ಹಾವೇರಿ: ಹಾನಗಲ್ಲ ತಾಲೂಕಿನ ನರೇಗಲ್ಲ ಗ್ರಾಮದಲ್ಲಿ ಕಾರಹುಣ್ಣಿಮೆ ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ನಡೆದಿಲ್ಲ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 29ರಂದು ಜಿಲ್ಲೆಯಾದ್ಯಂತ ಕಾರಹುಣ್ಣಿಮೆ ಅಂಗವಾಗಿ ಕರುಗಳಿಗೆ ಬಣ್ಣ ಬಳಿದು ಓಡಿಸುವ ಸಂಪ್ರದಾಯ ನಡೆದಿತ್ತು. ನರೇಗಲ್ಲದಲ್ಲಿ ಹೋರಿ ಸ್ಪರ್ಧೆ ಅಥವಾ ಮೆರವಣಿಗೆ ಇರಲಿಲ್ಲ. ಮಸೀದಿ ಬಳಿ ಮಧ್ಯಾಹ್ನದ ವರೆಗೆ 112 ಸಿಬ್ಬಂದಿ ಕರ್ತವ್ಯದಲ್ಲಿದ್ದು, ಶಿಫ್ಟ್ ಮುಗಿದ ಬಳಿಕ ತೆರಳಿದ್ದರು. ಬಳಿಕ ಗಲಾಟೆ ನಡೆದಿದ್ದು, ಮಾಹಿತಿ ದೊರೆಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಹೇಳಿದರು.ಮಸೀದಿ ಬಳಿ ಪಟಾಕಿ ಸಿಡಿಸಿದ ವಿಚಾರವಾಗಿ ಖ್ವಾಜಾ ಗೌಂಡಿ ಮತ್ತು ಲೋಹಿತ ನಡುವಿನ ಮಾತಿನ ಚಕಮಕಿ ಗಲಾಟೆಗೆ ತಿರುಗಿದೆ. ಬಳಿಕ ಖ್ವಾಜಾ ತನ್ನ ಮನೆಯಿಂದ ಅಡಕೆ ಕೊಯ್ಯುವ ಕುಡಗೋಲು ತಂದು ಹಲವರ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಆರೋಪಿಗಳೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರಿಂದ ತಕ್ಷಣ ಬಂಧಿಸಲು ಸಾಧ್ಯವಾಗಿರಲಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಖ್ವಾಜಾ ಗೌಂಡಿಯನ್ನು ಬಂಧಿಸಲಾಗಿದೆ. ಈತನೊಂದಿಗೆ ಮುನಾಫ್ ಹಾಗೂ ಹಜರತ್ ಅಲಿಯನ್ನೂ ಬಂಧಿಸಲಾಗಿದೆ. ಖ್ವಾಜಾ ಗಾಂಜಾ ಸೇವಿಸುತ್ತಿದ್ದ ಆರೋಪದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಎರಡೂ ಕಡೆಯವರು ದೂರು ಹಾಗೂ ಪ್ರತಿದೂರು ದಾಖಲಿಸಿದ್ದು, ಎರಡೂ ಪ್ರಕರಣಗಳಲ್ಲಿ ತಲಾ 26 ಆರೋಪಿಗಳ ಹೆಸರನ್ನು ದಾಖಲಿಸಲಾಗಿದೆ. ತನಿಖೆಯಲ್ಲಿ ನಿಜವಾದ ತಪ್ಪಿತಸ್ಥರನ್ನು ಗುರುತಿಸಿ ಬಂಧಿಸಲಾಗುವುದು. ಯಾವುದೇ ಒತ್ತಡವಿಲ್ಲದೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಹೇಳಿದರು.ಗ್ರಾಮದಲ್ಲಿ ಬಿಗಿ ಭದ್ರತೆ: ಘಟನೆಯ ಬಳಿಕ ನರೇಗಲ್ಲ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಡಿಎಸ್‌ಪಿ ನೇತೃತ್ವದಲ್ಲಿ ಎರಡು ಡಿಆರ್ ವಾಹನಗಳೊಂದಿಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎರಡೂ ಸಮುದಾಯದ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಲಾಗಿದ್ದು, ಶಾಂತಿ ಮತ್ತು ಸೌಹಾರ್ದ ಕಾಪಾಡುವಂತೆ ಮನವಿ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎರಡೂ ಕಡೆಯವರೂ ಒತ್ತಾಯಿಸಿದ್ದಾರೆ.ಪ್ರಚೋದನೆಗೆ ಕಠಿಣ ಕ್ರಮ: ಗಲಭೆಗೆ ಪ್ರಚೋದನೆ ನೀಡುವವರು, ವದಂತಿ ಹಬ್ಬಿಸುವವರು ಅಥವಾ ಮಾರಕಾಸ್ತ್ರ ಹಿಡಿದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ಯಶೋದಾ ವಂಟಗೋಡಿ ಎಚ್ಚರಿಕೆ ನೀಡಿದರು. ಜು. 3ರಂದು ಹಾನಗಲ್ಲದಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ ಎಂದರು.ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರ ಬಂಧನ: ಹಾವೇರಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಡಿಶಾದಿಂದ ಗಾಂಜಾ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದ ಸವಣೂರು ಮೂಲದ ಇಬ್ಬರನ್ನು ಬಂಧಿಸಲಾಗಿದೆ. ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದಡಿ ಕಳೆದ ಎರಡು ತಿಂಗಳಲ್ಲಿ ಹಲವು ಕಾರ್ಯಾಚರಣೆ ನಡೆಸಲಾಗಿದೆ. ಈ ವರ್ಷ ಇದುವರೆಗೆ 22 ಮಂದಿಯ ವಿರುದ್ಧ 10 ಗಾಂಜಾ ಪ್ರಕರಣಗಳು ದಾಖಲಾಗಿವೆ. ಸನ್ಮಿತ್ರ ಯೋಜನೆಯಡಿ 50 ಗಾಂಜಾ ಸೇವನೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಹೆಚ್ಚಿನವರು 25ರಿಂದ 30 ವರ್ಷದೊಳಗಿನ ಯುವಕರಾಗಿರುವುದು ಗಮನಕ್ಕೆ ಬಂದಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.