ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ

| Published : Sep 18 2025, 01:10 AM IST

ಸಾರಾಂಶ

ಕ್ಷೇತ್ರದ ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡುವ ಜೊತೆಗೆ ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದು ಅಹವಾಲು ಸ್ವೀಕರಿಸಿ ತಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ಶಾಸಕ ಕೆ.ಎನ್.ರಾಜಣ್ಣ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಕ್ಷೇತ್ರದ ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡುವ ಜೊತೆಗೆ ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದು ಅಹವಾಲು ಸ್ವೀಕರಿಸಿ ತಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ಶಾಸಕ ಕೆ.ಎನ್.ರಾಜಣ್ಣ ಭರವಸೆ ನೀಡಿದರು.

ಬುಧವಾರ ಜಿಪಂ ಹಾಗೂ ತಾಲೂಕು ಆಡಳಿತದಿಂದ ತಾಲೂಕಿನ ಐಡಿ ಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಜನಸ್ಪಂದನ, ಖಾತಾ ಅಂದೋಲನ, ವಸತಿ ಕಾರ್ಯಾದೇಶ ಪತ್ರ ಮತ್ತು ವಿವಿಧ ಯೋಜನೆಗಳಿಂದ ದೊರೆಯುವ ಸವತ್ತುಗಳನ್ನು ವಿತರಿಸಿ ಮಾತನಾಡಿದರು.

ಭೂಮಿ ಹಕ್ಕನ್ನು ಕರಾರುವಕ್ಕಾಗಿ ರೈತರ ಹೆಸರಿಗೆ ಪೋಡಿ, ಪೌತಿ ಖಾತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಒಂದು ಸಹ ಬಾಕಿ ಇರಬಾರದು. ಆ ನಿಟ್ಟಿನಲ್ಲಿ ರೈತರಿಗೆ ಸರ್ಕಾರದಿಂದ ಆಗುವ ಕೆಲಸಗಳನ್ನು ಮಾಡುತ್ತೇವೆ. ಭೂ ಮಾಲೀಕರು ತಮ್ಮ ಆಸ್ತಿಯ ಎಲ್ಲ ದಾಖಳೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಬಗರ್ ಹುಕುಂ ಸಾಗುವಳಿ ಸೇರಿ, ನಿಯಾಮನುಸಾರ ತ್ವರಿತವಾಗಿ ಕೆಲಸಗಳು ಜನರಿಗೆ ಆಗಬೇಕು. ಆ ನಿಟ್ಟಿನಲ್ಲಿ ನಮ್ಮ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ ಎಂದರು.

ನಾನು ಶಾಸಕ ಆದ ದಿನದಿಂದಲೂ ಸಹ ಭೂಮಿ ಮಾರಾಟ ಮಾಡಬೇಡಿ ಎಂದು ಹೇಳುತ್ತಾ ಬಂದಿದ್ದು, ನಿಮಗೆ ಹಣದ ಅವಶ್ಯಕತೆ ಇದ್ದರೆ ನಮ್ಮ ಡಿಸಿಸಿ ಬ್ಯಾಂಕಿನಲ್ಲಿ ಸಾಲ ಕೊಡುತ್ತೇನೆ. ದೇಶದಲ್ಲಿ ಪ್ರಸ್ತುತ 140 ಕೋಟಿ ಜನಸಂಖ್ಯೆಯಿದೆ. ಆದರೆ ಭೂಮಿ ಮಾತ್ರ ಅಷ್ಟೇ ಇದೆ. ಆಗಾಗಿ ಭೂ ಮಾಲಿಕರು ಜಮೀನು ಮಾರಾಟ ಮಾಡಬೇಡಿ ಮುಂದಿನ ನಿಮ್ಮ ಮಕ್ಕಳ ಭವಿಷ್ಯತ್ತಿಗೆ ಉಳಿಸಿ ಕೊಡಿ ಎಂದರು. 26 ಆರೋಗ್ಯ ಕೇಂದ್ರಗಳಿಗೆ ತಲಾ 65 ಲಕ್ಷ ರು.ವೆಚ್ಚದಲ್ಲಿ ಕಟ್ಟಡ ಜೊತೆಗೆ ಶಾಲಾ ಕಟ್ಟಡ,ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.

ಇಂದಿನ ಮಕ್ಕಳ ಶಿಕ್ಷಣ ಕಲಿಕೆಗೆ ಏನೆಲ್ಲಾ ಸೌಲಭ್ಯಗಳು ಬೇಕು ಅವೆಲ್ಲವನ್ನು ಸರ್ಕಾರ ಒದಗಿಸಿದೆ.ಎಲ್ಲ ಮಕ್ಕಳಿಗೆ ನಮ್ಮ ಕ್ಷೇತ್ರದಲ್ಲಿ ನೋಟ್‌ ಪುಸ್ತಕಗಳನ್ನು ನೀಡಿದ್ದು, ಇದನ್ನು ಮಾದರಿಯಾಗಿ ಇಟ್ಟುಕೊಂಡು ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೆ ನೋಟ್ ಬುಕ್ ವಿತರಿಸಲು ಮುಂದಿನ ಬಜೆಟ್‌ ನಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸುವಂತೆ ಸಿಎಂ ಅವರಲ್ಲಿ ಮನವಿ ಮಾಡುವ ಮೂಲಕ ಮಧುಗಿರಿ ಇಡೀ ರಾಜ್ಯಕ್ಕೆ ಮಾಡಲ್ ಆಗಬೇಕು ಎಂಬ ಚಿಂತನೆಯಿದೆ . ಆ ನಿಟ್ಟಿನಲ್ಲಿ ಮಕ್ಕಳು ಇದರ ಸದುಪಯೋಗ ಪಡೆದು ಗುಣ ಮಟ್ಟದ ಶಿಕ್ಷಣ ಕಲಿತು ಮುಂದೆ ಬರಬೇಕು ಎಂದರು.

300 ಕೋಟಿಗೂ ಅಧಿಕ ವೆಚ್ಚದಲ್ಲಿ ಎತ್ತಿನ ಹೊಳೆ ಯೋಜನೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದ್ದು, ತಾಲೂಕಿನ 54 ಕೆರೆಗಳಿಗೆ ನೀರು ತುಂಬಿಸುತ್ತೇನೆ. ಈ ಹಿಂದೆ ಚೆಕ್ ಡ್ಯಾಂ ನಿರ್ಮಿಸಿದ್ದರಿಂದ ಅಂತರ್ಜಲ ಮಟ್ಟ ವೃದ್ಧಿಸಿದೆ.ಯಾವಬ್ಬ ರೈತರು ಸಹ ಬೋರ್‌ ವೆಲ್ ಕೊರೆಸಿಲ್ಲ .ನಾನು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮತ್ತು ಬಡವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ರಾಜಣ್ಣ ಭರವಸೆ ನೀಡಿದರು.

ಐ.ಡಿ.ಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ 138 ನಿವೇಶನ ಹಕ್ಕುಪತ್ರ, ಮತ್ತು 187 ಮನೆ ನಿರ್ಮಾಣದ ಕಾರ್ಯಾದೇಶ ಪತ್ರ,28 ಜನರಿಗೆ ಮಾಸಾಶನ, 55 ಮಂದಿಗೆ ಹಕ್ಕು ಪತ್ರ ವಿತರಿಲಾಗುತ್ತಿದೆ. 85 ಮಂದಿಗೆ ಪೌತಿ ಖಾತೆ, ಕಾರ್ಮಿಕ ಇಲಾಖೆಯಿಂದ 26 ಸೇಪ್ಟಿ ಕಿಟ್ ವಿತರಿಸಿದ್ದು, ಈ ಹೋಬಳಿಯಲ್ಲಿ 15 ಕೋಟಿಗೂ ಅಧಿಕ ಸಾಲ ಮನ್ನಾ ಮಾಡಲಾಗಿದೆ. ಈಗ ಹೋಬಳಿ ಕೇಂದ್ರದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದು,ನಂತರ ಪಂಚಾಯಿತಿ ಕೇಂದ್ರಗಳಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ,ಎಸಿ ಗೋಟೂರು ಶಿವಪ್ಪ,ತಹಸೀಲ್ದಾರ್‌ ಶ್ರೀನಿವಾಸ್‌ , ತಾಪ ಇಒ ಲಕ್ಷ್ಮಣ್, ಎಡಿಒ ಧನಂಜಯ್‌,ಡಿಡಿಪಿಐ ಮಾದವರೆಡ್ಡಿ, ಡಿವೈಎಸ್ಪಿ ಮಂಜುನಾಥ್, ಬಿಇಒ ಹನುಮಂತರಾಯಪ್ಪ, ಅಕ್ಷರ ದಾಸೋಹ ಚಿತ್ತಯ್ಯ, ಗ್ರಾಮೀಣ ಕುಡಿವ ನೀರು ಅಧಿಕಾರಿ ಲೋಕೇಶ್ವರ್, ಬೆಸ್ಕಾಂ ಜಗದೀಶ್‌, ಪಿ.ಟಿ,ಗೋವಿಂದಯ್ಯ ಇತರರಿದ್ದರು.