ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಪಟ್ಟಣದಲ್ಲಿ ಮಂಗಳವಾರ ಶ್ರೀ ಶಿವಯೋಗಿ ಸಿದ್ದರಾಮೇಶ್ವರ 853ನೇ ಜಯಂತ್ಯುತ್ಸವ ಅದ್ದೂರಿಯಾಗಿ ನೆರವೇರಿತು.ಪಟ್ಟಣದ ಒಂದನೇ ಮುಖ್ಯರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ವರದರಾಜ ಸ್ವಾಮಿ ದೇವಾಲಯದ ಮುಂಭಾಗ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಮೆರವಣಿಗೆ ಚಾಲನೆ ನೀಡಲಾಯಿತು.
ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಸಾಗಿ ನಂತರ ಹುಣಸೂರು ರಸ್ತೆಯಲ್ಲಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕೊನೆಗೊಂಡಿತು.ನಂತರ ವೇದಿಕೆ ಕಾರ್ಯಕ್ರಮವನ್ನು ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟಿಸಿ ಮಾತನಾಡಿ, ಭೋವಿ ಸಮಾಜದವರು ತಾಲೂಕಿನಲ್ಲಿರುವ ಎಲ್ಲ ಸಮಾಜದವರಿಗೂ ಆದ್ಯತೆ ನೀಡಿ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಕೆಳ ವರ್ಗದವರಿಗೂ ಎಲ್ಲ ರೀತಿಯ ಸರ್ಕಾರದ ಸೌಲಭ್ಯ ಲಭಿಸುವಂತೆ ಆಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ನಿಗಮವನ್ನು ಸ್ಥಾಪನೆ ಮಾಡಿದರು. ಇದರಿಂದ ಈ ಸಮಾಜದ ಜನತೆಗೆ ಸರ್ಕಾರದ ಸವಲತ್ತುಗಳು ಇತರೆ ಸೌಲಭ್ಯಗಳು ಲಭಿಸುವಂತೆ ಆಗಿದೆ, ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿಯ ಅಂಗವಾಗಿ ಭೋವಿ ಸಮಾಜದವರು ಭವನವನ್ನು ನಿರ್ಮಾಣ ಮಾಡಲು ಸರ್ಕಾರ ಮೂರು ಕೋಟಿ ರು. ಗಳ ಅನುದಾನ ಬಿಡುಗಡೆ ಮಾಡಿದೆ. ಇದಲ್ಲದೆ ತಾಲೂಕಿನ ಡಾ. ಬಿ.ಆರ್. ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಗೆ ಒಂದು ಕೋಟಿ ರು. ಗಳು ಹಾಗೂ ಜಗಜೀವನ್ ರಾಮ್ ಭವನ ಮುಂದುವರಿದ ಕಾಮಗಾರಿಗೆ ಒಂದುವರೆ ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದರು.
ಭೋವಿ ಸಮಾಜದವರಿಗೆ 15 ಎಕರೆ ಭೂಮಿಭೋವಿ ಸಮಾಜದ ಅಭಿವೃದ್ದಿಗಾಗಿ ತಾಲೂಕಿನಲ್ಲಿ 15 ಎಕರೆ ಭೂಮಿಯನ್ನು ಈಗಾಗಲೇ ನೀಡಿದ್ದು, ಈ ಭೂಮಿಯ ಅಕ್ಕಪಕ್ಕದವರು ಭೂಮಿ ಒತ್ತುವರೆ ಮಾಡಿಕೊಂಡಿರುವುದು ತಿಳಿದು ಬಂದಿರುತ್ತದೆ, ಇದಕ್ಕಾಗಿ ಕೂಡಲೇ ಕ್ರಮ ವಹಿಸಿ ಭೂಮಿಯನ್ನು ತೆರೆವುಗೊಳಿಸಲಾಗುವುದು ಎಂದರು.
ಭೋವಿ ಸಮಾಜದವರು ತಮಗೆ ಹೆಚ್ಚಿನ ಬೆಂಬಲ ನೀಡಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ, ಸಮಾಜದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು, ಮಕ್ಕಳು ವಿದ್ಯಾವಂತರಾಗಬೇಕು ಇದರಿಂದ ಸಮಾಜ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು.ಚಿತ್ರದುರ್ಗ ಮಹಾ ಸಂಸ್ಥಾನದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಮಹಾದೇಶ್ವರ ಸ್ವಾಮೀಜಿ, ಶ್ರೀ ಷಡಕ್ಷರ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಮಾಜದ ರಾಜ್ಯಾಧ್ಯಕ್ಷ ಎಸ್. ರವಿಕುಮಾರ್, ಸಮಾಜದ ಜಿಲ್ಲಾಧ್ಯಕ್ಷ ಜಯ ನಾಗರಾಜು, ತಾಪಂ ಮಾಜಿ ಸದಸ್ಯ ಸಿದ್ದರಾಮಯ್ಯ, ದೊಡ್ಡನಾಯಕ, ಜಿಪಂ ಮಾಜಿ ಸದಸ್ಯರಾದ ಚಿಕ್ಕವೀರನಾಯಕ, ತಾಲೂಕು ಬಾವಿ ಸಮಾಜದ ಅಧ್ಯಕ್ಷ ವೆಂಕಟೇಶ್, ರಾಜು, ಕಂದಸ್ವಾಮಿ, ವಿ. ರಾಮಕೃಷ್ಣ, ಬಸಪ್ಪ, ವೆಂಕಟರಾಮ ಇದ್ದರು.