ತ್ಯಾಜ್ಯ ನೀರು ನದಿಗಳಿಗೆ ತಡೆಯಲುಸಿಎಂಗೆ ನರೇಂದ್ರ ಸ್ವಾಮಿ ಮನವಿ

| Published : Nov 20 2025, 12:30 AM IST

ತ್ಯಾಜ್ಯ ನೀರು ನದಿಗಳಿಗೆ ತಡೆಯಲುಸಿಎಂಗೆ ನರೇಂದ್ರ ಸ್ವಾಮಿ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಬಹುತೇಕ ಜಿಲ್ಲೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಕಾರಣ ಕೊಳಚೆ ನೀರು ನದಿಗಳಿಗೆ ಸೇರುತ್ತಿವೆ. ಅದನ್ನು ತಡೆಯಲು ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಯೋಜನೆ ರೂಪಿಸಲು ಸೂಚನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಹುತೇಕ ಜಿಲ್ಲೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಕಾರಣ ಕೊಳಚೆ ನೀರು ನದಿಗಳಿಗೆ ಸೇರುತ್ತಿವೆ. ಅದನ್ನು ತಡೆಯಲು ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಯೋಜನೆ ರೂಪಿಸಲು ಸೂಚನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.

ಅರಮನೆ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರಸ್ವಾಮಿ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ತ್ಯಾಜ್ಯ ನೀರು ಸಂಸ್ಕರಣೆಯಾಗದೆ ಜಲಮೂಲಗಳಿಗೆ ಬಿಡಲಾಗುತ್ತಿದೆ. ಅದರಿಂದ ನದಿಗಳು ಕಲುಷಿತವಾಗುತ್ತಿದೆ. ಅದನ್ನು ತಡೆಯಲು ಸ್ಥಳೀಯ ಸಂಸ್ಥೆಗಳು ಕೆಲಸ ಮಾಡಬೇಕು. ಅದಕ್ಕಾಗಿ ಮುಖ್ಯಮಂತ್ರಿ ಅವರು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಬೇಕು. ಇನ್ನು ಜಲ ಮಾಲಿನ್ಯ ತಡೆಯಲು ಮತ್ತು ಪತ್ತೆ ಹಚ್ಚಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನದಿ ನೀರು ಮಾಪನ ಕೇಂದ್ರಗಳನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತ್ಯಾಜ್ಯದಿಂದ ರಸ್ತೆ ನಿರ್ಮಾಣ ಮಾಡಲಾಗಿದೆ. ಆ ಮಾದರಿಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಿದರೆ, ತ್ಯಾಜ್ಯ ಮರುಬಳಕೆ ಮಾಡಿ, ತ್ಯಾಜ್ಯ ಸಮಸ್ಯೆ ನಿವಾರಿಸಬಹುದಾಗಿದೆ. ಹಾಗೆಯೇ, ದಾವಣಗೆರೆಯಲ್ಲಿ ಗೃಹ ಬಳಕೆ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿ, ಸಂಸ್ಕರಿಸಲಾಗುತ್ತಿದೆ. ಈ ಕ್ರಮಗಳು ರಾಜ್ಯಕ್ಕೆ ಮಾದರಿಯಾಗಬೇಕು. ತ್ಯಾಜ್ಯವನ್ನು ಆಯಾ ಪ್ರದೇಶದಲ್ಲಿಯೇ ಸಂಸ್ಕರಿಸುವಂತಾಗಬೇಕು. ತ್ಯಾಜ್ಯ ಮರುಬಳಕೆ ಕುರಿತು ವರ್ತುಲ ಅರ್ಥ ವ್ಯವಸ್ಥೆ ಮತ್ತು ಸುಸ್ಥಿರತೆ ಬಗ್ಗೆ ತಜ್ಞರು ನೀಡಿರುವ ಸಲಹೆಯನ್ನಾಧರಿಸಿ ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

14 ಕಡೆ ಕಾರ್ಯಕ್ರಮ:

ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಗೆ ಕಾರಣರಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸ್ಮರಿಸಲು ರಾಜ್ಯದ 25 ಜಿಲ್ಲೆಗಳನ್ನು ಒಳಗೊಂಡು 14 ಕಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಂದಿರಾ ಗಾಂಧಿ ಅವರ ಜನ್ಮದಿನದ ಅಂಗವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೊಳಗೊಂಡು ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭ ಮಾಡಲಾಗುತ್ತಿದೆ ಎಂದರು.

ಇಂದಿರಾ ಗಾಂಧಿ ಅವರು ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹಲವು ಕಾಯ್ದೆಗಳನ್ನು ಜಾರಿಗೆ ತಂದರು. 1972ರಲ್ಲಿ ರಾಷ್ಟ್ರೀಯ ಪರಿಸರ ಯೋಜನೆ ಮತ್ತು ಸಮನ್ವಯ ಸಮಿತಿ ರಚಿಸಿದರು. ಅದೇ ವರ್ಷ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ಪ್ರಭೇದಗಳನ್ನು ರಕ್ಷಿಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972, ಹುಲಿಗಳ ಸಂರಕ್ಷಣೆಗೆ 1973ರಲ್ಲಿ ಪ್ರಾಜೆಕ್ಟ್‌ ಟೈಗರ್‌ ಯೋಜನೆ ರೂಪಿಸಿದರು, 1974ರಲ್ಲಿ ಜಲಮಾಲಿನ್ಯ ನಿಯಂತ್ರಣ ಕಾಯ್ದೆ ಹಾಗೂ ಅದೇ ವರ್ಷ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿದರು.1981ರಲ್ಲಿ ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ ಜಾರಿಗೆ ತಂದರು. ಪರಿಸರ ಸಂರಕ್ಷಣೆಗೆ ಇಂದಿರಾ ಗಾಂಧಿ ಅವರು ನೀಡಿರುವ ಕೊಡುಗೆಯನ್ನು ಸುವರ್ಣ ಮಹೋತ್ಸವದ ವೇಳೆ ಜನರಿಗೆ ತಿಳಿಸಲಾಗುತ್ತಿದೆ ಎಂದು ಹೇಳಿದರು.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು 1986ರಲ್ಲಿ ಪರಿಸರ ಸಂರಕ್ಷಣೆ ಕಾಯ್ದೆ, 1989ರಲ್ಲಿ ರಾಷ್ಟ್ರೀಯ ಅರಣ್ಯ ನೀತಿ ಜಾರಿಗೆ ತಂದರು. 2005ರಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಒತ್ತಾಸೆಯಂತೆ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದಲ್ಲಿ ಅರಣ್ಯ ಹಕ್ಕು ಕಾಯ್ದೆ ಮತ್ತು 2011ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಸ್ಥಾಪನೆ ಮಾಡಲಾಯಿತು. ಇವೆಲ್ಲವನ್ನು ನಾವು ಸ್ಮರಿಸಬೇಕು ಎಂದರು.

ಅದರ ಜತೆ ಕೆರೆ ಸಂರಕ್ಷಣೆ, ಅರಣ್ಯ ವೃದ್ಧಿ, ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಾಣದಲ್ಲಿ ಸಾಧನೆಗೈದ ವ್ಯಕ್ತಿ, ಸಂಸ್ಥೆ ಮತ್ತು ಜಿಲ್ಲಾಡಳಿತಕ್ಕೆ ರಾಜ್ಯ ಮಟ್ಟದ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ, ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ವಿತರಿಸಲಾಗಿದೆ. ಹಾಗೆಯೇ, ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲೂ ಹಲವು ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಕುರಿತು ಚಿತ್ರಕಲಾ ಸ್ಪರ್ಧೆ, ಪರಿಸರ ಬಗ್ಗೆ ರೀಲ್ಸ್‌ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಎಂದು ವಿವರಿಸಿದರು.