ಸಾರಾಂಶ
ಕಾರವಾರ: ಇಲ್ಲಿನ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆಗೆ ತೆರಳುವ ಬೋಟ್‌ಗಳ ಸಾಮರ್ಥ್ಯದ ಮೇಲೆ ಭಕ್ತರನ್ನು ಹತ್ತಿಸಬೇಕು. ಮೀನುಗಾರಿಕಾ ಇಲಾಖೆ ಮೊದಲೇ ಈ ಬಗ್ಗೆ ಪರಿಶೀಲಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಉಪ ವಿಭಾಗಾಧಿಕಾರಿ ಕನಿಷ್ಕ್ ಸೂಚಿಸಿದರು.
ನಗರದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ನಡೆದ ಕೂರ್ಮಗಡ ಜಾತ್ರೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಬೋಟ್‌ನ ನಂಬರ್ ಬರೆದುಕೊಳ್ಳಬೇಕು. ಪೊಲೀಸರು, ತಹಸೀಲ್ದಾರರು ಅಗತ್ಯ ಲೈಫ್ ಜಾಕೀಟ್ ವ್ಯವಸ್ಥೆ ಮಾಡಿ ಪ್ರತಿಯೊಬ್ಬ ಪ್ರಯಾಣಿಕರು ಧರಿಸುವಂತೆ ಸೂಚಿಸಬೇಕು. ಕೂರ್ಮಗಡ ದ್ವೀಪಕ್ಕೆ ತೆರಳುವ ಬೋಟ್‌ಗಳು ಮೊದಲೇ ಮೀನುಗಾರಿಕಾ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು ಎಂದರು.ಮೀನುಗಾರರ ಮುಖಂಡ ರಾಜು ತಾಂಡೇಲ್ ಮಾತನಾಡಿ, ಕೂರ್ಮಗಡದ ತೀರದಲ್ಲಿ ಜಟ್ಟಿ ನಿರ್ಮಾಣ ಮಾಡುತ್ತೇವೆ ಎಂದು ಪ್ರತಿ ವರ್ಷವೂ ಭಕ್ತರಿಗೆ ದಾರಿ ತಪ್ಪಿಸುತ್ತಿದ್ದಾರೆ. ಜಾತ್ರೆ ವೇಳೆ ಮಾತ್ರ ನೆನಪಿಗೆ ಬರುತ್ತದೆ. ಉಳಿದ ಸಮಯದಲ್ಲಿ ಯಾರಿಗೂ ನೆನಪಿಗೆ ಬರುವುದಿಲ್ಲ. ಮಹಿಳೆಯರು, ವೃದ್ಧರು ಬೋಟ್‌ನಿಂದ ಇಳಿಯಲು ಸಮಸ್ಯೆಯಾಗುತ್ತದೆ ಎಂದು ಅಸಮಾಧಾನ ಹೊರಹಾಕಿದರು.
ಮೀನುಗಾರಿಕಾ ಬೊಟ್‌ಗಳು ಎಂದೂ ಅವಘಡಕ್ಕೆ ಒಳಗಾಗಿಲ್ಲ. ಈ ಹಿಂದೆ ಪ್ಯಾಸೆಂಜರ್ ಬೋಟ್‌ನವರು ಮಿತಿಮೀರಿ ಜನರನ್ನು ತುಂಬಿದ ಕಾರಣ ಜಾತ್ರೆ ವೇಳೆ ದುರಂತ ನಡೆದಿದೆ. ಮೀನುಗಾರಿಕಾ ಬೋಟ್‌ಗಳಲ್ಲಿ ತೆರಳುವವರಿಗೆ ಬೋಟ್‌ನಿಂದ ಡಿಂಗಿ ಮೂಲಕ ದಡಕ್ಕೆ ಹೋಗಿ ಇಳಿಯುವಾಗ ಲೈಫ್ ಜಾಕೇಟ್ ಹಾಕಲು ಸೂಚಿಸಬೇಕು. ಅಗತ್ಯ ಲೈಫ್ ಜಾಕೇಟ್ ವ್ಯವಸ್ಥೆ ಮಾಡಬೇಕು ಎಂದರು.ಎಸಿ ಕನಿಷ್ಕ್ ಮಾತನಾಡಿ, ಬೈತಖೋಲ್ ಬಂದರಿನಿಂದ ಮಾತ್ರ ಬೋಟ್‌ಗಳು ಹೋಗಲು ಅವಕಾಶ ನೀಡಲಾಗಿದೆ. ಬೇರೆಡೆಯಿಂದ ಹೋಗುವಂತಿಲ್ಲ. ಪೊಲೀಸರು ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಜ. ೨೫ರಂದು ಜಾತ್ರೆಯ ದಿನ ಬೆಳಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ಮಾತ್ರ ಬೈತಖೋಲ್‌ದಿಂದ ಜಾತ್ರೆಗೆ ತೆರಳಲು ಭಕ್ತರಿಗೆ ಅವಕಾಶವಿದೆ. ಸಂಜೆ ೬ ಗಂಟೆಯ ಒಳಗೆ ಅಲ್ಲಿಂದ ವಾಪಸ್ ಹೊರಡಬೇಕು. ಬೈತಖೋಲ್‌ನಲ್ಲಿ ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನ ಇರಬೇಕು. ಒಂದು ಬೋಟ್ ಹೆಚ್ಚುವರಿಯಾಗಿ ಇರಿಸಬೇಕು. ಕೋಸ್ಟ್ ಗಾರ್ಡ್, ಸಿಎಸ್‌ಪಿ ಸಮುದ್ರದಲ್ಲಿ ಗಸ್ತು ತಿರುಗುತ್ತಿರಬೇಕು. ಮದ್ಯ ಸೇವನೆ ಮಾಡಿಕೊಂಡು ಹೋಗಲು, ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಪೊಲೀಸರು ಕಟ್ಟುನಿಟ್ಟಾಗಿ ಇಂಥವರನ್ನು ತಡೆಯಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ನಿಶ್ಚಲ್ ನರೋನ್ಹ, ಡಿಎಸ್‌ಪಿ ವ್ಯಾಲೆಂಟೈನ್ ಡಿಸೋಜಾ, ಕಾರವಾರ ಪಿಐ ರಮೇಶ ಹೂಗಾರ, ಕದ್ರಾ ಸಿಪಿಐ ಪ್ರಕಾಶ ದೇವಾಡಿಗ ಹಾಗೂ ಅಧಿಕಾರಿಗಳು, ಸಾರ್ವಜನಿಕರು ಇದ್ದರು.ದೇವರ ದರ್ಶನಕ್ಕೆ ಅವಕಾಶ: ನರಸಿಂಹ ದೇವರ ಮೂರ್ತಿಯನ್ನು ಕಡವಾಡದಿಂದ ಜ.೨೫ರಂದು ಬೆಳಗ್ಗೆ ೮.೩೦ಕ್ಕೆ ತೆಗೆದುಕೊಂಡು ಹೊರಡಲಾಗುತ್ತದೆ. ದೋಣಿ ಮೂಲಕ ಕೂರ್ಮಗಡಕ್ಕೆ ಸಾಗಲಿದ್ದು, ಬೆಳಗ್ಗೆ ೧೦ ಗಂಟೆ ವೇಳೆಗೆ ದೇವರು ಕೂರ್ಮಗಡ ದ್ವೀಪ ತಲುಪಲಿದ್ದು, ಮೂರು ದೋಣಿ ವ್ಯವಸ್ಥೆ ಮಾಡಲಾಗಿದೆ. ಅಂದಾಜು ೧೫೦ ಜನರು ದೇವರೊಂದಿಗೆ ತೆರಳಿದ್ದು, ದೇವರು ಪೀಠಾಲಂಕಾರವಾದ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಕೋವಿಡ್ ಸೋಂಕಿನಿಂದಾಗಿ ಕಳೆದ ೨-೩ ವರ್ಷಗಳಿಂದ ಜಾತ್ರೆಗೆ ಹೆಚ್ಚಿನ ಜನರು ಆಗಮಿಸಿರಲಿಲ್ಲ. ಈ ಬಾರಿ ೩೫೦೦-೪೦೦೦ ಜನ ನಿರೀಕ್ಷೆಯಿದೆ.