ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ವಿಶ್ವದ ಭೂಪಟದಲ್ಲಿ ಭಾರತದ ಏಕತೆ, ಸಾರ್ವಭೌಮತೆ ಎತ್ತಿ ಹಿಡಿಯುವಲ್ಲಿ ಹಾಗೂ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಶ್ರಮ, ಕೊಡುಗೆ ಅಪಾರವಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.ನಗರದ ಕ್ಯಾತ್ಸಂದ್ರದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಗಿಡ ನೆಟ್ಟು, ಶಾಲಾ ಮಕ್ಕಳಿಗೆ ನೋಟ್‌ಬುಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ದೇಶದ ಅಭಿವೃದ್ಧಿಯಲ್ಲಿ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ವಿಕಸಿತ ಭಾರತ ನಿರ್ಮಾಣಕ್ಕೆ ಪ್ರಧಾನಿಗಳು ಶ್ರಮ ವಹಿಸಿದ್ದಾರೆ. ನಮ್ಮ ರಾಷ್ಟ್ರವನ್ನು ಬೇರೆ ಯಾವುದೇ ದೇಶಕ್ಕೆ ಕಡಿಮೆ ಇಲ್ಲದ ಹಾಗೆ ನಂ. 1ನೇ ಸ್ಥಾನಕ್ಕೆ ತರುವುದರಲ್ಲಿ ಪ್ರಧಾನಿ ಮೋದಿಯವರು ಕಳೆದ ೧೧ ವರ್ಷಗಳಲ್ಲಿ ಕೈಗೊಂಡ ತೀರ್ಮಾನಗಳು, ಸಂಕಲ್ಪ ಮಹತ್ವದ್ದಾಗಿವೆ ಎಂದರು.ನಮ್ಮ ದೇಶಕ್ಕೆ ಇನ್ನು ಹತ್ತಾರು ವರ್ಷಗಳ ಕಾಲ ಪ್ರಧಾನಿ ಮೋದಿಯವರ ಆಡಳಿತದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿ ಎಂದು ಆಶಿಸಿದ ಅವರು, 11 ವರ್ಷದಲ್ಲಿ 25 ಕೋಟಿ ಬಡ ಕುಟುಂಬಗಳನ್ನು ಮೇಲ್ಪಂಕ್ತಿಗೆ ತಂದಿರುವ ಹೆಗ್ಗಳಿಕೆಗ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಪ್ರಧಾನಿಗಳು ಬಡವರು, ಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಜಿಎಸ್‌ಟಿ ದರವನ್ನು ಪರಿಷ್ಕರಣೆ ಮಾಡಿದ್ದಾರೆ. ಈ ಮೂಲಕ ದೇಶದ ಜನಸಾಮಾನ್ಯರಿಗೆ ದಸರಾ ಮತ್ತು ದೀಪಾವಳಿ ಹಬ್ಬಕ್ಕೆ ನೀಡಿರುವ ಕೊಡುಗೆ ಅತ್ಯಮೂಲ್ಯವಾಗಿದೆ ಎಂದರು. ಚಹಾ ಮಾರುತ್ತಿದ್ದ ಯುವಕ ಇಂದು 3ನೇ ಬಾರಿಗೆ ರಾಷ್ಟ್ರದ ಪ್ರಧಾನಿಯಾಗಿರುವುದು ನಮ್ಮ ಕಣ್ಣ ಮುಂದೆಯೇ ಇರುವಾಗ ಮಕ್ಕಳು ಅವರನ್ನು ಸ್ಫೂರ್ತಿಯಾಗಿಟ್ಟುಕೊಂಡು ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದು ಕರೆ ನೀಡಿದರು. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. ಇದನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲಾ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಇನ್ನೊಂದು ತಿಂಗಳೊಳಗೆ ಎನ್‌ಜಿಒ ಸಂಸ್ಥೆಗಳ ಸಹಕಾರದೊಂದಿಗೆ ಕ್ಯಾತ್ಸಂದ್ರ ಶಾಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಕ್ಯಾತ್ಸಂದ್ರ ಶಾಲೆಯಲ್ಲಿ 1 ಸಾವಿರ ಮಕ್ಕಳು ವ್ಯಾಸಂಗ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವ ಭರವಸೆಯನ್ನು ಅವರು ನೀಡಿದರು.ಅನಿರೀಕ್ಷಿತವಾಗಿ ನಾನು ಈ ಕ್ಷೇತ್ರಕ್ಕೆ ಬಂದವನು, ರಾಜಕಾರಣ ಮುಳ್ಳಿನ ಹಾಸಿಗೆ. ಇದನ್ನು ನಾವು ಸ್ವೀಕಾರ ಮಾಡಿದ್ದೇವೆ ಎಂದ ಅವರು, ನನಗೆ ವರಿಷ್ಠರಷ್ಟೇ ಮಾಜಿ ಸಂಸದ ಜಿ.ಎಸ್. ಬಸವರಾಜು ರವರು ಅಷ್ಟೇ ಮುಖ್ಯ. ನಾನು ಈ ಕ್ಷೇತ್ರಕ್ಕೆ ಬರಲು ವರಿಷ್ಠರಷ್ಟೇ ಬಸವರಾಜು ರವರು ಕಾರಣ ಎಂದರು.ನಾನು ರಾಜಕಾರಣ ಸೇರಿದಂತೆ ಬದುಕಿನಲ್ಲಿ ಈ ಮಟ್ಟಕ್ಕೆ ಬೆಳೆಯಲು ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಆದಿಚುಂಚನಗಿರಿಯ ಡಾ. ಬಾಲಗಂಗಾಧರನಾಥ ಶ್ರೀಗಳು ಆಶೀರ್ವಾದವೇ ಕಾರಣ ಎಂದು ಅವರು ಹೇಳಿದರು.ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 40 ಸಾವಿರ ಮಕ್ಕಳಿಗೆ ತಲಾ 5 ನೋಟ್‌ಬುಕ್‌ನಂತೆ ವಿತರಣೆ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜು, ಮುಖಂಡರಾದ ಎಂ.ಡಿ. ಲಕ್ಷ್ಮೀನಾರಾಯಣ್, ಎಸ್.ಪಿ. ಚಿದಾನಂದ್, ಆರ್. ಬಸವರಾಜು, ಚಿದಾನಂದ್, ಬೈರಣ್ಣ, ರುದ್ರೇಶ್, ಪಂಚಾಕ್ಷರಿ, ಸಿದ್ದಪ್ಪ, ಎಂ.ಎನ್. ಲೋಕೇಶ್, ಹೊನ್ನೇಶ್‌ಕುಮಾರ್, ಮಹದೇವಣ್ಣ ಮತ್ತಿತರರು ಉಪಸ್ಥಿತರಿದ್ದರು.ಪೋಟೋ : ಕ್ಯಾತ್ಸಂದ್ರದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಗಣ್ಯರು ಗಿಡನೆಟ್ಟರು.