ಇದೀಗ ಸಚಿವ ಎಂ.ಬಿ‌.ಪಾಟೀಲ್‌ ಹಾಗೂ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡರ ಸಾರಥ್ಯದಲ್ಲಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರಶಾಂತ ಪಿಕೆಎಂ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ. ನಮ್ಮ ಸಂಸ್ಥೆಯ ಉತ್ಪನ್ನಗಳ ಗುಣಮಟ್ಟದಲ್ಲಿ ಯಾವುದೇ ರಾಜೀ ಇಲ್ಲ. ನಮ್ಮ‌ ಸಂಸ್ಥೆಗೆ ಜಿಐ ಪ್ರಮಾಣಪತ್ರ, ಐಎಸ್‌ಒ ಪ್ರಮಾಣಪತ್ರ ಹಾಗೂ ಹಲವು ಪ್ರಶಸ್ತಿಗಳು ಬಂದಿವೆ. ಉತ್ಪಾದಿಸುವ ಸಾಬೂನುಗಳಲ್ಲಿ ಶೇ.80ರಷ್ಟು ಟಿಎಫ್‌ಎಂ ಇದ್ದು ಇದರಿಂದ ತ್ವಚೆಗೆ ಹಾನಿಯಾಗುವುದಿಲ್ಲ. ಈ ಬಾರಿಯ ಮೇಳದಲ್ಲಿ ಶೇ.10 ರಿಂದ 15ರಷ್ಟು ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ಒಡೆತನದಲ್ಲಿದ್ದು, ನೈಸರ್ಗಿಕ ಶ್ರೀಗಂಧದ ಎಣ್ಣೆಯಿಂದ ತಯಾರಿಸಿರುವ ಮೈಸೂರು ಸ್ಯಾಂಡಲ್ ಸಾಬೂನಿನಿಂದ ವಿಶ್ವ ವಿಖ್ಯಾತಿ ಪಡೆದಿದೆ. ಭೌಗೋಳಿಕ ಸ್ವಾಮ್ಯ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರದಿಂದ ಪಡೆದಿದ್ದು, ಭಾರತದ ಬೌದ್ಧಿಕ ಆಸ್ತಿಯಾಗಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯು ನಮ್ಮ ಪರಂಪರೆ, ನಮ್ಮ ಸಂಸ್ಕೃತಿಯ ಪ್ರತೀಕವಾದ ಸುಗಂಧ ರಾಯಭಾರಿ ಎಂದೇ ವಿಶ್ವವಿಖ್ಯಾತಿ ಪಡೆದಿದೆ. ಮೈಸೂರು ಶ್ರೀಗಂಧದ ಎಣ್ಣೆ ಮತ್ತು ಮೈಸೂರು ಶ್ರೀಗಂಧದ ಸಾಬೂನು ತಯಾರಿಸುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆ 100 ವರ್ಷಗಳ ಭವ್ಯ ಪರಂಪರೆ ಮತ್ತು ಇತಿಹಾಸ ಹೊಂದಿದೆ ಎಂದು ತಿಳಿಸಿದರು.

ಶಾಖಾ ವ್ಯವಸ್ಥಾಪಕಿ ಸುಷ್ಮಾ.ಆರ್ ಮಾತನಾಡಿ, ಮೈಸೂರು ಸ್ಯಾಂಡಲ್ ಸಾಬೂನು ಶೇ.100 ಕೆಮಿಕಲ್ ರಹಿತ ಶ್ರೀಗಂಧದ ಎಣ್ಣೆಯುಕ್ತವಾಗಿದ್ದು, ಈ ಮೇಳದ ಪ್ರಯೋಜನವನ್ನು ಈ ಭಾಗದ ಜನತೆ ಪಡೆದುಕೊಳ್ಳಬೇಕು ಎಂದರು.

ಸಂಸ್ಥೆಯ ಇತರೆ ಉತ್ಪನ್ನಗಳಾದ ಮೈಸೂರು ಸ್ಯಾಂಡಲ್ ಸಾಬೂನು, ಮೈಸೂರು ಸ್ಯಾಂಡಲ್‌ ಗಿಫ್ಟ್ ಪ್ಯಾಕ್, ಮೈಸೂರು ಸ್ಯಾಂಡಲ್‌ ಗೋಲ್ಡ್, ಗೋಲ್ಡ್ ಸಿಕ್ಸರ್, ಧೂಪ್, ಅಗರಬತ್ತಿಗಳು, ಹರ್ಬಲ್ ಹ್ಯಾಂಡ್ ವಾಷ್, ಕ್ಲೀನಾಲ್, ಬೇಬಿ ಸಾಬೂನು, ಆಯಿಲ್, ಕಾರ್ಬೋಲಿಕ್ ಸಾಬೂನು, ವಾಷಿಂಗ್ ಬಾರ್ ಸಾಬೂನು ಸೇರಿದಂತೆ ಇತರ ವಸ್ತುಗಳು ಎಲ್ಲ ವರ್ಗಗಳ ಗ್ರಾಹಕರಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಕೆ.ಎಸ್.ಡಿ‌.ಎಲ್ ಅಧಿಕಾರಿಗಳಾದ ವಿಜಯಮಹಾಂತೇಶ ಕಾಮತ, ಜೆ.ಸಿ.ಮಂಜುನಾಥ ಇದ್ದರು.₹1484.70 ಕೋಟಿ ವಹಿವಾಟು:

ಕೆಎಸ್‌ಡಿಎಲ್‌ ಸಂಸ್ಥೆಯು ಹೆಚ್ಚಿನ ವಹಿವಾಟನ್ನು ಹೊಂದಿದ್ದು, ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದೆ. 2023-24ನೇ ಸಾಲಿನಲ್ಲಿ ₹1571 ಕೋಟಿ ವಹಿವಾಟು ನಡೆಸಿ ಅಂದಾಜು ₹362.00 ಕೋಟಿ ನಿವ್ವಳ ಲಾಭ ಗಳಿಸಿದೆ. ಆರ್ಥಿಕ ವರ್ಷ 2024-25ರಲ್ಲಿ ಉತ್ಪನ್ನಗಳ ಮಾರಾಟದಲ್ಲಿ ಎಲ್ಲಾ ರಾಜ್ಯಗಳಲ್ಲಿ ಉತ್ತಮ ಪ್ರಗತಿ ತೋರುತ್ತಿದ್ದು, ₹1787.25 ಕೋಟಿ ವಹಿವಾಟು ಆಗಿದ್ದು, ₹451.04 ಕೋಟಿ ನಿವ್ವಳ ಲಾಭ ಗಳಿಸಿದೆ. ಪ್ರಸಕ್ತ ವರ್ಷ 2025-26ಕ್ಕೆ ಇದೇ ಪ್ರಗತಿ ಮುಂದುವರೆದಿದ್ದು, ಸಂಸ್ಥೆಯು 2025ರ ಡಿಸೆಂಬರ್‌ವರೆಗೆ ₹1484.70 ಕೋಟಿ ವಹಿವಾಟು ನಡೆಸಿದೆ ಎಂದು ಎಂ.ಗಂಗಪ್ಪ ತಿಳಿಸಿದರು.