ಸಾರಾಂಶ
ಚನ್ನಪಟ್ಟಣ: ವಿದ್ಯೆಯ ಜತೆಗೆ ಮಾನವೀಯ ಮೌಲ್ಯಗಳು ಹಾಗೂ ನಾಡ ಪರಂಪರೆಯನ್ನು ತಿಳಿಸಿಕೊಡುವ ಕನ್ನಡ ಶಾಲೆಗಳು ಉಳಿದರೆ ಮಾತ್ರ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅಭಿಪ್ರಾಯಪಟ್ಟರು.
ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸಹಯೋಗದಲ್ಲಿ ರೇಷ್ಮೆನಾಡು ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಮಾನವೀಯ ಮೌಲ್ಯ ಬಿತ್ತೋಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಕನ್ನಡ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಹಾಗೂ ನಾಡ ಇತಿಹಾಸ ಕಲಿಸುವ ಕೆಲಸ ಮಾಡಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳಲ್ಲಿ ನೆಲ, ಜಲ, ಭಾಷೆಯ ವಿಚಾರದಲ್ಲಿ ಸಮಸ್ಯೆ ಉಂಟಾದ ವೇಳೆ ಮುನ್ನುಗ್ಗಿ ಹೋರಾಟ ಮಾಡುವ ಮನೋಭಾವಗಳನ್ನು ಬೆಳೆಯುತ್ತಿತ್ತು. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಾದಂತೆ ಈ ಪ್ರವೃತಿ ಮಾಯವಾಗಿದೆ ಎಂದು ವಿಷಾದಿಸಿದರು.ಕನ್ನಡ ಶಾಲೆಗಳಲ್ಲಿ ಶಿಕ್ಷಣದ ಆತ್ಮಸ್ಥೈರ್ಯವನ್ನು ತುಂಬಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಿದ್ದರು. ಇದರಿಂದ ವಿದ್ಯಾವಂತನಾದ ವಿದ್ಯಾರ್ಥಿಗೆ ಸರ್ಕಾರಿ ಕೆಲಸ ಸಿಗದಿದ್ದರೂ ಅಥವಾ ಶಿಕ್ಷಣದಲ್ಲಿ ಹಿನ್ನಡೆ ಕಂಡರೂ ಪ್ರತಿಭೆಯಿಂದ ಸಮಾಜದಲ್ಲಿ ತನ್ನದೇ ಸ್ಥಾನ ಸಂಪಾದಿಸಿ ಗೌರವಯುತವಾಗಿ ಬಾಳುವಂತಾಗಿತ್ತು. ಆದರೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಕೇವಲ ಅಂಕದ ಯಂತ್ರವನ್ನಾಗಿಸಲಾಗಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ನಿರ್ದೇಶಕ ಜಿ.ಮೋಹನ್ ಕುಮಾರ್ ಮಾತನಾಡಿ, ನಾವು ಎಷ್ಟು ಓದಿದ್ದೇವೆ ಯಾವ ಕೆಲಸ ಪಡೆಯುತ್ತೇವೆ ಎಂಬುದು ಮುಖ್ಯವಲ್ಲ. ಸಮಾಜಕ್ಕೆ ನಮ್ಮ ಕೊಡುಗೆ ಏನೆಂಬುದು ಮುಖ್ಯ. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಅದರ ಫಲಾಪಲ ದೇವರೆ ನೀಡುತ್ತಾನೆ. ಮಾನವೀಯ ಮೌಲ್ಯಗಳು ಮತ್ತು ಸೇವಾ ಮನೋಭಾವನೆ ಕುರಿತು ಅರಿವು ಮೂಡಿಸಿದರು.ಸಾಹಿತಿ ವಿಜಯ್ ರಾಂಪುರ ಮಾತನಾಡಿ, ಸಾಧನೆಗೆ ವಿದ್ಯೆಯೊಂದೇ ಮಾನದಂಡವಲ್ಲ. ಸಾಧಿಸುವ ಛಲ ಇದ್ದರೆ ನಿಮ್ಮ ಪ್ರತಿಭೆಯೇ ನಿಮಗೆ ಸಾಧನೆಯ ದಾರಿ ತೋರಿಸುತ್ತದೆ. ವಿದ್ಯಾರ್ಥಿಗಳು ಗುರುಹಿರಿಯರನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.
ಜಾನಪದ ಗಾಯಕ ಬ್ಯಾಡರಹಳ್ಳಿ ಡಾ.ಶಿವಕುಮಾರ್, ಯೋಗಾ ಶಿಕ್ಷಕಿ ರಾಧಿಕರವಿಕುಮಾರ್, ಶಿಕ್ಷಣ ಸಂಯೋಜಕ ಚಕ್ಕೆರೆ ಯೋಗೇಶ್, ಕಾಲೇಜಿನ ಪ್ರಾಂಶುಪಾಲ ಎಸ್.ಶಿವಾನಂದ ಮಾತನಾಡಿದರು. ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ರಾಜ್ಯ ಉಪಾಧ್ಯಕ್ಷರಾದ ರಂಜಿತ್‌ಗೌಡ, ಬೆಂಕಿಶ್ರೀಧರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಶಂಕರ್ ಆರ್., ಉಪನ್ಯಾಸಕರಾದ ಬಿ. ಉಮೇಶ್, ಬ್ರಿಂದು ರಾಮ್ ಆರ್., ಚಂದ್ರಮೊಹನ್ ಕೆ.ಬಿ., ದೇವರಾಜ ಆರ್., ಗವಿರಾಯಪ್ಪ, ಗೀತಾ, ಇಂದ್ರಾಣಿ ಎನ್., ಮಮತಾ ಜಿ.ಎಂ., ಮೋಹನ್ ಕೆ.ಎ., ನಾಗೇಶ್ ಶಾನ್‌ಭಾಗ್ ಇತರರಿದ್ದರು.ಪೊಟೋ೨ಸಿಪಿಟಿ೧:
ಚನ್ನಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಾನವೀಯ ಮೌಲ್ಯ ಬಿತ್ತೋಣ ಕಾರ್ಯಕ್ರಮ ನಡೆಯಿತು.