ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಹಾಗೂ ಕೊಡವರ ಸಾಂವಿಧಾನಿಕ ಹಕ್ಕುಗಳಿಗಾಗಿ ಹಮ್ಮಿಕೊಳ್ಳಲಾಗಿರುವ 7ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಸೋಮವಾರ ನೂರಂಬಡನಾಡ್ನ ನಾಪೋಕ್ಲಿನಲ್ಲಿ ನಡೆಯಿತು.ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡವಲ್ಯಾಂಡ್ ಆದಿಮಸಂಜಾತ ಕೊಡವ ಜನಾಂಗೀಯ ಸಮುದಾಯದ ಪಾರಂಪರಿಕ ಮತ್ತು ಅವಿಭಾಜ್ಯ ಮಾತೃಭೂಮಿಯಾಗಿದ್ದು, ಈ ಪ್ರದೇಶದಲ್ಲಿ ಸ್ವಯಂ ಆಡಳಿತ ಮತ್ತು ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ಪಡೆಯುವುದು ಕೊಡವರ ನ್ಯಾಯಸಮ್ಮತ ಹಕ್ಕಾಗಿದೆ ಎಂದು ಪ್ರತಿಪಾದಿಸಿದರು.ಕೊಡವಲ್ಯಾಂಡ್ ಕೊಡವರ ಪಾರಂಪರಿಕ ಮಾತೃಭೂಮಿಯಾಗಿದ್ದು, ಕೊಡಗನ್ನು ತಮ್ಮ ವಾಸಸ್ಥಳವನ್ನಾಗಿ ಮಾಡಿಕೊಂಡಿರುವ ಇತರ ಸಮುದಾಯಗಳಿಗೆ ಅದು ದತ್ತು ಮಾತೃಭೂಮಿಯಾಗಿದೆ ಎಂಬ ಸಿದ್ಧಾಂತವನ್ನು ಮಂಡಿಸಿದರು. ಕೊಡಗಿನಲ್ಲಿ ನೆಲೆಸಿರುವ ಪ್ರತಿಯೊಬ್ಬರನ್ನೂ ಗೌರವಿಸುವುದಾಗಿ ತಿಳಿಸಿದ ಅವರು, ದೇಶದ ವಿವಿಧ ನಗರಗಳು ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕೊಡವರಿಗೂ ಅಲ್ಲಿನ ಪ್ರದೇಶಗಳು ದತ್ತು ಮಾತೃಭೂಮಿಗಳಾಗಿವೆ ಎಂದು ಹೇಳಿದರು.ಕೊಡವರ ಸ್ವಾಯತ್ತತೆ ಮತ್ತು ಸಾಂಸ್ಕೃತಿಕ ಗುರುತಿನ ಬೇಡಿಕೆಗಳಿಗೆ ಇತರರು ವಿರೋಧ ವ್ಯಕ್ತಪಡಿಸುವ ಬದಲು ಪರಸ್ಪರ ಗೌರವದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. (ವಿಶ್ವಸಂಸ್ಥೆಯ ಆದಿಮಸಂಜಾತ ಜನರ ಹಕ್ಕುಗಳ ಘೋಷಣೆ) ಹಾಗೂ ಸಂವಿಧಾನದ ವಿವಿಧ ವಿಧಿಗಳು ಮತ್ತು ಅನುಸೂಚಿಗಳ ಆಶಯಗಳ ಆಧಾರದಲ್ಲಿ ಕೊಡವಲ್ಯಾಂಡ್ಗೆ ಸ್ವಾಯತ್ತತೆ ಕಲ್ಪಿಸಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ ಎಂದರು.ಸಂವಿಧಾನದ 244 ಮತ್ತು 371ನೇ ವಿಧಿಗಳು, ಐದನೇ ಹಾಗೂ ಆರನೇ ಅನುಸೂಚಿಗಳ ಆಶಯಗಳಡಿ ಕೊಡವರಿಗೆ ವಿಶೇಷ ರಕ್ಷಣೆ ಮತ್ತು ಸ್ವಯಂ ಆಡಳಿತದ ಅವಕಾಶ ಕಲ್ಪಿಸಬೇಕು ಎಂದು ಅಓಅ ಒತ್ತಾಯಿಸಿತು. ಸಂವಿಧಾನದ 29 ಮತ್ತು 30ನೇ ವಿಧಿಗಳಡಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ರಕ್ಷಣೆಯ ಅಗತ್ಯವನ್ನು ಪ್ರಸ್ತಾಪಿಸಿದ ನಾಚಪ್ಪ ಅವರು, ಕೊಡವರ ವಿಶಿಷ್ಟ ಜನಾಂಗೀಯ ಮತ್ತು ಭಾಷಿಕ ಗುರುತನ್ನು ಸಂರಕ್ಷಿಸಬೇಕೆಂದರು.ಕೊಡವರ ಸಾಂಪ್ರದಾಯಿಕ ಆಧ್ಯಾತ್ಮಿಕ ಆಚರಣೆಯ ಭಾಗವಾಗಿರುವ ಬಂದೂಕು ಅಥವಾ ''''''''''''''''ಗನ್-ತೋಕ್'''''''''''''''' ಪರಂಪರೆಗೆ ಸಂವಿಧಾನದ 25 ಮತ್ತು 26ನೇ ವಿಧಿಗಳಡಿ ರಕ್ಷಣೆ ನೀಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟರು. ಕೊಡವ ತಕ್ಕ್ ಭಾಷೆಯನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸುವುದು, ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವಾಗಿ ಗುರುತಿಸುವುದು ಮತ್ತು ಸಂಸತ್ತು ಹಾಗೂ ರಾಜ್ಯ ವಿಧಾನಮಂಡಲದಲ್ಲಿ ಪ್ರತ್ಯೇಕ ಪ್ರಾತಿನಿಧ್ಯ ಕಲ್ಪಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ವಿವರಿಸಿದರು.ಮುಂಬರುವ 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರನ್ನು ವಿಶಿಷ್ಟ ಜನಾಂಗೀಯ ಸಮುದಾಯವೆಂದು ಪ್ರತ್ಯೇಕವಾಗಿ ದಾಖಲಿಸಿ ಗಣತಿ ಮಾಡಬೇಕು ಎಂದು ಅಓಅ ಅಧ್ಯಕ್ಷರು ಆಗ್ರಹಿಸಿದರು. 1871-72ರಿಂದ 1941ರವರೆಗಿನ ಜನಗಣತಿಗಳಲ್ಲಿ ಕೊಡವರನ್ನು ಪ್ರತ್ಯೇಕ ಸಮುದಾಯವಾಗಿ ಗುರುತಿಸಲಾಗಿತ್ತು ಎಂದು ಉಲ್ಲೇಖಿಸಿದ ಅವರು, ನಂತರದ ಅವಧಿಯಲ್ಲಿ ಪ್ರತ್ಯೇಕ ಗುರುತಿನ ದಾಖಲೀಕರಣಕ್ಕೆ ಹಿನ್ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕುಲ್ಲೇಟಿರ ಅರುಣ್ ಬೆಬಾ ಸ್ವಾಗತಿಸಿದರು. ಕಲಿಯಂಡ ಪ್ರಕಾಶ್ ವಂದನಾರ್ಪಣೆ ಮಾಡಿದರು. ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ನಾಟೋಳಂಡ ಕಸ್ತೂರಿ ಉತ್ತಪ್ಪ ನಾಟೋಳಂಡ ಬಿಂದು ಸಚಿನ್ ಅಜ್ಜೇಟಿರ ರಾಣಿ ಪಳಂಗಪ್ಪ ಬೊಳ್ಳಂಡ ಮೀನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.