ಕೇರಳದಲ್ಲಿನ ಪ್ರಕೃತಿ ವಿಕೋಪ: ಸಂಡೂರಿಗರಲ್ಲಿ ಹೆಚ್ಚಿದ ಆತಂಕ

| Published : Aug 02 2024, 12:48 AM IST

ಕೇರಳದಲ್ಲಿನ ಪ್ರಕೃತಿ ವಿಕೋಪ: ಸಂಡೂರಿಗರಲ್ಲಿ ಹೆಚ್ಚಿದ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ಒಡಲಲ್ಲಿ ಕಬ್ಬಿಣ, ಮ್ಯಾಂಗನೀಸ್ ಅದಿರು ಹೊಂದಿರುವ ಇಲ್ಲಿನ ಬೆಟ್ಟಗಳು ಅದಿರಿನಂತೆ ಜೀವವೈವಿಧ್ಯಕ್ಕೂ ಹೆಸರಾಗಿವೆ.

ವಿ.ಎಂ. ನಾಗಭೂಷಣ

ಸಂಡೂರು: ಕೇರಳದ ವಯನಾಡ್, ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿ ಹಾಗೂ ಈ ಹಿಂದೆ ಕೊಡಗಿನಲ್ಲಿ ಉಂಟಾಗಿದ್ದ ಗುಡ್ಡ ಕುಸಿತ ಮತ್ತು ಅದರಿಂದ ಉಂಟಾದ ಪರಿಣಾಮಗಳು ಇದೀಗ ಸಂಡೂರು ಭಾಗದ ಜನರಲ್ಲಿ ಆತಂಕ ಮೂಡಿಸಿದೆ.

ತನ್ನ ಒಡಲಲ್ಲಿ ಕಬ್ಬಿಣ, ಮ್ಯಾಂಗನೀಸ್ ಅದಿರು ಹೊಂದಿರುವ ಇಲ್ಲಿನ ಬೆಟ್ಟಗಳು ಅದಿರಿನಂತೆ ಜೀವವೈವಿಧ್ಯಕ್ಕೂ ಹೆಸರಾಗಿವೆ. ಇಲ್ಲಿನ ರಮಣೀಯ ತಾಣಗಳು ನೋಡುಗರನ್ನು ಆಕರ್ಷಿಸುತ್ತಿವೆ. ಗಣಿಗಾರಿಕೆ, ಅರಣ್ಯ ನಾಶ ಮುಂತಾದ ಕಾರಣಗಳಿಂದ ಗುಡ್ಡಬೆಟ್ಟಗಳು ಕುಸಿಯಬಹುದೆಂಬ ಆತಂಕವನ್ನು ಇಲ್ಲಿನ ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಕೆಲವರು ಕೈಗಾರಿಕೆಗಳ ಅಭಿವೃದ್ಧಿ ಮುಂತಾದ ಕಾರಣಗಳಿಗೆ ಗಣಿಗಾರಿಕೆ ಅಗತ್ಯ ಎಂದರೆ, ಕೆಲವರು ಗಣಿಗಾರಿಕೆ ಬೇಕು. ಆದರೆ, ಇಲ್ಲಿನ ಅಗತ್ಯಕ್ಕೆ ತಕ್ಕಷ್ಟು ಗಣಿಗಾರಿಕೆ ನಡೆಯಬೇಕಿದೆ. ಅಗತ್ಯಕ್ಕಿಂತ ಹೆಚ್ಚು ಅದಿರು ತೆಗೆಯುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿನ ಗುಡ್ಡಗಳಲ್ಲಿನ ಮಣ್ಣು ಮೃದುವಾಗಿದ್ದು, ವಿವಿಧ ಕಾರಣಗಳಿಂದಾಗಿ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಿದೆ. ಇಲ್ಲಿನ ಅರಣ್ಯ ನಾಶವಾದರೆ ಇಲ್ಲಿನ ಜನಜೀವನ, ಜೀವ ವೈವಿಧ್ಯ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಕೇರಳದ ವಯನಾಡ್ ಮತ್ತಿತರ ಕಡೆಗಳಲ್ಲಿ ನಡೆದ ಗುಡ್ಡ ಕುಸಿತದಂತಹ ಘಟನೆಗಳು ಸಂಡೂರು ಭಾಗದಲ್ಲಿಯೂ ಸಂಭವಿಸಬಹುದಾಗಿದೆ ಎಂಬ ಅಭಿಪ್ರಾಯ ಹಲವರದ್ದು.

ಗುಡ್ಡ ಕುಸಿತದಂತಹ ದುರ್ಘಟನೆಗಳು ಈ ಭಾಗದಲ್ಲಿ ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲಿನ ಸುಂದರ ಪರಿಸರವನ್ನು ಸಂರಕ್ಷಿಸಿ, ಮುಂದಿನ ಜನಾಂಗಕ್ಕೂ ಅದನ್ನು ಮುಂದುವರೆಸಬೇಕಿದೆ. ಪರಿಸರ ಸಂರಕ್ಷಣೆಗಾಗಿ ಅಗತ್ಯ ಹೋರಾಟಕ್ಕೂ ಒಟ್ಟಾಗಿ ಶ್ರಮಿಸಬೇಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈಗಾಗಲೇ ಜನ ಸಂಗ್ರಾಮ ಪರಿಷತ್, ಸಮಾಜ ಪರಿವರ್ತನಾ ಸಮುದಾಯ, ರೈತ ಸಂಘ ಮುಂತಾದ ಸಂಘಟನೆಗಳು ಇಲ್ಲಿನ ಪರಿಸರ ಸಂರಕ್ಷಣೆಗಾಗಿ ವಿವಿಧ ರೀತಿಯ ಹೋರಾಟ ಹಮ್ಮಿಕೊಂಡಿವೆ. ರಾಜ್ಯದ ವಿವಿಧೆಡೆಯ ಪರಿಸರವಾದಿಗಳು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಸರ್ಕಾರವೂ ಈ ಭಾಗದಲ್ಲಿನ ಸುಂದರ ಪರಿಸರ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಪರಿಸರವಾದಿಗಳ ಒತ್ತಾಯವಾಗಿದೆ.

ಕೋಟ್:

ಕೇರಳದ ವಯನಾಡ್, ಕೊಡಗು, ಉತ್ತರ ಕನ್ನಡದ ಶಿರೂರು ಬಳಿಯಲ್ಲಿನ ಗುಡ್ಡ ಕುಸಿತ ಪ್ರಕರಣಗಳು ಸಂಡೂರು ಭಾಗದ ಜನರಿಗೂ ಎಚ್ಚರಿಕೆಯ ಗಂಟೆಯಾಗಿದೆ. ಸಂಡೂರು ತಾಲೂಕಿನ ವಿವಿಧ ಗ್ರಾಮಗಳ ಜನತೆ ಗುಡ್ಡ ಬೆಟ್ಟಗಳ ಕೆಳಗೆ, ಕಣಿವೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಪರಿಸರ ನಾಶವಾದರೆ ನೈಸರ್ಗಿಕ ವಿಕೋಪಗಳ ಪರಿಣಾಮವನ್ನು ಜನತೆ ಎದುರಿಸಬೇಕಾಗುತ್ತದೆ. ಇಲ್ಲಿನ ಪರಿಸರ ಸಂರಕ್ಷಣೆಯ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

-ಶ್ರೀಶೈಲ ಆಲ್ದಳ್ಳಿ, ಜನ ಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಉಪಾಧ್ಯಕ್ಷ

೧ಎಸ್ಎನ್.ಡಿ20

ಸಂಡೂರು ಸುತ್ತಮುತ್ತಲಿನ ಸುಂದರ ಪರಿಸರ