ಫೆ.11-15: ಉರ್ವ ಮಾರಿಯಮ್ಮ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ

| Published : Jan 15 2024, 01:46 AM IST

ಸಾರಾಂಶ

ಮಂಗಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಬ್ರಹ್ಮಕಲಶೋತ್ಸವದ ಸಡಗರದಲ್ಲಿದೆ. ಫೆ.11ರಿಂದ 15ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುಪುರಾಣ ಪ್ರಸಿದ್ಧ ದೇವಸ್ಥಾನಗಳಲ್ಲಿ ಪ್ರಾಮುಖ್ಯತೆ ಪಡೆದಿರುವ ಮಂಗಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಬ್ರಹ್ಮಕಲಶೋತ್ಸವದ ಸಡಗರದಲ್ಲಿದೆ. ಫೆ.11ರಿಂದ 15ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಈ ಸಂದರ್ಭ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಪ್ರಚಾರ ರಥದ ಸಂಚಾರ, ಹೊರೆಕಾಣಿಕೆ ಮೆರವಣಿಗೆ, ಬೃಹತ್ ನೂತನ

ಸಭಾಂಗಣ ಉದ್ಘಾಟನೆ ನೆರವೇರಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ನಾಡೋಜ ಜಿ. ಶಂಕರ್ ತಿಳಿಸಿದ್ದಾರೆ.

ಭಾನುವಾರ ಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಫೆ.26 ರಿಂದ ಕ್ಷೇತ್ರದಲ್ಲಿ ವರ್ಷಾವಧಿ ಮಹಾಪೂಜೆ, ಮಾರ್ಚ್ 2ರಂದು ಶ್ರೀಮಲರಾಯ ಪರಿವಾರ ದೈವಗಳ ನೇಮೋತ್ಸವ, ಧಾರ್ಮಿಕ ಸಭಾ ಕಲಾಪ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ನೆರವೇರಲಿದೆ ಎಂದರು.ಫೆ.9ರಂದು ಹೊರೆಕಣಿಕೆ:

ಹೊರೆಕಾಣಿಕೆ ಮೆರವಣಿಗೆ ಫೆ.9ರಂದು ಸಂಜೆ 3 ಗಂಟೆಗೆ ನಗರದ ಕೇಂದ್ರ ಮೈದಾನ ಹಾಗೂ ಕೂಳೂರು ಸಮೀಪದ ಗೋಲ್ಡ್ ಪಿಂಚ್ ಮೈದಾನದಿಂದ ಏಕಕಾಲದಲ್ಲಿ ಹೊರಡಲಿದೆ. ಎರಡೂ ಕಡೆಯ ಹೊರೆಕಾಣಿಕೆ ಮೆರವಣಿಗೆ ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ಒಟ್ಟು ಸೇರಿ ಕ್ಷೇತ್ರಕ್ಕೆ ಆಗಮಿಸಲಿದೆ. ಫೆ.11ರಿಂದ ಬ್ರಹ್ಮಕಲಶೋತ್ಸವದ ವೈದಿಕ ವಿಧಿ-ವಿಧಾನಗಳು ಆರಂಭವಾಗಲಿದ್ದು, ಫೆ.13ರಂದು ದೇವರ ಪುನರ್ ಪ್ರತಿಷ್ಠೆ ನೆರವೇರುತ್ತದೆ. ಫೆ.15ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. ಫೆ.16ರಂದು ವರ್ಷಾವಧಿ ಮಹಾಪೂಜೆಗೆ ಪ್ರಸಾದ ಹಾರಿಸುವಿಕೆ, ಫೆ.23ರಂದು ಚಂಡಿಕಾಯಾಗ, ಫೆ.26 ಹಾಗೂ 27ರಂದು ವರ್ಷಾವಧಿ ಮಹಾಪೂಜೆ ನಡೆಯುತ್ತದೆ. ಮಾ.2 ರಂದು ಕ್ಷೇತ್ರದ ಶ್ರೀ ಮಲರಾಯ ಪರಿವಾರ ದೈವಗಳ ನೇಮೋತ್ಸವ ನಡೆಯುವುದರೊಂದಿಗೆ ವರ್ಷಾವಧಿ ಉತ್ಸವ ಮುಕ್ತಾಯವಾಗಲಿದೆ. ಫೆ.3ರಂದು ಸಭಾಂಗಣ ಲೋಕಾರ್ಪಣೆ: ಕ್ಷೇತ್ರದ ಮುಂಭಾಗದಲ್ಲಿ 6 ಕೋಟಿ ರು. ವೆಚ್ಚದಲ್ಲಿ ನೂತನ ಬೃಹತ್ ಸಭಾಂಗಣದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಫೆ.3ರಂದು ಬೆಳಗ್ಗೆ 10 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಸುಮಾರು 1 ಕೋಟಿ ರು. ವೆಚ್ಚದಲ್ಲಿ ದೇವಸ್ಥಾನ ನವೀಕರಣ ಕಾರ್ಯ ನಡೆದಿದೆ ಎಂದರು. ಬ್ರಹ್ಮಕಲಶೋತ್ಸವ ಸಂದರ್ಭ ಉರ್ವ ಮೈದಾನ, ಉರ್ವ ಶಾಲಾ ಮೈದಾನ, ಲೇಡಿಹಿಲ್‌ ಚರ್ಚ್‌ ಮೈದಾನಗಳಲ್ಲಿ ವಾಹನ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಶಾಸಕ ವೇದವ್ಯಾಸ ಕಾಮತ್, ಗೌರವ ಸಲಹೆಗಾರ ಜಯ ಸಿ. ಕೋಟ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕರ್ಕೇರ, ಪ್ರಧಾನ ಸಂಚಾಲಕ ಗೌತಮ್ ಸಾಲ್ಯಾನ್ ಕೋಡಿಕಲ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಬಂಗೇರ ಬೋಳೂರು, ಉಪಾಧ್ಯಕ್ಷ ಕುಮಾರ್ ಮೆಂಡನ್ ಬೈಕಂಪಾಡಿ, ಕೋಶಾಧಿಕಾರಿ ವಸಂತ ಅಮೀನ್ ಬೈಕಂಪಾಡಿ, ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಲೋಕೇಶ್ ಸುವರ್ಣ, ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್ ಕೋಡಿಕಲ್, ಪ್ರಚಾರ ಸಮಿತಿ ಸಂಚಾಲಕ ಯಶವಂತ ಬೋಳೂರು, ಪ್ರಧಾನ ಅರ್ಚಕ ಶಿವಾನಂದ ಕನ್ನಡ ಮತ್ತಿತರರು ಇದ್ದರು.